
ಉಮಾಪತಿ ಶೆಟ್ಟರ್
ಹಗರಿಬೊಮ್ಮನಹಳ್ಳಿ. ಮಾ.11 ಈ ಭಾಗದ ರೈತರ ಜೀವನಾಡಿ ಮಾಲ್ವಿ ಜಲಾಶಯ ದಶಕಗಳ ವರ್ಷದ ನಂತರ ಭರ್ತಿಯಾಗಿ ರೈತರಲ್ಲಿ ಮಂದಹಾಸ ಮೂಡಿತ್ತು. ಜಲಾಶಯ ಭರ್ತಿಯಾದ ಆರಂಭದಲ್ಲಿ ಗೇಟ್ ಎತ್ತುವ ಮೂಲಕ ನೀರನ್ನು ಹಗರಿ ಹಳಕ್ಕೆ ಹರಿಸಲಾಯಿತು. ಜಲಾಶಯದ ಹೊರ ಹರಿವು ಕಡಿಮೆಯಾದಾಗ ನಿರ್ವಹಣೆ ಇಲ್ಲದ ಗೇಟ್ ಗಳನ್ನು ಮುಚ್ಚಿಸಲು ಹರಸಾಹಸ ಪಡಬೇಕಾಯಿತು. ಜೆಸಿಬಿ ಮೂಲಕ ಗೇಟ್ ಗಳನ್ನು ಮುಚ್ಚಿಸಲಾಯಿತು. ಸಂಪೂರ್ಣವಾಗಿ ಮುಚ್ಚದೆ ಇರುವುದರಿಂದ ನೀರು ವ್ಯರ್ಥವಾಗಿ ಹಗರಿ ಹಳಕ್ಕೆ ಪೋಲಾಗುತ್ತಿರುವುದು ನಿಂತಿಲ್ಲ. ರೈತರು ತಮ್ಮ ಭೂಮಿಗೆ ನೀರು ಬರುತ್ತದೆ ಎಂದು ಕನಸು ಕಾಣುತ್ತಿರುವ ಸಂದರ್ಭದಲ್ಲಿ ಎಡ ಮತ್ತು ಬಲ ದಂಡೆ ಕಾಲುವೆಗಳು ದುರಸ್ಥಿ ಇಲ್ಲದೆ ನೀರು ಹರಿಸಿದರೆ ರೈತರ ಹೊಲಗಳಿಗೆ ಮುಟ್ಟುವುದು ಸಾಧ್ಯವಿಲ್ಲ. ಇದಲ್ಲದೆ ಕಾಲುವೆ ಕೂಡ ಒತ್ತುವರಿಯಾಗಿ ಕಾಲುವೆಯ ಕುರುಹು ಕಾಣದಂತಾಗಿದೆ . ಜಲಾಶಯದ ಬಗ್ಗೆ ದಶಕಗಳ ಕಾಲ ಕಾಳಜಿ ಮತ್ತು ನಿರ್ವಹಣೆ ಇಲ್ಲದೆ ಸಂಬಂಧಿಸಿದ ಇಲಾಖೆಯವರು ನಿದ್ದೆಗೆ ಜಾರಿದ್ದರು. ವರುಣನ ಕೃಪೆ ಹಾಗೂ ಶಾಶ್ವತ ನೀರಿನ ಯೋಜನೆಯಿಂದ ಜಲಾಶಯ ಭರ್ತಿಯಾಗಿದೆ. ಇದು ಎಲ್ಲಾ ಗೊತ್ತಿದ್ದು ಎಚ್ಚೆತ್ತುಕೊಳ್ಳದ ಇಲಾಖೆ ಅಧಿಕಾರಿಗಳು ಕೈಚಲ್ಲಿ ಕುಳಿತಿದ್ದಾರೆ.
ಇತ್ತ ರೈತರಿಗೆ ಉಪಯೋಗವಾಗದೆ, ಅತ್ತ ಕುಡಿವ ನೀರಿನ ಬಳಕೆಯಾಗದೆ ನೀರು ವ್ಯರ್ಥವಾಗಿ ಪೋಲಾಗುತ್ತಿರುವುದು ಕಾಣಬಹುದು. ಇದು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತದೆ.
ಮುಂದಿನ ದಿನಗಳಲ್ಲಿ ಜಲಾಶಯಕ್ಕೆ ಸಂಬಂಧಿಸಿದ ಗೇಟ್ ಗಳನ್ನು ಹಾಗೂ ಕಾಲುವೆಯ ತೂಬುಗಳನ್ನು ದುರಸ್ಥಿ ಮಾಡುವ ಮೂಲಕ ರೈತರ ಭೂಮಿಗೆ ನೀರು ಹರಿಸಬೇಕು. ಆಗ ಈ ಭಾಗದ ನೀರಾವರಿ ಯೋಜನೆ ಗಾಗಿ ಜಲಾಶಯ ನಿರ್ಮಿಸಿದ ಸರಳ ಸಜ್ಜನಿಕೆಯ ಗಾಂಧಿ ವಾದಿ ದಿ. ಬಾಚಿಗೊಂಡನಹಳ್ಳಿ ಚನ್ನಬಸನಗೌಡರ ಕನಸು ನನಸಾಗುತ್ತದೆ.