ನಿಲ್ಲದ ಒಳಮೀಸಲಾತಿ ಕಿಚ್ಚು

ಬೆಂಗಳೂರು,ಮಾ.೨೮:ಬಂಜಾರ ಸಮುದಾಯದ ಒಳ ಮೀಸಲಾತಿ ವಿರೋಧಿ ಕಿಚ್ಚು ಇಂದು ಶಿವಮೊಗ್ಗ, ಬಾಗಲಕೋಟೆ ಜಿಲ್ಲೆಗಳಿಗೂ ವಿಸ್ತರಿಸಿದ್ದು, ಶಿವಮೊಗ್ಗ ತಾಲ್ಲೂಕಿನ ಕುಂಚೇನಹಳ್ಳಿ ಬಾಗಲಕೋಟೆಯ ಹಲವು ತಾಂಡಾಗಳಲ್ಲಿ ಬಂಜಾರ ಸಮುದಾಯದ ಆಕ್ರೋಶ ಸ್ಫೋಟಗೊಂಡಿದೆ. ಶಿವಮೊಗ್ಗದ ಕುಂಚೇನಹಳ್ಳಿಯಲ್ಲಿ ಅಗ್ನಿಸ್ಪರ್ಶದ ಘಟನೆಗಳು ವರದಿಯಾಗಿವೆ.
ಶಿವಮೊಗ್ಗದ ಕುಂಚೇನಹಳ್ಳಿಯಲ್ಲಿಂದು ಬಂಜಾರ ಸಮುದಾಯದವರು ಒಳ ಮೀಸಲಾತಿ ಜಾರಿ ಮಾಡದಂತೆ ಆಗ್ರಹಿಸಿ ಪ್ರತಿಬಟನೆ ನಡೆಸಿದ್ದು, ಈ ಪ್ರತಿಭಟನೆ ಸಂದರ್ಭದಲ್ಲಿ ರಸ್ತೆ ತಡೆ ನಡೆಸಿ ಹಾಗೂ ಟಯರ್‌ಗಳಿಗೆ ಬೆಂಕಿ ಹಚ್ಚಿದ್ದಾರೆ.ಶಿಕಾರಿಪುರದಲ್ಲಿ ನಿನ್ನೆ ನಡೆದ ಹಿಂಸಾಚಾರ ಮಾಸುವ ಮುನ್ನವೇ ಕುಂಚೇನಹಳ್ಳಿಯಲ್ಲಿ ಇಂದು ಪ್ರತಿಭಟನೆ ಭುಗಿಲೆದ್ದು, ಟಯರ್‌ಗೆ ಬೆಂಕಿ ಹಚ್ಚಿರುವ ಘಟನೆಗಳು ನಡೆದಿವೆ.ಸರ್ಕಾರ ನ್ಯಾಯಮೂರ್ತಿ ಸದಾಶಿವ ವರದಿ ಆಯೋಗ ಸಂಪೂರ್ಣ ಜಾರಿ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದರೂ ಬಂಜಾರ ಸಮುದಾಯದವರ ಆಕ್ರೋಶ ತಣಿದಿಲ್ಲ ಕುಂಚೇನಹಳ್ಳಿಯಲ್ಲಿ ರಸ್ತೆ ತಡೆ ನಡೆಸಿ ಧರಣಿ ಕುಳಿತಿರುವ ಪ್ರತಿಭಟನಾಕಾರರು ಟಯರ್‌ಗಳಿಗೆ ಬೆಂಕಿ ಹಚ್ಚಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.
ಕುಂಚೇನಹಳ್ಳಿಯ ಬಂಜಾರ ಸಮುದಾಯದವರು ಶಿವಮೊಗ್ಗ-ಶಿಕಾರಿಪುರ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿ ರಸ್ತೆ ಮಧ್ಯೆ ಟಯರ್‌ಗೆ ಬೆಂಕಿ ಹಚ್ಚಿ ನಡೆಸಿದ ಪ್ರತಿಭಟನೆಯಿಂದ ಹೆದ್ದಾರಿಯಲ್ಲಿ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದರು, ರಸ್ತೆಯ ಎರಡೂ ಕಡೆಗಳಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ನಿಂತವು.
ಇದರಿಂದಾಗಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರತಿಭಟನಾ ನಿರತರ ಜತೆ ಮಾತುಕತೆ ನಡೆಸಿ ಮನವೊಲಿಸಿದ ನಂತರ ಗ್ರಾಮಸ್ಥರು ಪ್ರತಿಭಟನೆ ಸ್ಥಗಿತಗೊಳಿಸಿದರು.
ಬಾಗಲಕೋಟೆ ಜಿಲ್ಲೆಯಾದ್ಯಂತ ಪ್ರತಿಭಟನೆ
ಒಳ ಮೀಸಲಾತಿ ಪ್ರಮಾಣ ಕಡಿತಗೊಳಿಸಲಾಗಿದೆ ಎಂದು ಖಂಡಿಸಿ ಇಂದು ಬಾಗಲಕೋಟ ಜಿಲ್ಲೆಯಾದ್ಯಂತ ವಿವಿಧೆಡೆ ಬಂಜಾರ ಸಮುದಾಯದವರು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ಹೊರ ಹಾಕಿದರು.ಬೀಳಗಿ ತಾಲೂಕಿನ ಸುನಗ ತಾಂಡಾ, ಬಾಗಲಕೋಟ ತಾಲೂಕಿನ ಮುಚಖಂಡಿ ತಾಂಡಾ, ಹುನಗುಂದ ತಾಲೂಕಿನ ಅಮಿನಗಡ ತಾಂಡಾ, ಕಮತಗಿ ತಾಂಡಾ, ಅಚನೂರ ತಾಂಡಾ, ನೀಲಾನಗರ ತಾಂಡಾ, ಲವಳೇಶ್ವರ ತಾಂಡಾ, ಜಡ್ರಾಮನಕುಂಟೆ, ಶಿರಗುಪ್ಪಿ ತಾಂಡಾ ಮತ್ತಿತರ ಕಡೆಗಳಲ್ಲಿ ತೀವ್ರ ಪ್ರತಿಭಟನೆಗಳು ನಡೆದವು.
ಮನೆಗಳ ಮೇಲೆ, ವಿದ್ಯುತ್ ಕಂಬಗಳ ಮೇಲೆ ಕಟ್ಟಲಾಗಿದ್ದ ಬಿಜೆಪಿ ಬಾವುಟಗಳನ್ನು ಕಿತ್ತೆಸೆದ ಪ್ರತಿಭಟನಾಕಾರರು ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಾಂಡಾಗಳ ಮುಖಂಡರು, ಬಿಜೆಪಿ ಸರ್ಕಾರ ಲಂಬಾಣಿ ಸಮುದಾಯದವರಿಗೆ ಅನ್ಯಾಯ ಮಾಡಿದೆ, ತಾಂಡಾಗಳಲ್ಲಿ ಯಾವುದೇ ಬಿಜೆಪಿ ಶಾಸಕರನ್ನು, ನಾಯಕರನ್ನು ಪ್ರವೇಶಿಸಲು ಬಿಡುವುದಿಲ್ಲ. ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.