ನಿರ್ವಹಣೆ ಕೊರತೆ, ಲಕ್ಷಾಂತರ ಮೌಲ್ಯದ ಉಪಕರಣಕ್ಕೆ ತುಕ್ಕು

ಕೋಲಾರ,ಜು,೨೧-ನಗರಸಭೆ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಹಾಗು ಸ್ವಚ್ಚತೆಗೆಂದು ಸರ್ಕಾರವು ಲಕ್ಷಾಂತರ ರೂ.ಗಳ ವೆಚ್ಚಮಾಡಿ ಖರೀದಿಸಿರುವ ಉಪಕರಣಗಳು ಮತ್ತು ಯಂತ್ರಗಳು ನಿರ್ವಹಣೆಯಿಲ್ಲದೆ ಉಪಯೋಗಕ್ಕೆ ಬಾರದೆ ನಗರಸಭೆ ಆವರಣದಲ್ಲಿ ತುಕ್ಕು ಹಿಡಿಯುವಂತಾಗಿರುವುದು ನಗರಸಭೆ ಅಧಿಕಾರಿಗಳ ಕಾರ್ಯವೈಖರಿಗೆ ಕೈಗನ್ನಡಿಯಾಗಿದೆ.
ನಗರದಲ್ಲಿ ಸಕಾಲಕ್ಕೆ ಕಸ ವಿಲೇವಾರಿ ಮಾಡಲು ಯಂತ್ರಗಳ ಕೊರತೆ ಇರುವುದರಿಂದ ನಗರದಲ್ಲಿ ಕಸರ ರಾಶಿಗಳು ಎಲ್ಲೆಂದರೆ ಅಲ್ಲಿ ಕೊಳೆಯುವಂತಾಗಿದೆ. ಕೋಲಾರ ನಗರಕ್ಕೆ ಅಗತ್ಯ ಪ್ರಮಾಣದ ಯಂತ್ರಗಳು ಇಲ್ಲದಿರುವುದರಿಂದ ವಾರಗಟ್ಟಲೆ ಕಸ ವಿಲೇವಾರಿ ಮಾಡಲು ಸಾಧ್ಯವಾಗುತ್ತಿಲ್ಲ.


ನಗರಸಭೆ ಆವರಣದ ಶೆಡ್‌ನಲ್ಲಿ ತಂದಿಟ್ಟಿರುವ ಈ ಯಂತ್ರಗಳ ವಿವಿಧ ಭಾಗಕ್ಕೆ ಸುತ್ತಿರುವ ಪ್ಯಾಕಿಂಗ್ ಕವರ್ ಹಾಗೆಯೇ ಇದೆ. ಇನ್ನು ಕೆಲವು ಯಂತ್ರಗಳು ನಿರ್ವಹಣೆಯಿಲ್ಲದೆ ತುಕ್ಕು ಹಿಡಿಯುತ್ತಿವೆ, ಕೆಲವೆಡೆ ಇಲಿ, ಹೆಗ್ಗಣ ಕಚ್ಚಿ ಹಾಳು ಮಾಡಿವೆ, ಹೊಸದಾಗಿ ಖರೀದಿಸಿರುವ ಯಂತ್ರಗಳು ಈಗಾಗಲೇ ಧೂಳು ಹಿಡಿದು, ಬಣ್ಣ ಮಾಸಿದ್ದು ಸ್ವಲ್ಪ ದಿನಗಳಲ್ಲಿ ತುಕ್ಕು ಹಿಡಿಯುವ ಆತಂಕವೂ ಎದುರಾಗಿದೆ.
ವರ್ಷದ ಹಿಂದೆ ನಾಲ್ಕು ರೋಡ್ ಸ್ವೀಪಿಂಗ್ ಯಂತ್ರ, ಚೇಂಬರ್ ಸ್ವಚ್ಛಗೊಳಿಸುವ ಎರಡು ಬೇಲಿಂಗ್ ಮಷಿನ್ ಹಾಗೂ ಇನ್ನಿತರ ಯಂತ್ರಗಳನ್ನು ತಂದಿಡಲಾಗಿದೆ. ಒಂದು ರೋಡ್ ಸ್ವೀಪಿಂಗ್ ಯಂತ್ರದ ಮೌಲ್ಯ ಸುಮಾರು ೨ ಲಕ್ಷ. ನಾಲ್ಕು ಯಂತ್ರಗಳಿಂದ ಸುಮಾರು ೮ ಲಕ್ಷ ವೆಚ್ಚವಾಗಿದೆ. ಸಿಮ್ರಾನ್ ಬುಸಿನೆಸ್ ಸಲ್ಯೂಷನ್ ಲಿಮಿಟೆಡ್ ಸಂಸ್ಥೆಯಿಂದ ಖರೀದಿಸಿರುವ ಬಗ್ಗೆ ಯಂತ್ರಗಳ ಮೇಲೆ ಮಾಹಿತಿ ಹಾಗೂ ಮೊಬೈಲ್ ಸಂಖ್ಯೆ ಇದೆ.
ಇನ್ನು ಚೇಂಬರ್ ಸ್ವಚ್ಛಗೊಳಿಸುವ ಒಂದು ಬೇಲಿಂಗ್ ಮಷಿನ್ ಮೌಲ್ಯವೇ ಸುಮಾರು ೪ ಲಕ್ಷ ಎಂದು ಗೊತ್ತಾಗಿದೆ.
ಈ ಯಂತ್ರಗಳನ್ನು ನಗರಸಭೆ ಆಯುಕ್ತ ಶಿವಾನಂದ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸಾರ್ವಜನಿಕರ ಬಳಕೆಗೆ ವಿನಿಯೋಗಿಸದೆ ಶೆಡ್‌ನಲ್ಲೇ ಇಟ್ಟುಕೊಂಡಿದ್ದಾರೆ. ತಂದಿಟ್ಟ ಮೇಲೆ ಅತ್ತ ಗಮನ ಹರಿಸಿದಂತಿಲ್ಲ. ತಾವು ಪಾವತಿಸುವ ತೆರಿಗೆ ಹಣವನ್ನು ಅಧಿಕಾರಿಗಳು ಅನಾಯಾಸವಾಗಿ ವ್ಯರ್ಥ ಮಾಡುತ್ತಿದ್ದಾರೆ ಎಂದು ನಾಗರೀಕರು ದೂರಿದ್ದಾರೆ. ನಗರಸಭೆಯಲ್ಲಿ ಕಳೆದ ಒಂದು ವರ್ಷದಲ್ಲಿ ಮೂವರು ಆಯುಕ್ತರು ಬದಲಾಗಿದ್ದಾರೆ.ಈಗಿರುವವರು ನಾಲ್ಕನೆಯವರು!
ನಗರದ ಬಹುತೇಕ ರಸ್ತೆಗಳು ದೂಳಿನಿಂದ ಕೂಡಿವೆ, ಹಲವೆಡೆ ಕಸದ ರಾಶಿಯೇ ಇದೆ. ರಾಜಕಾಲುವೆ ಸ್ವಚ್ಛಗೊಳಿಸಿಲ್ಲ. ಯುಜಿಡಿ ವ್ಯವಸ್ಥೆ ಸರಿ ಇಲ್ಲದೆ ಚೇಂಬರ್‌ಗಳು ಕಟ್ಟಿಕೊಂಡು ಕೊಳಚೆ ನೀರು ರಸ್ತೆ ಮೇಲೆಯೇ ಹರಿಯುತ್ತಿದೆ. ಹೀಗಿದ್ದೂ ಯಂತ್ರಗಳನ್ನು ಬಳಕೆ ಮಾಡಿಲ್ಲ.


ಶಾಸಕ ಕೊತ್ತೂರು ಮಂಜುನಾಥ್ ಶಾಸಕರಾಗಿ ಆಯ್ಕೆಯಾದ ನಂತರ ನಗರಸಭೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಸ ವಿಲೇವಾರಿಗೆ ಮೊದಲ ಆದ್ಯತೆ ನೀಡಬೇಕು, ಮಳೆಗಾಲದೊಳಗಾಗಿ ಚರಂಡಿಗಳನ್ನು ಸ್ವಚ್ಚಗೊಳಿಸಬೇಕು ಎಂದು ಅದಿಕಾರಿಗಳಿಗೆ ಸೂಚನೆ ನೀಡಿದರು.
ಹೊಸದಾಗಿ ಆಗಮಿಸಿರುವ ಜಿಲ್ಲಾಧಿಕಾರಿ ಅಕ್ರಂಪಾಷ ಒಂದು ವಾರದಿಂದ ನಗರದಲ್ಲಿ ಸಂಚಾರ ಕೈಗೊಂಡಿದ್ದಾರೆ, ಆದರೂ ಸಹ ನಗರದಲ್ಲಿ ಕಸ ವಿಲೇವಾರಿ ಆಗಿಲ್ಲ. ಜಿಲ್ಲಾಧಿಕಾರಿ ನಗರಸಭೆಯಲ್ಲಿ ತುಕ್ಕುಹಿಡಿದು ಧೂಳು ಮುಚ್ಚಿರುವ ಯಂತ್ರಗಳ ಕಡೆ ಒಮ್ಮೆ ಕಣ್ಣು ಹಾಯಿಸಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ನಗರಸಭೆಯಲ್ಲಿ ಸಿಬ್ಬಂದಿ ಕೊರತೆ ಇರುವ ಬಗ್ಗೆ ಜಿಲ್ಲಾಧಿಕಾರಿ ಅಕ್ರಂ ಪಾಷ ಕೂಡ ಈಚೆಗೆ ಮಾಹಿತಿ ನೀಡಿ ಕೇವಲ ಶೇ.೩೦ರಷ್ಟು ಸಿಬ್ಬಂದಿ ಇದ್ದು, ಕೆಲವರನ್ನು ಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳಲಾಗಿದೆ. ಹೀಗಾಗಿ, ಕೆಲಸ ವಿಳಂಬವಾಗುತ್ತಿದೆ. ಈ ಸಂಬಂಧ ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದಿದ್ದರು.