ಬೀದರ, ಜೂ.23:ಕಲುಷಿತ ನೀರು ಸೇವನೆಯಿಂದ ಔರಾದ ತಾಲ್ಲೂಕಿನ ಕರಕ್ಯಾಳ ಗ್ರಾಮದ ಸುಮಾರು 25 ಜನ ಅಸ್ಥವ್ಯಸ್ಥಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಘಟನೆ ನಡೆಯದಂತೆ ನೋಡಿಕೊಳ್ಳಬೇಕು ಹಾಗೂ ಜಿಲ್ಲೆಯ ಎಲ್ಲಾ ಗ್ರಾಮದ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಬೇಕು. ಅಧಿಕಾರಿಗಳ ನಿರ್ಲಕ್ಷದಿಂದ ಕಲುಷಿತ ನೀರು ಸರಬರಾಜಾಗಿ ಜನರಲ್ಲಿ ಆರೋಗ್ಯಕ್ಕೆ ಸಮಸ್ಯೆ ಉಂಟಾದಲ್ಲಿ ಸಂಬಂದಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಅರಣ್ಯ, ಜೈವಿಕ ಮತ್ತು ಪರಿಸರ ಸಚಿವರು ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ. ಖಂಡ್ರೆ ಹೇಳಿದರು.
ಅವರು ಗುರುವಾರ ಬೀದರ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಕುಡಿಯುವ ನೀರು ಮತ್ತು ವನಮಹೋತ್ಸವ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.
ಜಿಲ್ಲೆಯಲ್ಲಿ ಪ್ರಸ್ತುತ ಮುಂಗಾರು ಮಳೆ ಪ್ರಮಾಣ ಕಡಿಮೆ ಇದೆ. ಮುಂದಿನ ದಿನಗಳಲ್ಲಿ ಮಳೆ ಪ್ರಮಾಣ ಹೆಚ್ಚಾಗುವ ನಿರೀಕ್ಷೆ ಇದೆ. ಆದರು ನಿರೀಕ್ಷೆಗೆ ತಕ್ಕಂತೆ ಮಳೆಯಾಗದಿದ್ದಲ್ಲಿ ಜಿಲ್ಲೆಯ ಪ್ರತಿ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಒದಸಲು ಈಗಲೇ ಮುಂಜಾಗೃತಿ ಕ್ರಮ ವಹಿಸಬೇಕು. ಪ್ರಸ್ತುತ ನೀರು ಸರಬರಾಜಾಗುತ್ತಿರುವ ನೀರಿನ ಟ್ಯಾಂಕ್‍ಗಳು,ಟ್ಯಾಂಕ್‍ಗಳ ಫೀಲ್ಟರ್‍ಗಳನ್ನು ಸ್ವಚ್ಟಗೊಳಿಸಬೇಕು, ಪೈಪ್‍ಲೈನ್‍ನಲ್ಲಿ ಸಮಸ್ಸೆಯಾದಲ್ಲಿ ಅದನ್ನು ಸರಿಪಡಿಸಬೇಕು ಈ ಎಲ್ಲಾ ಕೆಲಸ ಕಾರ್ಯಗಳ ಮೇಲ್ವಿಚಾರಣೆಗೆ ತಂಡ ರಚಿಸಬೇಕು ಸಂಬಂದಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮುಂಬರುವ ಎರಡು ತಿಂಗಳಲ್ಲಿ ರಾಜ್ಯದಲ್ಲಿ ಸುಮಾರು 5 ಕೊಟಿ ಸಸಿಗಳನ್ನು ನೆಡುವ ಗುರಿ ಇದ್ದು ಅದರಂತೆ ಬರುವ ಜುಲೈ 01 ರಂದು ಜಿಲ್ಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ವನಮಹೋತ್ಸವದಲ್ಲಿ 3 ಲಕ್ಷ ಸಸಿಗಳನ್ನು ನೆಡುವ ಗುರಿ ಇದೆ. ಅರಣ್ಯ ಇಲಾಖೆ ವತಿಯಿಂದ ಉಚಿತವಾಗಿ ಸಸಿ ವಿತರಿಸಲಾಗುವುದು. ಈ ವನಮಹೋತ್ಸವಕ್ಕೆ ಜಿಲ್ಲೆಯ ಎಲ್ಲಾ ಸಾರ್ವಜನಿಕರು ವಿವಿಧ ಇಲಾಖೆಗಳು ಕೈಜೋಡಿಸಬೇಕು ಎಂದರು.
ಜಿಲ್ಲೆಯ ಗಡಿ ಭಾಗದ ಏಕಂಬದಲ್ಲಿ ಬೀಜ ವಿತರಣೆಯಲ್ಲಿ ಸಮಸ್ಯೆಯಾಗುತ್ತಿದೆ ಎಂದು ಅಲ್ಲಿನ ರೈತರು ದೂರುತ್ತಿದ್ದಾರೆ ಕೂಡಲೆ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಬೇಕು. ಅಕ್ರಮ ಕಂಡುಬಂದಲ್ಲಿ ಸಂಬಂದ ಪಟ್ಟವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಸಚಿವರು ಸೂಚಿಸಿದರು
ಈ ಸಂದರ್ಭದಲ್ಲಿ ವಿಧಾನ ಪರಿಷತ ಸದಸ್ಯ ಅರವಿಂದಕುಮಾರ ಅರಳಿ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ.ಎಂ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್., ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಜಿಲ್ಲಾ ಯೋಜನಾಭಿವೃದ್ಧಿ ಕೋಶದ ಯೋಜನಾಧಿಕಾರಿ ಮೋತಿಲಾಲ್ ಲಮಾಣಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರತಿಕಾಂತ ಸ್ವಾಮಿ, ಬೀದರ ನಗರಸಭೆ ಆಯುಕ್ತ ಶಿವರಾಜ ರಾಠೋಡ, ಜಿಲ್ಲೆಯ ವಿವಿಧ ತಾಲ್ಲೂಕಿನ ತಹಸೀಲ್ದಾರರು, ಸಹಾಯಕ ಆಯುಕ್ತರು ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.