ನಿರ್ಲಕ್ಷ್ಯದಿಂದ ಸ್ತನ ಕ್ಯಾನ್ಸರ್ ಉಲ್ಭಣ: ಡಾ. ಕಿರಣ್

ತುಮಕೂರು, ಏ. ೨೨- ನಿರ್ಲಕ್ಷ್ಯ, ಹಾಗೂ ಸಂಕೋಚ ಪ್ರವೃತ್ತಿಯಿಂದ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಹೆಚ್ಚುತ್ತಿದ್ದು, ಬಹುಪಾಲು ರೋಗಿಗಳು ಅಂತಿಮ ಹಂತದಲ್ಲಿ ಆಸ್ಪತ್ರೆಗೆ ಆಗಮಿಸುತ್ತಿರುವುದು ಜೀವಕ್ಕೆ ಅಪಾಯ ಉಂಟಾಗಲು ಕಾರಣವಾಗುತ್ತಿದೆ ಎಂದು ಸಿದ್ಧಗಂಗಾ ಆಸ್ಪತ್ರೆಯ ಕ್ಯಾನ್ಸರ್ ಸ್ಪೆಷಲಿಸ್ಟ್ ಡಾ.ಕಿರಣ್ ಕುಮಾರ್ ಸಜ್ಜನಶೆಟ್ಟಿ ಹೇಳಿದರು.
ಇಲ್ಲಿನ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ ಮಹಿಳೆಯರಲ್ಲಿ ಕ್ಯಾನ್ಸರ್ ಕುರಿತ ಉಪನ್ಯಾಸ ಮಾಲಿಕೆಯಲ್ಲಿ ಮಾತನಾಡಿದ ಅವರು, ಸ್ತನದಲ್ಲಿ ಗಡ್ಡೆ ಬೆಳೆದು ಅದು ರಕ್ತಸ್ತ್ರಾವವಾಗುವವರೆಗೂ ಆಸ್ಪತ್ರೆಗೆ ಬರಲು ಮಹಿಳೆಯರು ಸಂಕೋಚ ಪಡುತ್ತಿದ್ದು, ಇದಕ್ಕೆ ದೇಶದಲ್ಲಿನ ಸಂಪ್ರದಾಯದ ಹೆಸರಿನ ಮೌಢ್ಯವೇ ಕಾರಣವಾಗುತ್ತಿರುವುದು ದುರದೃಷ್ಟಕರ ಎಂದರು.
ಸ್ತನದಲ್ಲಿ ಗೆಡ್ಡೆ, ತೊಟ್ಟಿನಲ್ಲಿ ರಕ್ತಸ್ತ್ರಾವವಾಗುವುದು, ಕೊರಳು ಹಾಗೂ ಕೊಂಕಳು ಭಾಗದಲ್ಲಿ ನೋವಿಲ್ಲದ ಗಡ್ಡೆಗಳು ಕಾಣಿಸಿಕೊಳ್ಳುವುದು, ಬೆನ್ನುನೋವು, ಕೆಮ್ಮು, ತಲೆನೋವು, ಹೊಟ್ಟೆನೋವು, ಸ್ತನಕ್ಯಾನ್ಸರ್ ನಾಲ್ಕನೇ ಹಂತದ ಲಕ್ಷಣಗಳಾಗಿದ್ದು, ಮಹಿಳೆಯರಲ್ಲಿ ಈ ಲಕ್ಷಣ ಕಂಡು ಬಂದರೆ ವೈದ್ಯರ ಬಳಿ ಪರೀಕ್ಷಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಸ್ತನ ಕ್ಯಾನ್ಸರ್ ಮೊದಲ ಹಂತದಲ್ಲಿಯೇ ಪತ್ತೆಯಾದರೆ ಶೇ. ೯೦ ರಷ್ಟು ಗುಣಮುಖವಾಗುವ ಸಾಧ್ಯತೆ ಇರುತ್ತದೆ. ಎರಡನೇ ಹಂತದಲ್ಲಿ ಶೇ. ೭೫ ರಷ್ಟು, ಮೂರನೇ ಹಂತದಲ್ಲಿ ಶೇ.೪೦ ರಷ್ಟು, ನಾಲ್ಕನೇ ಹಂತದಲ್ಲಿ ಕೇವಲ ಶೇ.೧೫ ರಷ್ಟು ಗುಣಮುಖವಾಗುವ ಸಾಧ್ಯತೆ ಇದ್ದು, ಮಹಿಳೆಯರು ತಮ್ಮ ಆರೋಗ್ಯಕ್ಕಾಗಿ ಸ್ವತಃ ಕಾಳಜಿ ಮಾಡಿಕೊಳ್ಳಬೇಕಿದೆ ಎಂದರು.
ಉಳಿದಂತೆ ಮಹಿಳೆಯರಿಗೆ ಗರ್ಭಕೋಶ ಹಾಗೂ ಅಂಡಾಶಯ ಕ್ಯಾನ್ಸರ್ ಕಂಡು ಬರುತ್ತಿದ್ದು, ಯೋನಿಯಿಂದ ರಕ್ತಸ್ತ್ರಾವ, ಬಿಳಿಬಟ್ಟೆ ಹೋಗುವುದು ಹೊಟ್ಟೆಊತ, ಬೆನ್ನುನೋವು, ತೂಕ ಇಳಿಕೆ ಇದರ ಲಕ್ಷಣಗಳಾಗಿವೆ. ಇಂತಹ ಕ್ಯಾನ್ಸರ್‌ಗಳ ಬಗ್ಗೆ ಜಾಗೃತಿ ವಹಿಸುವುದು ಒಳಿತು ಎಂದು ಸಲಹೆ ನೀಡಿದರು.
ಸಿದ್ಧಗಂಗಾ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಸಂಬಂಧಿಸಿದಂತೆ ಏಪ್ರಿಲ್ ೧೯ ರಿಂದ ಮೇ ೨೦ರ ವರೆಗೂ ಉಚಿತ ಸಂದರ್ಶನ ಹಾಗೂ ತಪಾಸಣಾ ಶಿಬಿರ ನಡೆಯುತ್ತಿದ್ದು, ಹೆಚ್ಚಿನ ಮಾಹಿತಿಗೆ ೦೮೧೬-೬೬೦೨೨೨೨ ಸಂಪರ್ಕಿಸಬಹುದಾಗಿದೆ.