ನಿರ್ವಹಣೆಯಿಲ್ಲದೆ ಸೊರಗಿದ ಪಾರ್ಕ್

  • ಹಾಲನೂರು ಆರ್ ರವೀಶ್

ಬೆಂಗಳೂರು, ಏ. ೨- ಗುಜರಿ ವಸ್ತುಗಳ ರಾಶಿ ರಾಶಿ…ಪುಂಡು ಪೋಕರಿಗಳ ಆಟಾಟೋಪಗಳ ಕೇಂದ್ರ….ಪಕ್ಕದ ಕೊಳಗೇರಿ ನಿವಾಸಿಗಳ ಪಾಲಿಗೆ ಬಹಿರ್ದೆಸೆ ಬಯಲು…..ಇದು ಬಿಬಿಎಂಪಿ ನಿರ್ವಹಣೆಯ ಒಂದು ಉದ್ಯಾನವನದ ಹೀನಾಯ ಸ್ಥಿತಿ….
ಬೆಂಗಳೂರು ನಗರದ ಟಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಿಬಿಎಂಪಿ ಚೊಕ್ಕಸಂದ್ರ ವಾರ್ಡ್ ನಂ ೩೯ ರ ವ್ಯಾಪ್ತಿಯಲ್ಲಿರುವ ಪಾಲಿಕೆ ನಿರ್ವಹಣೆಯ ಹೆಸರೂ ಇಲ್ಲದ ಉದ್ಯಾನವನ ಒಂದರ ದುಸ್ಥಿತಿ ಇದು.ಬೆಂಗಳೂರು- ತುಮಕೂರು ಹೆದ್ದಾರಿಯ ಟಿ ದಾಸರಹಳ್ಳಿಯಿಂದ ಚೊಕ್ಕಸಂದ್ರ ಕಡೆಗೆ ಹೋಗುವ ಮುಖ್ಯರಸ್ತೆಯಲ್ಲಿ ಸುಮಾರು ೨೦೦ ಮೀಟರ್ ಒಳ ಹೋದರೆ ಬಲಭಾಗಕ್ಕೆ ಚೊಕ್ಕಸಂದ್ರ ಸಮೀಪ ಕೆರೆ, ಅವ್ಯವಸ್ಥೆಯ ಈ ಉದ್ಯಾನವನವಿದೆ.
ಚೊಕ್ಕಸಂದ್ರ ಕೆರೆಯ ಮುಖ್ಯ ಗೇಟ್ ಮುಂಭಾಗ ನೋಡಿದರೆ ಗುಜರಿ ಅಂಗಡಿಯವರ ಕಸದ ರಾಶಿಗಳು,ಅದರಲ್ಲಿ ಹತ್ತಾರು ಮಹಿಳೆಯರು ಕಸ ವಿಂಗಡಣೆ ಮಾಡುತ್ತಿರುವುದು. ಕಣ್ಣಿಗೆ ರಾಚುತ್ತದೆ. ಅಲ್ಲಿ ಪಾರ್ಕ್ ಇದೆ ಎಂಬ ಸುಳಿವೂ ಕಾಣುವುದಿಲ್ಲ. ಇಲ್ಲಿ ಬಿಬಿಎಂಪಿ ಪಾರ್ಕ್ ಇದೆಯಂತಲ್ಲ ಎಲ್ಲಿ ಎಂದು ಕೇಳಿದರೆ ಗುಜರಿ ಅಂಗಡಿಯವರು ಸುರಿದಿರುವ ಕಸದ ರಾಶಿಯ ಹಿಂಭಾಗದ್ದೇ ಪಾರ್ಕ್ ನ ಪ್ರವೇಶ ದ್ವಾರ, ಪಾರ್ಕ್ ಗೇಟ್ ಮುಂಭಾಗ ಕಸದ ರಾಶಿಗಳನ್ನು ಸುರಿದುಕೊಂಡು ವಿಂಗಡಣೆ ಮಾಡುವ ಕಾರ್ಯ ರಾಜಾರೋಷವಾಗಿ ನಡೆಯುತ್ತಿದೆ. ಪಾರ್ಕ್ ಗೇಟ್‌ನ ಮುಂಭಾಗ, ಪುಟ್ ಪಾತ್ ಅಲ್ಲದೆ ರಸ್ತೆ ಮಧ್ಯದವರೆಗೂ ಹಾಕ್ಕೊಂಡು ಓಡಾಡುವವರಿಗೆ ತೊಂದರೆ ಅನುಭವಿಸುವಂತಾಗಿದೆ.
ಈ ಬಗ್ಗೆ ಗುಜರಿ ಅಂಗಡಿಯ ಮಾಲೀಕನನ್ನು ಪ್ರಶ್ನಿಸಿದರೆ, ಏನಾಗಲ್ಲ ಬಿಡಿ ಸರ್….ಬಿಬಿಎಂಪಿ ಅಧಿಕಾರಿಗಳಿಗೆ ಹೇಳಿದೀನಿ ಎಂದು ಉಡಾಫೆ ಹೇಳಿಕೆ ನೀಡಿದ್ದಾರೆ.
ಕಸದ ರಾಶಿ ದಾಟಿ ಮುಂದೆ ಹೋದರೆ ಗೇಟ್ ಹಾಕಿತ್ತು. ಬೀಗದ ಕೈ ಚೊಕ್ಕಸಂದ್ರ ಕೆರೆ ಆಫೀಸ್ ನಲ್ಲಿ ಇದೆ ಎಂದು ತಿಳಿದು,ಕೀ ತರಿಸಿಕೊಂಡು ಒಳ ಹೋದರೆ,ಇದು ಪಾರ್ಕ್, ಇಲ್ಲಾ ಯಾವುದಾದರೂ ಅರಣ್ಯಕ್ಕೆ ಬಂದವಾ ಎಂಬ ಅನುಮಾನ ಕಾಡಿತು. ಲಕ್ಷಾಂತರ ರೂ ಖರ್ಚು ಮಾಡಿ ಬೆಳೆಸಿದ್ದ ಹೂವಿನ ಗಿಡಗಳು, ಅಲಂಕಾರಿಕ ಗಿಡಗಳು ಎಲ್ಲವೂ ಇತರೆ ಗಿಡಗಳು ಬೆಳೆದು ಪೊದೆಯಂತಾಗಿದೆ. ಪಾರ್ಕ್‌ನ ಒಳ ಭಾಗದಲ್ಲಿ ವಾಕಿಂಗ್ ಪಾತ್ ಮಾಡಲಾಗಿದೆ.ಇದಕ್ಕೆ ಉದ್ದಲೂ ದೀಪದ ಕಂಬಗಳನ್ನು ಹಾಕಲಾಗಿದೆ.ಆದರೆ ಕಂಬ ಬಿಟ್ಟರೆ ದೀಪಗಳು ಮಾಯವಾಗಿವೆ.
ಹೊಕ್ಕರೆ ಇಡೀ ಉದ್ಯಾನವನದಲ್ಲಿ ಹಾಳು ಸುರಿಯುತ್ತಿದೆ.
ಈ ಪಾರ್ಕ್‌ನಲ್ಲಿ ಹದಿಮೂರು ತೆಂಗಿನ ಮರಗಳಿವೆ.ಗೇಟ್ ಬಳಿಯ ಮರದಲ್ಲಿ ಬಿಟ್ಟರೆ ಬೇರೆ ಯಾವುದೇ ಮರದಲ್ಲಿ ಒಂದೇ ಒಂದು ಕಾಯಿ ಸಹ ಬಿಟ್ಟಿಲ್ಲ. ಪಾರ್ಕ್ ಹಿಂಭಾಗದವರಿಗೆ ಇದರ ಅನುಕೂಲವಾಗಿದೆ.
ಪಾರ್ಕ್‌ನ ಅಲ್ಲಲ್ಲಿ ಪುಂಡರು ಪೋಕರು ಇಸ್ಪೀಟು, ಮದ್ಯಪಾನ ಮಾಡಲು ಬಳಸುವುದು ಕಣ್ಣಿಗೆ ರಾಚುತ್ತದೆ.ಪಾರ್ಕ್ ನ ಎಡ ಭಾಗದಲ್ಲಿ ಹರಿಯುವ ರಾಜಕಾಲುವೆಗೆ ಅಡ್ಡಲಾಗಿ ಸಣ್ಣ ಸೇತುವೆ ಮಾಡಿರುವುದು ಪಕ್ಕದ ಕೊಳಗೇರಿ ಜನರು ಪಾರ್ಕ್ ಒಳಗೆ ಬಂದು ಬಹಿರ್ದೆಸೆಗೆ ಬಳಸಿಕೊಳ್ಳುವಂತಾಗಿದೆ.ಪಾರ್ಕ್ ಅಕ್ರಮ ಚಟುವಟಿಕೆಗಳ ತಾಣವಾಗಿದೆ.
ಈ ಪಾರ್ಕ್ ನಿರ್ವಹಣೆಗಾಗಿ ಪ್ರತ್ಯೇಕ ಬೋರ್ ವೆಲ್ ಸಹ ಇದೆ.ವಿದ್ಯುತ್ ಬಿಲ್ ಕಟ್ಟಲಿಲ್ಲ ಅಂತಾ ಕೆಪಿಟಿಸಿಎಲ್‌ನವರು ಕರೆಂಟ್ ಕಟ್ ಮಾಡಿದ್ದಾರೆ.
ಈ ಪಾರ್ಕ್ ಪಕ್ಕದಲ್ಲೇ ಹರಿಯುವ ರಾಜಕಾಲುವೆಗೆ ತ್ಯಾಜ್ಯಗಳನ್ನು ತಂದು ಸುರಿಯುವುದರಿಂದ ಕೆಟ್ಟ ವಾಸನೆ ಮೂಗಿಗೆ ರಾಚುತ್ತದೆ. ಒಟ್ಟಿನಲ್ಲಿ ಸುಂದರವಾಗಿ ನಳನಳಿಸುತ್ತಾ ನಾಗರಿಕರ ಮನಕ್ಕೆ ಮುದ ನೀಡಬೇಕಾದ ಉದ್ಯಾನವನ ಈಗ ಹಾಳು ಸುರಿಯುತ್ತಾ ಅಕ್ರಮ ಚಟುವಟಿಕೆಗಳ ತಾಣವಾಗಿದೆ. ಈ ಪಾರ್ಕ್ ನ ಸುತ್ತ ಒತ್ತುವರಿ ಸಹ ನಡೆದಿದೆ,ಹೀಗೆ ಬಿಟ್ಟರೆ ಪಟ್ಟಭದ್ರರು ಪಾರ್ಕ್ ಜಾಗವನ್ನು ಸಂಪೂರ್ಣ ಒತ್ತುವರಿ ಮಾಡುವುದರಲ್ಲಿ ಅನುಮಾನವೇ ಇಲ್ಲ
ಎಂಬ ಆರೋಪಗಳು ಕೇಳಿ ಬರುತ್ತಿವೆ.
ಈ ಬಗ್ಗೆ ಬಿಬಿಎಂಪಿ ದಾಸರಹಳ್ಳಿ ವಲಯ ಜಂಟಿ ಆಯುಕ್ತ ನರಸಿಂಹಮೂರ್ತಿ ಅವರ ಗಮನಕ್ಕೆ ತರಲಾಗಿ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳಿಗೆ ಪೋನ್ ಮೂಲಕ ಪಾರ್ಕ್ ಮುಂಭಾಗದ ಗುಜರಿ ಅಂಗಡಿಯನ್ನು ತೆರವುಗೊಳಿಸುವಂತೆ ಸೂಚಿಸಿದರಾದರೂ ಯಾವುದೇ ಪ್ರಯೋಜನವಾಗಿಲ್ಲ.
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಮಂಜುನಾಥ್ ಅವರು ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳನ್ನು ಕರೆಸಿ ವಿಚಾರಿಸಿ ಪಾರ್ಕ್ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ನಾಗರಿಕರ ಒತ್ತಾಯವಾಗಿದೆ.