ನಿರ್ಮಾಣ ಹಂತದಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿ ಕಾರ್ಡಿಯಾಟಿಕ್ ಸರ್ಜರಿ ವ್ಯವಸ್ಥೆಗೆ ಕ್ರಮ:ಶಾಸಕ ಗವಿಯಪ್ಪ.


ಸಂಜೆವಾಣಿ ವಾರ್ತೆ
ಹೊಸಪೇಟೆ, ಸೆ.14: ನಗರದಲ್ಲಿ ನಿರ್ಮಾಣವಾಗುತ್ತಿರುವ ಜಿಲ್ಲಾ ಆಸ್ಪತ್ರೆ ಉನ್ನತೀಕರಣ ಜತೆಗೆ  ಜಿಲ್ಲೆಯ ಜನರ ಅನುಕೂಲಕ್ಕಾಗಿ ಹೃದಯ ಸಂಬಂಧಿ ಕಾಯಿಲೆಗೆ ಕಾರ್ಡಿಯಾಟಿಕ್ ಸರ್ಜರಿ ಕೈಗೊಳ್ಳುವ ವ್ಯವಸ್ಥೆಗೆ ಯೋಜನೆ ರೂಪಿಸಲಾಗುವುದು ಎಂದು ಶಾಸಕ ಎಚ್.ಆರ್.ಗವಿಯಪ್ಪ ಹೇಳಿದರು.
ನಗರದ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಆಯುಷ್ಮಾನ್ ಭವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜೀವನ ಕ್ರಮ ಜೊತೆಗೆ ಚಿಕಿತ್ಸಾ ಕ್ರಮ ಸಹ ಹಂತಹಂತವಾಗಿ ಬದಲಾಗುತ್ತಾ ಬಂದಿದೆ, ಅತ್ಯುನ್ನತ ವೈದ್ಯಕೀಯ ಸೌಲಭ್ಯ ಈ ಭಾಗದಲ್ಲೂ ಸಾರ್ವಜನಿಕರಿಗೆ ಒದಗಿಸಬೇಕು ಎಂದು ಸದುದ್ದೇಶದಿಂದ ಆರೋಗ್ಯ ಇಲಾಖೆಯಲ್ಲಿ ಸುಧಾರಣೆ ತರಲಾಗುತ್ತಿದೆ. ಎಲ್ಲಾ ಸೌಲಭ್ಯಗಳನ್ನು ಜನರಿಗೆ ತಲುಪುವ ಉದ್ದೇಶದಿಂದ ಆಯುಷ್ಮಾನ್ ಭವ ಕಾರ್ಯಕ್ರಮವನ್ನು ರೂಪಿಸಿದ್ದು, ಇದರ ಯಶಸ್ವಿ ಅನುಷ್ಠಾನಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿ ಶ್ರಮಿಸಬೇಕು ಎಂದರು.
ಕಾರ್ಯಕ್ರಮ ಉದ್ದೇಶಿಸಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಂಕರ್ ನಾಯ್ಕ ಮಾತನಾಡಿ, ಜಿಲ್ಲೆಯ ಪ್ರತಿ ಗ್ರಾಮಗಳಲ್ಲಿ ಪ್ರತಿಯೊಬ್ಬರಿಗೂ ಆರೋಗ್ಯದ ಸೇವೆ ಸೌಲಭ್ಯಗಳ ಮಾಹಿತಿ ಮತ್ತು ಜಾಗೃತಿಯನ್ನು ನಿರಂತರವಾಗಿ ತಲುಪಿಸುವ ಗುರಿಯೊಂದಿಗೆ. ಶೇ.100ರಷ್ಟು ಫಲಾನುಭವಿಗಳಾಗಿ ಆರೋಗ್ಯ ಇಲಾಖೆ ಸೌಲಭ್ಯ ಪಡಲು ಜಿಲ್ಲೆಯಲ್ಲಿ ಕಾರ್ಯಕ್ರಮ ರೂಪಿಸಲಾಗುತ್ತದೆ ಎಂದರು.
ಕಾರ್ಯಕ್ರಮದ ಕುರಿತು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಷಣ್ಮುಕ ನಾಯ್ಕ ಅವರು ಮಾತನಾಡಿ ಸೆ.17ರಿಂದ ಕಾರ್ಯಕ್ರಮ ಜಾರಿಯಾಗಲಿದ್ದು, ಮೂರು ಹಂತಗಳಲ್ಲಿ ಆಯುಷ್ಮಾನ್ ಭವ ಕಾರ್ಯಕ್ರಮ ನಡೆಯಲಿದೆ. ಮೊದಲ ಹಂತದಲ್ಲಿ ಪ್ರತಿ ಮನೆಮನೆಗೆ ತೆರಳಿ ಅಭಾ ಕಾರ್ಡ್ ನೋಂದಣಿ ಕೈಗೊಳ್ಳುವ ಜೊತೆಗೆ ಕಾರ್ಡಿನ ಮೂಲಕ ದೊರಕುವ ಸೌಲಭ್ಯದ ಮಾಹಿತಿ ನೀಡಲಾಗುತ್ತದೆ. ಆಯುಷ್ಮಾನ್ ಮೇಳ, ಆಯುಷ್ಮಾನ್ ಸಭಾ ಕಾರ್ಯಕ್ರಮ ಸಹ ಕೈಗೊಳ್ಳಲಾಗುತ್ತದೆ. ಜೊತೆಗೆ ಸೇವಾ ಪಕ್ವಾಡ ಮೂಲಕ ಆಯುಷ್ಮಾನ್ ಭವ ಕಾರ್ಯಕ್ರಮ, ಸ್ವಚ್ಚತಾ ಅಭಿಯಾನ, ರಕ್ತದಾನ ಶಿಬಿರ ಹಾಗೂ ಅಂಗಾಂಗ ದಾನ ಕುರಿತು ಜನಜಾಗೃತಿ ಮೂಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ನಿಕ್ಷಯ ಮಿತ್ರ ಅಡಿಯಲ್ಲಿ 313 ಜನರನ್ನು ದತ್ತು ಪಡೆದು ಪೌಷ್ಟಿಕ ಆಹಾರ ವಿತರಿಸಿದ ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಕಾರ್ಯಕ್ರಮದ ಆರಂಭಕ್ಕೂ ಮುನ್ನ ಗುಜರಾತಿನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮ ಅವರಿಂದ ಉದ್ಘಾಟನೆಗೊಂಡ ಆಯುಷ್ಮಾನ್ ಭವ ರಾಷ್ಟ್ರಮಟ್ಟದ ಕಾರ್ಯಕ್ರಮದ ನೇರಪ್ರಸಾರದ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಲಾಯಿತು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ನೋಂಗ್ಡಾಯ್ ಮೊಹಮ್ಮದ್ ಅಲಿ ಅಕ್ರಮ್ ಶಾ, ಆರ್‍ಸಿಎಚ್ ಅಧಿಕಾರಿ ಡಾ.ಜಂಬಯ್ಯ ನಾಯಕ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಜಗದೀಶ್ ಪಾಟ್ನೆ, ಆರೋಗ್ಯ ಇಲಾಖೆ ಅಧಿಕಾರಿಗಳಾದ ಡಾ.ಭಾಸ್ಕರ್, ಡಾ.ಕಮಲಮ್ಮ, ಡಾ.ರಾಧಿಕ ಹಾಗೂ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ.ದೊಡ್ಡಮನಿ ಇನ್ನಿತರರಿದ್ದರು.