ನಿಲ್ಲದ ಮಳೆ: ಹೆಚ್ಚಾಗುತ್ತಿದೆ ನದಿನೀರಿನ ಮಟ್ಟ

ದಾವಣಗೆರೆ.ಜು.೧೭: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ  ತುಂಗಾ ಹಾಗೂ ಭದ್ರಾ ನದಿಗೆ ನೀರು ಹೆಚ್ಚಾಗಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ತುಂಗಾಭದ್ರಾ ನದಿ ಉಕ್ಕಿ ಹರಿಯಲಾರಂಭಿಸಿದೆ. ನ್ಯಾಮತಿ, ಹೊನ್ನಾಳಿ ಹಾಗೂ ಹರಿಹರದಲ್ಲಿ ಅಪಾಯದ ಮಟ್ಟ ತಲುಪಿದ್ದು, ಜನರ ಆತಂಕ ಕ್ಷಣಕ್ಷಣಕ್ಕೂ ಜಾಸ್ತಿಯಾಗುತ್ತಿದೆ. ಈಗಾಗಲೇ ಹೊನ್ನಾಳಿ ಹಾಗೂ ಹರಿಹರ ಪಟ್ಟಣದಲ್ಲಿ ನೂರಾರು ಜನರನ್ನು ಸ್ಥಳಾಂತರ ಮಾಡಿದ್ದು, ಕಾಳಜಿ ಕೇಂದ್ರದಲ್ಲಿ ವಸತಿ ಹಾಗೂ ಊಟದ ವ್ಯವಸ್ಥೆ ಮಾಡಲಾಗಿದೆ.ಮಲೆನಾಡು ಭಾಗದಲ್ಲಿ ಕಳೆದ 10 ದಿನಗಳಿಂದ ಎಡೆಬಿಡದೇ ವರುಣ ಸುರಿದಿದ್ದಾನೆ. ಇದರಿಂದಾಗಿ  ಹರಿಹರದ ತುಂಗಭದ್ರಾ ನೀರಿನ ಮಟ್ಟ  ಏರುತ್ತಲೇ ಇದೆ. ಹರಿಹರದ ಗಂಗಾ ನಗರದ ಮನೆಗಳು ಜಲಾವೃತವಾಗಿದ್ದು, ಸ್ಥಳೀಯ ನಿವಾಸಿಗಳು ಭಯಭೀತರಾಗಿದ್ದಾರೆ.15ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದ್ದು, ಮನೆಯಲ್ಲೇ ವಸ್ತುಗಳನ್ನು ಬಿಟ್ಟು ಜನರು ಹೊರ ಬಂದಿದ್ದಾರೆ.ಪ್ರತಿ ಬಾರಿ ಮಳೆ ಬಂದು ತುಂಗಭದ್ರಾ ನೀರು ಹೆಚ್ಚಾದಾಗಲೆಲ್ಲಾ ಇದೆ ಪರಿಸ್ಥಿತಿ ಉಂಟಾಗುತ್ತಿದೆ. ಗಂಗಾ ನಗರದಲ್ಲಿ ಕಳೆದ 20 ವರ್ಷಗಳಿಂದ ವಾಸವಿರುವ ಜನರ ಗೋಳು ಮುಂದುವರಿದಿದೆ. ಸರ್ಕಾರ ಮನೆ ಕಟ್ಟಿ ಕೊಡುವುದು ಬೇಡ, ಜಾಗವಾದರೂ ನೀಡಿದರೆ ನಾವೇ ಮನೆ ಕಟ್ಟಿಕೊಳ್ಳುತ್ತೆವೆ ಎಂದು ನಿವಾಸಿಗಳು ಹೇಳುತ್ತಿದ್ದಾರೆ. ಈಗಾಗಲೇ ತಾಲ್ಲೂಕು ಆಡಳಿತದಿಂದ ಮನೆ ಮುಳುಗಡೆಯಾದ ಕುಟುಂಬಗಳ ಸ್ಥಳಾಂತರ ಕಾರ್ಯ ನಡೆದಿದೆ. ಹರಿಹರ ಪಟ್ಟಣದ ಎಪಿಎಂಸಿಯ ಗೋದಾಮಿಗೆ ಸ್ಥಳಾಂತರಿಸಿಊಟ ಹಾಗೂ ವಸತಿ ಸೌಲಭ್ಯ ನೀಡಲಾಗಿದೆ. ಸ್ಥಳದಲ್ಲೇ ನಗರಸಭೆ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ. ಈಗಾಗಲೇ ಮನೆ ಮುಳುಗಡೆಯಾದವರನ್ನು ಸ್ಥಳಾಂತರ ಮಾಡಿದ್ದೇವೆ. ನೀರಿನ ಮಟ್ಟ ಹೆಚ್ಚಾಗುತ್ತಿದೆ. ಇನ್ನೂ ಕೆಲ ಮನೆಗಳು ಮುಳುಗಡೆಯಾಗುವ ಸಾಧ್ಯತೆ ಇದೆ. ಹಾಗಾಗಿ ಎಲ್ಲರನ್ನೂ ಸ್ಥಳಾಂತರ ಮಾಡುತ್ತೇವೆ. ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿದ್ದೇವೆ.ಶೀಘ್ರದಲ್ಲೇ ಮನೆ ನೀಡುವ ಪರ್ಯಾಯ ವ್ಯವಸ್ಥೆ ಮಾಡುತ್ತೇವೆ ಎಂದು ಹರಿಹರ ನಗರಸಭೆ ಆಯುಕ್ತ ಬಸವರಾಜ್ ತಿಳಿಸಿದ್ದಾರೆ.ಸುಮಾರು 40 ಜನರನ್ನು ಕಾಳಜಿ‌ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ತಾಲೂಕಿನ ಹಲಸಬಾಳು ಗ್ರಾಮದ ಕೆಲವು ಮನೆಗಳಿಗೆ ನದಿ ನೀರುವ ನುಗ್ಗುವ ಅಪಾಯ ಇದೆ. ಮುಂಜಾಗ್ರತಾ ಕ್ರಮವಾಗಿ ಅಲ್ಲಿಯ ಶಾಲೆಯ ಕಾಳಜಿ ಕೇಂದ್ರ ತೆರೆಯಲು ತಾಲೂಕು ಆಡಳಿತ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ ಎಂದು ಹೇಳಿದರು.

ಇನ್ನು ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕಿನಲ್ಲಿ ಪರಿಸ್ಥಿತಿ ಇದಕ್ಕಿಂತ ಗಂಭೀರವಾಗಿದೆ. ಹೊನ್ನಾಳಿಯಲ್ಲಿ ಹರಿಯುವ ತುಂಗಾಭದ್ರಾ ನದಿಯ ನೀರಿನ ಮಟ್ಟ 12 ಮೀಟರ್ ಗಿಂತ ಹೆಚ್ಚಾಗಿದೆ. ಇದರಿಂದಾಗಿ ಬಾಲರಾಜ್ ಘಾಟ್ ನ 18 ಕುಟುಂಬಗಳ 102 ಮಂದಿಯನ್ನು ಸಮೀಪದ ಅಂಬೇಡ್ಕರ್ ಭವನದಲ್ಲಿ ಆರಂಭಿಸಲಾಗಿರುವ ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ.

ಪ್ರವಾಹ ಪರಿಸ್ಥಿತಿ ತಲೆದೋರಿಲ್ಲವಾದರೂ ನದಿ ನೀರು ಯಾವ ಕ್ಷಣದಲ್ಲಾದರೂ ಏರಿಕೆಯಾಗುವ ಸಾಧ್ಯತೆ ಇದೆ. ಹಾಗಾಗಿ ಇಲ್ಲಿನ‌ ನಿವಾಸಿಗಳನ್ನು ಗುರುಭವನಕ್ಕೆ ಸ್ಥಳಾಂತರಿಸಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ತಾಲೂಕಿನ ಸಾಸ್ವೆಹಳ್ಳಿ ಭಾಗದ ಸಂತ್ರಸ್ತರನ್ನು ಅಲ್ಲಿನ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಈಗಾಗಲೇ ತೆರೆಯಲಾಗಿರುವ ಕಾಳಜಿ‌ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಹೊನ್ನಾಳಿ ಶಾಸಕ ಎಂ.‌ಪಿ. ರೇಣುಕಾಚಾರ್ಯ ತಿಳಿಸಿದರು‌.

ಬಾಲರಾಜ್ ಘಾಟ್  ನ ಸುಮಾರು 23 ಕುಟುಂಬಗಳನ್ನು ಗುರುತಿಸಲಾಗಿದೆ. ಅವರಿಗೆ ಮಲ್ಲದೇವರಶೆಟ್ಟಿಹಳ್ಳಿಯಲ್ಲಿ ಸೈಟ್ ಹಂಚಿಕೆ‌‌ ಮಾಡಲಾಗುವುದು. ಬಳಿಕ ಘಾಟ್ ಪ್ರದೇಶವನ್ನು ನಿಷೇಧಿತ ಪ್ರದೇಶ ಎಂದು ಘೋಷಣೆ ಮಾಡಲಾಗುವುದು. ಈ ಸಂಬಂಧ 400 ಕೋಟಿ ರೂಪಾಯಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಡಿಪಿಆರ್ ಕೂಡ ಈಗಾಗಲೇ ಆಗಿದೆ. ಮಲ್ಲದೇವರಕಟ್ಟೆಯಲ್ಲಿ 1600 ನಿವೇಶನಗಳನ್ನು‌ ನೀಡಲು ಕ್ರಮ ತೆಗೆದುಕೊಳ್ಳಲಾಗಿದೆ. ಈಗಾಗಲೇ 2 ಸಾವಿರಕ್ಕಿಂತ ಅಧಿಕ ಅರ್ಜಿಗಳು ಬಂದಿವೆ ಎಂದು ಹೇಳಿದರು. ಈ ವೇಳೆ  ಬಾಲರಾಜ್ ಘಾಟ್ ನ ಸಂತ್ರಸ್ತರು ನಿವೇಶನ ನೀಡುವಂತೆ ಇಲ್ಲವೇ ಶಾಶ್ವತ ಪರಿಹಾರ ಒದಗಿಸಿ ಎಂದು ರೇಣುಕಾಚಾರ್ಯ ಅವರನ್ನು ಒತ್ತಾಯಿಸಿದರು.