ನಿವೃತ್ತ ಚಾಲಕ ಹಾಗೂ ನಿರ್ವಾಹಕರನ್ನು ತಾತ್ಕಾಲಿಕ ಒಪ್ಪಂದದ ಆಧಾರದ ಮೇಲೆ ನಿಯೋಜನೆ

ಕಲಬುರಗಿ.ಏ.08:ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿ ಕಳೆದ ಎರಡು ವರ್ಷಗಳಲ್ಲಿ ನಿವೃತ್ತಿ ಹೊಂದಿ ವಯೋಮಿತಿ 62 ವರ್ಷದೊಳಗಿನ ಚಾಲಕ ಹಾಗೂ ನಿರ್ವಾಹಕರನ್ನು ತಾತ್ಕಾಲಿಕವಾಗಿ ಸಂಸ್ಥೆಯಲ್ಲಿ ಒಪ್ಪಂದದ ಆಧಾರದ ಮೇಲೆ ಈ ಕೆಳಕಂಡ ಷರತ್ತು ಹಾಗೂ ನಿಬಂಧನೆಗೊಳಪಟ್ಟು ನಿಯೋಜಿಸಲಾಗುತ್ತಿದೆ ಎಂದು ಕಲಬುರಗಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೂರ್ಮಾರಾವ್ ಎಂ. ಅವರು ತಿಳಿಸಿದ್ದಾರೆ.

   ನಿವೃತ್ತ ನೌಕರರನ್ನು ಅವರು ನಿವೃತ್ತಿ ಹೊಂದಿದ ವಿಭಾಗ ಅಥವಾ ವಾಸಸ್ಥಳಕ್ಕೆ ಹತ್ತಿರದ ವಿಭಾಗಗಳಲ್ಲಿ ನಿಯೋಜಿಸಲಾಗುತ್ತದೆ. ಈ ಕೆಳಕಂಡ ಷರತ್ತುಗಳನ್ನು ಒಪ್ಪಿ ಕರ್ತವ್ಯ ನಿರ್ವಹಿಸಲು ಆಸಕ್ತಿಯಿರುವ ನಿವೃತ್ತ ಚಾಲನಾ ಸಿಬ್ಬಂದಿಗಳು ತಾವು ನಿವೃತ್ತಿ ಹೊಂದಿದ ವಿಭಾಗದಲ್ಲಿ ಕೂಡಲೇ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಬಹುದಾಗಿದೆ. 

ಷರತ್ತು ಮತ್ತು ನಿಬಂಧನೆಗಳು ಇಂತಿವೆ. ದೈಹಿಕವಾಗಿ ಚಾಲನಾ / ನಿರ್ವಾಹಕ ವೃತ್ತಿ ಮಾಡಲು ಸಮರ್ಥರಿರುವ ಬಗ್ಗೆ ಸಂಸ್ಥೆಯಲ್ಲಿ ನಿಗದಿಪಡಿಸಿರುವ ದೈಹಿಕ, ದೃಷ್ಟಿ ಸಾಮಥ್ರ್ಯ ಪ್ರಮಾಣಪತ್ರ ಹಾಗೂ ಕೋವಿಡ್-19 ನೆಗೆಟಿವ್ ವರದಿ ಕುರಿತು ಜಿಲ್ಲಾ ವೈದ್ಯಾಧಿಕಾರಿಗಳಿಂದ ಪ್ರಮಾಣಪತ್ರ ಪಡೆಯಬೇಕು. ಪ್ರಸ್ತುತ ಚಾಲ್ತಿಯಲ್ಲಿರುವ ಭಾರಿ ವಾಹನ / ನಿರ್ವಾಹಕ ಪರವಾನಗಿ ಹೊಂದಿರುವುದು ಕಡ್ಡಾಯವಾಗಿದೆ. ಪ್ರತಿ ದಿನದ ಕರ್ತವ್ಯಕ್ಕೆ ಚಾಲಕರಿಗೆ 800 ರೂ. ಹಾಗೂ ನಿರ್ವಾಹಕರಿಗೆ 700 ರೂ.ಗಳಂತೆ ಗೌರವ ಧನ ನೀಡಲಾಗುವುದು. ಈ ಸಿಬ್ಬಂದಿಗಳಿಗೆ ವಾರದ ರಜೆ ಹೊರತುಪಡಿಸಿ ಬೇರೆ ಯಾವುದೇ ರಜೆ ಸೌಲಭ್ಯಗಳಿಗೆ ಅರ್ಹರಿರುವುದಿಲ್ಲ. ಒಪ್ಪಂದದ ಅವಧಿಯನ್ನು ಯಾವುದೇ ಹೆಚ್ಚುವರಿ ಆರ್ಥಿಕ/ಸೇವಾ ಸೌಲಭ್ಯಗಳಿಗೆ ಪರಿಗಣಿಸುವುದಿಲ್ಲ.

ಈಗಾಗಲೇ ಮುಷ್ಕರದಲ್ಲಿ ಪಾಲ್ಗೊಂಡಿರುವ ಈ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳು ಈ ಮುಷ್ಕರವನ್ನು ಕೈ ಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕೆಂದು ಸಂಸ್ಥೆಯ ಸಿಬ್ಬಂದಿಗಳಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಮನವಿ ಮಾಡಿದ್ದಾರೆ.