ನಿರ್ಲಕ್ಷ ಮಾಡದೇ ಮತದಾನದ ಹಬ್ಬದಲ್ಲಿ ಪಾಲ್ಗೊಳ್ಳಿ: ಸುಲ್ಪಿ

ಬಸವಕಲ್ಯಾಣ: ಏ.25:ಲೋಕಸಭೆ ಚುನಾವಣೆ ಅಂಗವಾಗಿ ಮೇ.7 ರಂದು ನಡೆಯಲಿರುವ ಮತದಾನದಂದು ಎಲ್ಲರೂ ತಮ್ಮ ಹಕ್ಕು ಚಲಾಯಿಸುವ ಮೂಲಕ ಮತದಾನದ ಹಬ್ಬದಲ್ಲಿ ಭಾಗವಹಿಸಬೇಕು ಎಂದು ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ರಮೇಶ ಸುಲ್ಪಿ ಹೇಳಿದರು.
ತಾಲೂಕಿನ ಬೇಟ ಬಾಲಕುಂದಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೌರ ಗ್ರಾಮದ ನರೇಗಾ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿ ಸ್ಥಳದಲ್ಲಿ ಬುಧವಾರ ಹಮ್ಮಿಕೊಂಡ ಮತದಾನ ಜಾಗೃತಿ ಅಭಿಯಾನದಲ್ಲಿ ಅವರು ಮಾತನಾಡಿ, ಯಾವುದೇ ಕಾರಣಕ್ಕೂ, ಎಷ್ಟೆ ಕೆಲಸದ ಒತ್ತಡವಿದ್ದರೂ ಸಹ ಅಂದು ತಮ್ಮ ಮತದಾನದ ಹಕ್ಕು ಚಲಾಯಿಸಬೇಕು, ಹೊರತು ನನ್ನ ಒಂದು ಓಟಿನಿಂದ ಏನಾಗುವುದಿದೇ ಎಂದು ನಿರ್ಲಕ್ಷ ಮಾಡಬಾರದು ಎಂದರು.
ಮತದಾನ ಪವಿತ್ರವಾದ ಹಕ್ಕು, ಅದನ್ನು ಪ್ರಾಮಾಣಿಕ ಮತ್ತು ನಮ್ಮ ಸಮಸ್ಯೆಗೆ ಸ್ಪಂದಿಸುತ್ತಾನೆ ಎಂಬ ಭರವಸೆ ಇರುವ ಅಭ್ಯರ್ಥಿಯನ್ನು ಮತದಾನ ಮಾಡಬೇಕು. ಹೊರತು ಆಸೆ ಆಮೀಷಗಳಿಗೆ ಒಳಗಾಗಿ ತಮ್ಮ ಮತದಾನ ಮಾರಿಕೊಳ್ಳಬಾರದು ಎಂದು ಸಲಹೆ ನೀಡಿದರು.
ಮತದಾನ ಕೇಂದ್ರಗಳಲ್ಲಿ ವಿಶೇಷ ಚೇತರಿಗೆ ಮತ್ತು ವೃದ್ಧರಿಗೆ ಎಲ್ಲಾ ರೀತಿಯ ಸೌಕರ್ಯಗಳು ಇರುತ್ತವೆ ಹಾಗೂ 85 ವರ್ಷ ಮೇಲ್ಪಟ್ಟ ಮತದಾರರಿಗೆ ಮನೆಯಿಂದಲೇ ಮತದಾನ ಮಾಡುವ ವ್ಯವಸ್ಥೆ ಚುನಾವಣಾ ಆಯೋಗದಿಂದ ವ್ಯವಸ್ಥೆ ಕಲ್ಪಿಸಲಾಗಿದೆ. ಹೀಗಾಗಿ ಪ್ರತಿಯೊಬ್ಬರು ಮತದಾನ ಮಾಡುವ ಮೂಲಕ ಇತರೆ ಗ್ರಾಮಗಳಿಗೆ ಮಾದರಿ ಯಾಗಬೇಕು ಎಂದು ಸಲಹೆ ನೀಡಿದರು. ನಂತರ ಗ್ರಾಮದ ಮತದಾನ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಷ್ಣುಕಾಂತ ರೆಡ್ಡಿ, ತಾಂತ್ರಿಕ ಸಂಯೋಜಕ ಅಮರನಾಥ ಪಾಟೀಲ್, ಐಇಸಿ ಸಂಯೋಜಕ ವೀರಾರೆಡ್ಡಿ, ಟಿಎ ಮಲ್ಲಿಕಾರ್ಜುನ ಜಾಧವ, ಗ್ರಾ.ಕಾ.ಮಲ್ಲಿಕಾರ್ಜುನ, ಡಿಇಒ ರೇಷ್ಮಾ, ಕಾಯಕ ಮಿತ್ರ ನಿಕೀತಾ ಸೇರಿದಂತೆ ನರೇಗಾ ಕೂಲಿ ಕಾರ್ಮಿಕರು ಇದ್ದರು.