ಅಥಣಿ :ಸೆ.28: ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾದ ಶಿಕ್ಷಕನಿಗೆ ನಿವೃತ್ತಿಯ ನಂತರ ಆ ಶಿಕ್ಷಕನಿಗೆ ಪಿಂಚಣಿ ಹಣ ಬಾರದ ಹಿನ್ನಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಎದುರು ಕಣ್ಣೀರುಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸುದೀರ್ಘ 38 ವರ್ಷಗಳ ಕಾಲ ಶಿಕ್ಷಕನಾಗಿ ಸೇವೆ ಸಲ್ಲಿಸಿ ಕಳೆದ ಮೇ 31 ರಂದು ನಿವೃತ್ತಿಯಾದ ಜಿನ್ನೆಸಾಬ ಹಸನಸಾಬ ಶೇಖ್ ಅವರ ಕಥೆ ಇದು…
ಕ್ಷೇತ್ರ ಶಿಕ್ಷಣಾಧಿಕಾರಿಯ ವಿಳಂಬ ಧೋರಣೆಯಿಂದ ದೊರೆಯಬೇಕಾದ ನಿವೃತ್ತಿಯಾದರೂ ಕಳೆದ ನಾಲ್ಕು ತಿಂಗಳಿನಿಂದ ಪಿಂಚಣಿ ದೊರೆಯುತ್ತಿಲ್ಲ ಎಂದು ಅಥಣಿ ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಎದುರು ನಿವೃತ್ತ ಶಿಕ್ಷಕ ಜಿನ್ನೆಸಾಬ ಹಸನಸಾಬ ಶೇಖ್ ಕಣ್ಣೀರು ಹಾಕಿ ತನ್ನ ಅಳಲನ್ನು ತೋಡಿಕೊಂಡಿದ್ದಾನೆ.
ಮೂಲತಃ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಅಹಿರಸಂಘ ಗ್ರಾಮದರಾದ ಜಿನ್ನೆಸಾಬ ಹಸನಸಾಬ ಶೇಖ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಅಲೆದಾಡಿ ಸುಸ್ತಾಗಿದ್ದಾರೆ..
ಸ್ಥಳೀಯ ಶಿಕ್ಷಣ ಇಲಾಖೆಯ ಅಧಿಕಾರಿಗಳ ಎಡವಟ್ಟಿನಿಂದ ಶಿಕ್ಷಕ ಜಿನ್ನೆಸಾಬ ಹಸನಸಾಬ ಶೇಖ್ ಅವರಿಗೆ ನಿವೃತ್ತಿ ಬಳಿಕ ಸಿಗಬೇಕಾದ ಸೇವಾ, ನಿವೃತ್ತಿ ವೇತನ ಹಾಗೂ ನಾಲ್ಕು ತಿಂಗಳಿಂದ ಪಿಂಚಣಿ ಸಿಗದೆ ನಿವೃತ್ತ ಶಿಕ್ಷಕ ಪರದಾಡುವಂತಾಗಿದೆ. ಸ್ಥಳೀಯ ಅಧಿಕಾರಿಗಳ ವಿಳಂಬ ಧೋರಣೆ ಅನುಸರಿಸಿದ ಹಿನ್ನೆಲೆ ಇವತ್ತು ಸೇವಾ ನಿವೃತ್ತ ಶಿಕ್ಷಕ ಸುದೀರ್ಘ 38 ವರ್ಷಗಳ ಸೇವೆ ಸಲ್ಲಿಸಿದರೂ ಕೂಡ ಪಿಂಚಣಿ ಭಾಗ್ಯಕ್ಕಾಗಿ ಕಚೇರಿ ಎದುರೆ ಕಣ್ಣೀರಿಡುವಂತಾಗಿದೆ.
ಈ ಕುರಿತು ಮಾಧ್ಯಮದವರ ಜೊತೆ ಮಾತನಾಡಿದ ನಿವೃತ್ತ ಶಿಕ್ಷಕ ನನ್ನ ನಿವೃತ್ತಿ ಸಮಯದ ಮುಂಚೆಯೇ ಅಧಿಕಾರಿಗಳು ಅವಶ್ಯಕ ದಾಖಲೆ ಪತ್ರಗಳನ್ನು ಮೇಲಾಧಿಕಾರಿಗಳಿಗೆ ಕಳಿಸಿಕೊಡಬೇಕಿತ್ತು, ಅವರು ಸರಿಯಾದ ಸಮಯಕ್ಕೆ ಒದಗಿಸದೇ ಇರುವುದರಿಂದ ಸದ್ಯ ನಾನು ಪಿಂಚಣಿಗಾಗಿ ಪರದಾಡಬೇಕಾಗಿದೆ, ಈ ಕುರಿತು ಅಥಣಿ ಕ್ಷೇತ್ರ ಶಿಕ್ಷಣಾಧಿಕಾರಿ ಅವರನ್ನು ಹತ್ತಾರು ಬಾರಿ ಸಂಪರ್ಕಿಸಿದರೂ ಅವರು ಹಾರಿಕೆ ಉತ್ತರ ನೀಡುತ್ತಾರೆ ಇದರಿಂದ ನನಗೆ ದಿಕ್ಕೇ ತೋಚದಂತಾಗಿ ಮಾಧ್ಯಮದವರ ಗಮನಕ್ಕೆ ತಂದಿರುವೆ ಎಂದು ಅನಿಸಿಕೆ ಹಂಚಿಕೊಂಡರು.