ನಿಲ್ಲದ ಘರ್ಷಣೆ:ಮಣಿಪುರದಲ್ಲಿ ೭ ಸಾವು

ಗುವಾಹಟಿ,ಆ.೬- ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಹೊಸದಾಗಿ ನಡೆದ ಘರ್ಷಣೆಯಲ್ಲಿ ಮತ್ತೆ ಕನಿಷ್ಠ ೭ ಮಂದಿ ಸಾವನ್ನಪ್ಪಿದ್ದು ೧೬ ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.ಇದರ ಜೊತೆಗೆ ೧೫ ಮನೆಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ದಾಂಧಲೆ ನಡೆಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು ಬಾರಿ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ.ಮಣಿಪುರದ ಜನಾಂಗೀಯ ಕಲಹದಲ್ಲಿ ಎರಡು ಗುಂಪುಗಳ ನಡುವೆ ಭೀಕರ ದಾಳಿ ಮತ್ತು ಪ್ರತಿದಾಳಿ ನಡೆದ ಹಿನ್ನೆಲೆಯಲ್ಲಿ ಗುಂಡು ಹಾರಿಸಿದ ಪರಿಣಾಮ ಈ ದುರ್ಘಟನೆ ನಡೆದಿದೆ.ಗುಂಡಿನ ದಾಳಿಯ ಜೊತೆಗೆ ಗ್ರೆನೇಡ್ ದಾಳಿಯಿಂದ ಬಿಷ್ಣುಪುರದ ಕ್ವಾಕ್ಟಾ ಪ್ರದೇಶದಲ್ಲಿ ತಂದೆ ಮತ್ತು ಮಗ ಸೇರಿದಂತೆ ಮೂವರನ್ನು ಅವರ ಮನೆಯೊಳಗೆ ಮುಂಜಾನೆ ಕೂಡಿ ಹಾಕಿ ಕೊಲ್ಲಲಾಗಿದೆ.ಬಿಷ್ಣುಪುರ್ ಜಿಲ್ಲೆಯ ನರನ್‌ಸೇನಾದಲ್ಲಿರುವ ೨ನೇ ಭಾರತೀಯ ರಿಸರ್ವ್ ಬೆಟಾಲಿಯನ್ ಹೆಚ್‌ಕ್ಯುನ ಶಸ್ತ್ರಾಸ್ತ್ರ ಸಂಗ್ರಹಾಲಯದಿಂದ ಶಸ್ತ್ರಾಸ್ತ್ರ ಲೂಟಿ ಮಾಡಿ ಗುಂಡು ಹಾರಿಸಲಾಗಿದೆ ಎಂದು ಭದ್ರತಾ ಮೂಲಗಳು ಶಂಕಿಸಿದ್ದಾರೆ.ಲೂಟಿ ಮಾಡಿದ ಮೋರ್ಟಾರ್ ಬಾಂಬ್‌ಗಳ ಜೊತೆಗೆ ಶೆಲ್ ದಾಳಿಯ ಸಮಯದಲ್ಲಿ ಗ್ರೆನೇಡ್‌ಗಳು ಮತ್ತು ಜಿಎಫ್ ರೈಫಲ್‌ಗಳನ್ನು ಹೆಚ್ಚು ದೂರದವರೆಗೆ ಲಾಬ್ ಮಾಡಲು ಅಗತ್ಯವಾಗಿ ಬಳಸಲಾಗಿದೆ ಈ ಎಲ್ಲಾ ಆಯುಧಗಳನ್ನು ಶಸ್ತ್ರಾಗಾರದಿಂದ ಲೂಟಿ ಮಾಡಲಾಗಿದೆ ಎಂದು ತಿಳಿಸಲಾಗಿದೆ.ಯುಮ್ನಮ್ ಪಿಶಾಕ್ ಮೈತೇಯಿ (೬೭), ಅವರ ಮಗ ಯುಮ್ನಮ್ ಪ್ರೇಮಕುಮಾರ್ ಮೈತೇಯಿ (೩೯), ಮತ್ತು ನೆರೆಹೊರೆಯರಾದ ಯುಮ್ನಮ್ ಜಿತೇನ್ ಮೈತೇಯಿ (೪೬) ಪರಿಹಾರ ಶಿಬಿರಗಳಲ್ಲಿ ವಾಸಿಸುತ್ತಿದ್ದರು. ಹಿಂಸಾಚಾರದ ಸಂದರ್ಭದಲ್ಲಿ ಗ್ರಾಮಸ್ಥರು ಶಿಬಿರಗಳಿಗೆ ಭೇಟಿ ನೀಡಿದ ನಂತರ ಗ್ರಾಮವನ್ನು ರಕ್ಷಿಸಲು ಮರಳಿದ್ದರು ಈ ವೇಳೆ ಬೆಂಕಿ ಹಚ್ಚಿ ಹತ್ಯೆ ಮಾಡಲಾಗಿದೆ.ಚುರಾಚಂದ್‌ಪುರ ಜಿಲ್ಲೆಯಲ್ಲಿ ಬೀಳುವ ಕ್ವಾಕ್ಟಾದ ಎರಡು ನೆರೆಯ ಗ್ರಾಮಗಳಾದ ಫೌಜಾಂಗ್ ಮತ್ತು ಸಾಂಗ್‌ಡೊದಲ್ಲಿ ಪುರುಷರು ಬಂದೂಕುಗಳು, ಮಾರ್ಟರ್ ಶೆಲ್‌ಗಳು ಮತ್ತು ಗ್ರೆನೇಡ್‌ಗಳಿಂದ ಗುಂಡು ಹಾರಿಸಿದ್ದಾರೆ ಇದರಿಂದ ಇಬ್ಬರು ಸಾವನ್ನಪ್ಪಿದರು ಮತ್ತು ೧೩ ಮಂದಿ ತೀವ್ರವಾಗಿ ಗಾಯಗೊಂಡರು. ಮೃತರನ್ನು ಜಾನಿ (೩೦) ಮತ್ತು ಜಂಗ್‌ಖೋಮಾಂಗ್ (೩೪) ಎಂದು ಗುರುತಿಸಲಾಗಿದೆ.
ಬಿಷ್ಣುಪುರ್ ಜಿಲ್ಲೆಯ ತೆರಾಖೋಂಗ್‌ಸಾಂಗ್ಬಿಯಲ್ಲಿ ಏಕಕಾಲದಲ್ಲಿ ನಡೆದ ದಾಳಿಯಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಪೊಲೀಸ್ ಕಮಾಂಡೋ ಸೇರಿದಂತೆ ಮೂವರು ಗುಂಡೇಟಿನಿಂದ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಪ್ರಧಾನಿ ಪ್ರತಿಕೃತಿಗೆ ಬೆಂಕಿ
ಸುದ್ದಿ ತಿಳಿಯುತ್ತಿದ್ದಂತೆ ಕ್ವಾಕ್ಟಾ ಪ್ರದೇಶದಲ್ಲಿ ದಿನ ಬೆಳಗಾಗುವುದರೊಳಗೆ ಉದ್ವಿಗ್ನತೆ ಹೆಚ್ಚಾದಾಗ, ಮಹಿಳೆಯರ ದೊಡ್ಡ ಗುಂಪು ಯುರಿಪೋಕ್‌ನಲ್ಲಿ ಬೀದಿಗಿಳಿದು ಪ್ರತಿಭಟಿಸಿ ಆಕ್ರೋಶ ವ್ಯಕ್ತಡಿಸಿದರು.ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪ್ರತಿಕೃತಿ ದಹಿಸಿ, ಹೆಚ್ಚುತ್ತಿರುವ ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ.