ನಿಲ್ಲದ ಮಳೆ, ತಪ್ಪದ ಬವಣೆ ಗೋಡೆ ಕುಸಿದು ತಾಯಿ-ಮಗಳು ಸಾವು

ಬೆಂಗಳೂರು,ಜು.೧೨- ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಮುಂದಿನ ೫ ದಿನಗಳ ಕಾಲ ರಾಜ್ಯದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಆರೆಂಟ್ ಅಲರ್ಟ್ ಮತ್ತು ಉತ್ತರ ಒಳನಾಡಿಗೆ ಯೆಲ್ಲೊ ಹಾಗೂ ದಕ್ಷಿಣ ಒಳನಾಡಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಕೊಡಗು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ವರುಣನ ರುದ್ರನರ್ತನಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವು ಕಡೆಗಳಲ್ಲಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಅಪಾರ ಆಸ್ತಿಪಾಸ್ತಿ ಹಾನಿಯಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಹಾ ಮಳೆ ಮುಂದುವರೆದಿದ್ದು, ಗೋಡೆ ಕುಸಿದು ತಾಯಿ-ಮಗಳು ಮೃತಪಟ್ಟಿರುವ ದಾರುಣ ಘಟನೆ ಸಂಭವಿಸಿದೆ. ಮೃತರನ್ನು ರುಕ್ಮಿಣಿ ವಿಠ್ಠಲ್ ಮಾಚಕ ಹಾಗೂ ಶ್ರೀದೇವಿ ವಿಠ್ಠಲ್ ಮಾಚಕ ಎಂದು ಗುರುತಿಸಲಾಗಿದೆ.
ಈ ಘಟನೆ ಜಿಲ್ಲೆಯ ಹಳಿಯಾಳ ತಾಲ್ಲೂಕಿನ ಮುರ್ಕವಾಡ ಗ್ರಾಮದಲ್ಲಿ ಸಂಭವಿಸಿದ್ದು, ಭಾರಿ ಮಳೆಯಿಂದಾಗಿ ಹಠಾತ್ತನೆ ಗೋಡೆ ಕುಸಿದು ಈ ದುರಂತ ಸಂಭವಿಸಿದೆ. ಘಟನಾ ಸ್ಥಳಕ್ಕೆ ತಹಶೀಲ್ದಾರ್ ಪ್ರಕಾಶ್‌ಗಾಯಕ್ ವಾಡ್ ಹಾಗೂ ತಾಲ್ಲೂಕು ಪಂಚಾಯ್ತಿ ಅಧಿಕಾರಿ ಪರಶುರಾಮ ಗಸ್ತಿ ಹಾಗೂ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಹಾವೇರಿ ಜಿಲ್ಲೆಯಲ್ಲೂ ವರ್ಷಧಾರೆಯಾಗುತ್ತಿದ್ದು, ಹಲವು ಭಾಗಗಳಲ್ಲಿ ಮನೆಗಳ ಮೇಲ್ಛಾವಣಿಗಳು ಕುಸಿದು ಬಿದ್ದಿವೆ. ರಟ್ಟಿಹಳ್ಳಿ ತಾಲ್ಲೂಕಿನ ಚಿಕ್ಕಕಬ್ಬಾರ, ಹಿರೇಕಬ್ಬಾರ, ಅಣಜಿಗ್ರಾಮ, ಗುಡ್ಡದ ಮಾದಾಪುರದಲ್ಲಿ ಮನೆಗಳ ಮೇಲ್ಛಾವಣಿ, ಗೋಡೆಗಳು ಕುಸಿದು ಬಿದ್ದಿವೆ. ಘಟನಾ ಸ್ಥಳಕ್ಕೆ ತಹಶೀಲ್ದಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.
ಭಾರಿ ಮಳೆಯಿಂದಾಗಿ ಚಿಕ್ಕಮಗಳೂರು ಬಸ್ ನಿಲ್ದಾಣದ ಕಾಂಪೌಂಡ್ ಕುಸಿದು ಬಿದ್ದು, ೨ ಕಾರುಗಳು ಜಖಂಗೊಂಡಿವೆ. ದಕ್ಷಿಣ ಕನ್ನಡದ ಪುತ್ತೂರಿನ ಹೆಬ್ಬಾರ ಬೈಲ್‌ನಲ್ಲಿ ಭೂಕುಸಿತ ಸಂಭವಿಸಿ ೨ ಮನೆಗಳು ಅಪಾಯದ ಅಂಚಿನಲ್ಲಿವೆ. ಮನೆಗಳು ಕುಸಿದು ಬೀಳುವ ಭೀತಿ ಎದುರಾಗಿದೆ ಎಂದು ಮನೆ ಮಾಲೀಕ ಜಾರ್ಜ್ ಅಳಲು ತೋಡಿಕೊಂಡಿದ್ದಾರೆ.
ಕೊಡಗಿನಲ್ಲಿ ಹಟ್ಟಿಹೊಳೆ ಉಕ್ಕಿ ಹರಿಯುತ್ತಿದ್ದು, ಮುಕ್ಕೋಡ್ಲು-ಹೆಮ್ಮತ್ತಾಳು ಸಂಪರ್ಕ ಕಡಿತವಾಗಿದೆ. ಗ್ರಾಮಕ್ಕೆ ಸಂಪರ್ಕವಿಲ್ಲದೆ ೩೦ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಪ್ರವಾಹಕ್ಕೆ ಸಿಲುಕಿ ಒದ್ದಾಡುತ್ತಿದ್ದ ನಾಯಿಯನ್ನು ಯುವಕರ ತಂಡ ರಕ್ಷಿಸುವಲ್ಲಿ ಯಶಸ್ವಿಯಾಗಿದೆ.
ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಜಲಸ್ಫೋಟ ಸಂಭವಿಸಿ ಒಂದು ಎಕರೆಯಲ್ಲಿ ಬೆಳೆಯಲಾಗಿದ್ದ ಕಾಫಿ ಮತ್ತು ಅಡಿಕೆ ನಾಶವಾಗಿದೆ. ಚಿಕ್ಕಮಗಳೂರು ತಾಲ್ಲೂಕಿನ ಅರೆನೂರು ಗ್ರಾಮದಲ್ಲಿ ಧಾರಾಕಾರ ಮಳೆಗೆ ಒಂದು ಎಕರೆ ತೋಟ ಸಂಪೂರ್ಣ ನಾಶವಾಗಿದೆ. ಬೃಹತ್ ಬಂಡೆಗಳು, ಬೃಹತ್ ಮರಗಳು ಉರುಳಿ ಬಿದ್ದಿವೆ. ಈ ಜಲಸ್ಫೋಟದ ಹೊಡೆತಕ್ಕೆ ಕುಟುಂಬ ತತ್ತರಿಸಿ ಹೋಗಿದೆ. ಘಟನಾ ಸ್ಥಳಕ್ಕೆ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಭೇಟಿ ನೀಡಿ ನಷ್ಟದ ಅಂದಾಜನ್ನು ಅವಲೋಕಿಸಿ ಸಂತ್ರಸ್ಥರ ಸಮಸ್ಯೆಯನ್ನು ಸರ್ಕಾರದದ ಗಮನಕ್ಕೆ ತಂದು ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದ್ದಾರೆ.
ಸತತ ಮಳೆಗೆ ಜಿಲ್ಲೆಯ ಹೊರ ವಲಯದ ನಲ್ಲೂರು ಕೆರೆ ಕೋಡಿ ಬಿದ್ದಿದೆ. ಇದರಿಂದಾಗಿ ರೈತರಲ್ಲಿ ಆತಂಕ ಹೆಚ್ಚಾಗಿದ್ದು, ಹೊಲ-ಗದ್ದೆಗಳಿಗೆ ನೀರು ನುಗ್ಗುವ ಭೀತಿ ಎದುರಾಗಿದೆ.
ಬೆಳಗಾವಿ ಜಿಲ್ಲೆಯಾದ್ಯಂತ ಭಾರಿ ಮಳೆಯಿಂದಾಗಿ ಜಮೀನುಗಳಿಗೆ ನೀರು ನುಗ್ಗಿ ೨೦೦ ಎಕರೆಗೂ ಹೆಚ್ಚು ಪ್ರದೇಶಗಳಲ್ಲಿ ಬೆಳೆ ನಾಶವಾಗಿದೆ. ಮಳೆಯಿಂದಾಗಿ ಬೆಳಗಾವಿ ನಗರದ ಹೊರ ವಲಯದಲ್ಲಿ ಹರಿದು ಹೋಗುವ ಬಳ್ಳಾರಿ ನಾಲಾ ನೀರು ಜಮೀನಿಗೆ ನುಗ್ಗಿದ್ದು, ಭತ್ತ, ಜೋಳ ಸೇರಿದಂತೆ ತರಕಾರಿ ಬೆಳೆಗಳು ನೀರಿನಲ್ಲಿ ಮುಳುಗಿವೆ.
ರಾಜ್ಯದ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಕಳೆದ ೨೪ ತಾಸುಗಳಲ್ಲ್ಲಿ ೮ ಪ್ರದೇಶಗಳಲ್ಲಿ ೧೦೦ ಮಿ.ಮೀ.ಗೂ ಹೆಚ್ಚು ಮಳೆಯಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಕ್ಯಾಸಲ್‌ರಾಕ್ ಪ್ರದೇಶದಲ್ಲಿ ೧೫೨.೪ ಮಿ.ಮೀ, ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಮಣ್ಯ ವ್ಯಾಪ್ತಿಯಲ್ಲಿ ೧೫೯.೮ ಮಿ.ಮೀ, ಉಡುಪಿ ಜಿಲ್ಲೆಯ ಕೋಟಾ ವ್ಯಾಪ್ತಿಯಲ್ಲಿ ೧೧೮.೮ ಮಿ.ಮೀ ಜಿಲ್ಲೆಯ ೭ ಪ್ರದೇಶಗಳಲ್ಲಿ ೧೦೦ ಮಿ.ಮೀ.ವರೆಗೆ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲಯ ಪೆಣಂಬೂರಿನಲ್ಲಿ ೮೦.೪ ಮಿ.ಮೀ, ಮಂಗಳೂರಿನಲ್ಲಿ ೮೭.೫, ಸುಳ್ಯದಲ್ಲಿ ೭೫.೬, ಕೊಮಟಾ ತಾಲ್ಲೂಕಿನ ಗೋಕರ್ಣದಲ್ಲಿ ೮೦.೩ ಮಿ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇಬ್ಬರ ಶವ ಪತ್ತೆ
ದಕ್ಷಿಣ ಕನ್ನಡ ಜಿಲ್ಲೆಯ ಕಡಬಾ ತಾಲ್ಲೂಕಿನ ಕಾಣಿಯೂರಿನಲ್ಲಿ ಹಳ್ಳಕ್ಕೆ ಬಿದ್ದು, ಕಾರು ಕೊಚ್ಚಿ ಹೋಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ಯುವಕರ ಶವ ಇಂದು ಬೆಳಿಗ್ಗೆ ಪತ್ತೆಯಾಗಿದೆ. ಕಾರು ಬಿದ್ದ ೨೫೦ ಮೀ. ದೂರದಲ್ಲಿ ಇಬ್ಬರ ಶವ ದೊರೆತಿದೆ.
ಕಡಬಾ ತಾಲ್ಲೂಕಿನ ಕಾಣಿಯೂರು ಬಳಿ ಮಂಜೇಶ್ವರ-ಸುಬ್ರಮಣ್ಯ ರಾಜ್ಯ ಹೆದ್ದಾರಿಯಲ್ಲಿ ಶನಿವಾರ ತಡರಾತ್ರಿ ಇಬ್ಬರು ಯುವಕರು ವೇಗವಾಗಿ ಕಾರಿನಲ್ಲಿ ಹೋಗುತ್ತಿದ್ದ ವೇಳೆ ಕಾರು ಆಕಸ್ಮಿಕವಾಗಿ ಹೊಳೆಗೆ ಬಿದ್ದು, ಕೊಚ್ಚಿಕೊಂಡು ಹೋಗಿದ್ದರು.

ಪುತ್ತೂರಿನಿಂದ ಕಾಣಿಯೂರು ಕಡೆಗೆ ಇಬ್ಬರು ಯುವಕರು ಮಾರುತಿ ಕಾರಿನಲ್ಲಿ ಹೋಗುತ್ತಿದ್ದ ವೇಳೆ ಕಾಣಿಯೂರು ಹಳ್ಳಕ್ಕೆ ಪಲ್ಟಿಯಾಗಿ ಬಿದ್ದಿತ್ತು. ಈ ಘಟನೆ ಭಾನುವಾರ ಬೆಳಿಗ್ಗೆ ಕಂಡು ಬಂದಿತು.
ಹಿಂದಿನ ದಿನ ರಾತ್ರಿ ವೇಗವಾಗಿ ಬಂದ ಕಾರು ರೇಲಿಂಗ್‌ಗೆ ಡಿಕ್ಕಿ ಹೊಡೆದು ನಂತರ ಹೊಳೆಯಲ್ಲಿ ಬಿದ್ದಿರುವುದು ಸಮೀಪದ ಸಿಸಿ ಟಿವಿ ದೃಶ್ಯದಲ್ಲಿ ಕಂಡು ಬಂದಿದೆ. ಸತತ ಮೂರು ದಿನಗಳ ಕಾಲ ಶೋಧಕಾರ್ಯ ಆರಂಭಿಸಿದ ನಂತರ ಕುಂಡಡ್ಕ ನಿವಾಸಿ ಧನುಷ್ (೨೬) ಹಾಗೂ ಮಂಜೇಶ್ವರ ನಿವಾಸಿ ಧನುಷ್ (೨೧) ಅವರ ಶವ ಪತ್ತೆಯಾಗಿದೆ.
ಅಗ್ನಿಶಾಮಕ ದಳ, ರಾಜ್ಯವಿಪತ್ತು ನಿರ್ವಹಣಾ ಸಿಬ್ಬಂದಿ, ಸ್ಥಳೀಯ ಪೊಲೀಸರು ಸತತ ಹುಡುಕಾಟ ನಡೆಸಿದ ನಂತರ ಇಂದು ಬೆಳಿಗ್ಗೆ ಶವ ಪತ್ತೆಯಾಗಿದೆ.