
ಕಲಬುರಗಿ,ಏ.01: 2014ರ ಸೆಪ್ಟೆಂಬರ್ 1ರ ನಂತರ ನಿವೃತ್ತಿಯಾದ ಇಪಿಎಫ್‍ಓ ಚಂದಾದಾರರಿಗೆ ಹೆಚ್ಚಿನ ಪಿಂಚಣಿ ನೀಡಲು ಆಧೇಶವಾಗಿದ್ದು, ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ಮೇ 3ರವರೆಗೆ ಅವಧಿ ವಿಸ್ತರಿಸಲಾಗಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ನೌಕರರ ಅಸೋಶಿಯೇಶನ್ ಕಲ್ಯಾಣ ಕರ್ನಾಟಕ ವಲಯ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಹೈಯ್ಯಾಳಕರ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೆಹಲಿಯ ಉಚ್ಛ ನ್ಯಾಯಾಲಯವು ಕಳೆದ 2022ರ ನವೆಂಬರ್ 4ರಂದು ಐತಿಹಾಸಿಕವಾUದ ಇಪಿಎಫ್ ಪಿಂಚಣಿದಾರರ ಪರವಾಗಿ ತೀರ್ಪು ನೀಡಿದೆ. ನ್ಯಾಯಾಲಯದ ತೀರ್ಪಿನಲ್ಲಿ 2014ರ ಸೆಪ್ಟೆಂಬರ್ 1ರ ಮೊದಲು ನಿವೃತ್ತಿಯಾದ ಕಾರ್ಮಿಕ ಮತ್ತು ಅಧಿಕಾರಿಗಳಿಗೆ ಹೆಚ್ಚಿನ ಪಿಂಚಣಿ ನೀಡಲು ಆದೇಶವಿದೆ. 2023ರ ಮಾರ್ಚ್ 3ರೊಳಗೆ ಇಪಿಎಫ್‍ಓ ವೆಬ್‍ಸೈಟ್‍ನಲ್ಲಿ ಜ್ವಾಯಿಂಟ್ ಆಫ್ಷನ್ ಸಲ್ಲಿಸಲು ಕಾಲಾವಕಾಶ ನೀಡಲಾಗಿತ್ತು. ಇಪಿಎಫ್‍ಓ ಅವರ ವೆಬ್‍ಸೈಟ್‍ನಲ್ಲಿ ಅರ್ಜಿ ಸಲ್ಲಿಸಲು ಕೋರಲಾಗಿತ್ತು. ಹಲವಾರು ತಾಂತ್ರಿಕ ಕಾರಣಗಳಿಂದ ಅರ್ಜಿ ಸಲ್ಲಿಸಲು ಬಹಳ ಜನರು ತೊಂದರೆಗೆ ಒಳಗಾಗಿದ್ದರಿಂದ ಪುನ: ಮೇ 3ರವರೆಗೆ ಅರ್ಜಿ ಸಲ್ಲಿಸಲು ವಿಸ್ತರಿಸಲಾಗಿದೆ ಎಂದರು.
ನೌಕರರಿಗೆ ಇಪಿಎಫ್‍ಓ ವೆಬ್‍ಸೈಟ್‍ನಲ್ಲಿ ಆನ್‍ಲೈನ್ ಮೂಲಕ 2023ರ ಮೇ 3ರೊಳಗೆ ಅರ್ಜಿ ಸಲ್ಲಿಸಬೇಕು. ಆದಾಗ್ಯೂ, ಅರ್ಜಿ ಸಲ್ಲಿಸುವಿಕೆಯಲ್ಲಿ ಇಪಿಎಫ್‍ಓ ಸ್ಕೀಮ್ 1952 ಅಡಿಯಲ್ಲಿ ಪ್ಯಾರಾ 26 ಸಬ್ ಸೆಕ್ಷನ್ (6)ರಲ್ಲಿ ಉದ್ಯೋಗಿ ಹಾಗೂ ಉದ್ಯೋಗದಾತರು ಪೂರ್ಣ ವೇತನದ ಮೇಲೆ ಶೇಕಡಾ 12ರಷ್ಟು ವಂತಿಕೆಯನ್ನು ಪಾವತಿಸುವ ಕುರಿತು ಅನುಮತಿ ಪತ್ರವನ್ನು ಅಪ್‍ಲೋಡ್ ಕೇಳಲಾಗುತ್ತಿದೆ. ಇದರಿಂದ 2014ರ ಸೆಪ್ಟೆಂಬರ್ 1ರ ನಂತರ ನಿವೃತ್ತಿ ಹೊಂದಿದ ನೌಕರರಿಗೆ ಅರ್ಜಿ ಸಲ್ಲಿಸುವಿಕೆಯಲ್ಲಿ ತಡೆಯುಂಟಾಗಿದೆ ಎಂದು ಅವರು ಹೇಳಿದರು.
ಅದರಂತೆ ನಾಲ್ಕೂ ಸಾರಿಗೆ ನಿಗಮಗಳಾದ ಕೆಕೆಆರ್‍ಟಿಸಿ, ಎನ್‍ಡಬ್ಲುಕೆಆರ್‍ಟಿಸಿ, ಬಿಎಂಟಿಸಿ, ಕೆಎಸ್‍ಆರ್‍ಟಿಸಿ ನೌಕರರಿಗೆ ಹಾಗೂ ಅಧಿಕಾರಿಗಳಿಗೆ ಅನುಕೂಲವಾಗುವಂತೆ ಪರಮಿಶನ್ ಸರ್ಟಿಫಿಕೆಟ್ ಇನ್ ಲೈನ್ ಆಫ್ 26(6) ಆಫ್ ದಿ ಎಪಿಎಫ್ ಸ್ಕೀಮ್ 1952 ಪತ್ರವನ್ನು ದೃಢೀಕರಿಸಿ ಪ್ರಾಧಿಕಾರಸ್ಥರಾದ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ನೌಕರರ ಭವಿಷ್ಯನಿಧಿ ಮಂಡಳಿಯ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರು ದೃಢೀಕರಣ ಪತ್ರ ನೀಡಲು 2023ರ ಮಾರ್ಚ್ 16ರಂದು ಪತ್ರದ ಮೂಲಕ ತಿಳಿಸಲಾಗಿದ್ದರೂ ಇಲ್ಲಿಯವರೆಗೆ ಕ್ರಮ ಕೈಗೊಂಡಿಲ್ಲ. 2023ರ ಮಾರ್ಚ್ 16ರಂದು ಕಾರ್ಮಿಕ ಆಯುಕ್ತರಿಗೆ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಮಾಹಿತಿಗಾಗಿ ಸಲ್ಲಿಸಲಾಗಿದೆ. ಮುಂಬಯಿ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್, ಮಂಗಳೂರು ರೆಫಿನರಿ ಆಂಡ್ ಪೆಟ್ರೋ ಕೆಮಿಕಲ್ಸ್, ಮಹಾರಾಷ್ಟ್ರ ಸ್ಟೇಟ್ ಎಲೆಕ್ಟ್ರಿಸಿಟಿ ಬೋರ್ಡ್‍ನ ನೌಕರರಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದರು.
ಆದ್ದರಿಂದ ಇಪಿಎಫ್‍ಓ ಚಂದಾದಾರರು ಆನ್‍ಲೈನ್ ಮೂಲಕ ಮೇ 3ರೊಳಗೆ ಇಪಿಎಫ್‍ಓ ವೆಬ್‍ಸೈಟ್‍ನಲ್ಲಿ ಅರ್ಜಿಯನ್ನು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಅಖಿಲ ಕರ್ನಾಟಕ ರಸ್ತೆ ಸಾರಿಗೆ ಮಹಾ ಮಂಡಳಿಯ ಕಾನೂನು ಸಲಹೆಗಾರ ಬಸವರಾಜ್ ಜನಕಟ್ಟಿ ಅವರ ಸಲಹೆ ಪಡೆದು ಯಾವುದೇ ರೀತಿಯಲ್ಲಿ ದೋಷ ಆಗದಂತೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ, 9740883478ಗೆ ಸಂಪರ್ಕಿಸಲು ಅವರು ಕೋರಿದರು. ಸುದ್ದಿಗೋಷ್ಠಿಯಲ್ಲಿ ಬಸವರಾಜ್ ಜನಕಟ್ಟಿ ಅವರು ಉಪಸ್ಥಿತರಿದ್ದರು.