ನಿರ್ಮಲಾನಂದ್ ಸ್ವಾಮೀಜಿ ಹೆಗಲ ಮೇಲೆ ಕೈಹಾಕಿ ಅಶೋಕ್ ಅಪಮಾನ: ಸಿ.ಎಂ. ಇಬ್ರಾಹಿಂ

ಕಲಬುರಗಿ,ನ.12:ನಿರ್ಮಲಾನಂದ್ ಸ್ವಾಮೀಜಿ ಅವರಿಗೆ ಗೌರವ ಕೊಡದೇ ಇರುವುದು ಅಕ್ಷಮ್ಯ ಅಪರಾಧ. ನಿರ್ಮಲಾನಂದ್ ಸ್ವಾಮೀಜಿ ಹೆಗಲ ಮೇಲೆ ಕೈಹಾಕಿ ರಾಜ್ಯದ ಕಂದಾಯ ಸಚಿವ ಆರ್. ಅಶೋಕ್ ಅವರು ಅಪಮಾನ ಮಾಡಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರು ಕಿಡಿಕಾರಿದರು.
ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಂಪೇಗೌಡರ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ನಿರ್ಮಲಾನಂದ್ ಸ್ವಾಮೀಜಿಗೆ ಅಪಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯವರಿಗೆ ಅಧಿಕಾರದ ಮದ ನೆತ್ತಿಗೆ ಹತ್ತಿದೆ. ಈ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಿರ್ಮಲಾನಂದ್ ಸ್ವಾಮೀಜಿಯವರ ಮುಂದೆಯೇ ಕಾಲು ಮೇಲೆ ಕಾಲು ಹಾಕಿ ಕುಳಿತಿದ್ದರು. ನಿರ್ಮಲಾನಂದ್ ಸ್ವಾಮೀಜಿ ಅವರಿಗೆ ಗೌರವ ಕೊಡದೇ ಇರುವುದು ಅಕ್ಷಮ್ಯ ಅಪರಾಧ. ನಿರ್ಮಲಾನಂದ್ ಸ್ವಾಮೀಜಿ ಹೆಗಲ ಮೇಲೆ ಕೈಹಾಕಿ ಅಶೋಕ್ ಅವರು ಘೋರ ಅಪಮಾನ ಮಾಡಿದ್ದಾರೆ. ಯಾರಿಗೆ ಯಾವ ಗೌರವ ಕೊಡಬೇಕು ಎನ್ನುವುದನ್ನು ಬಿಜೆಪಿಯವರು ಮರೆತಿದ್ದಾರೆ. ಬಿಜೆಪಿಯಲ್ಲಿ ಬುದ್ದಿವಾದ ಹೇಳುವ ಹಿರಿಯರು ಯಾರೂ ಇಲ್ಲ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಬಸವಕೃಪಾ ಮರೆತು ಕೇಶವ ಕೃಪಾಕ್ಕೆ ಶರಣಾಗಿದ್ದಾರೆ ಎಂದು ಅವರು ತೀವ್ರ ತರಾಟೆಗೆ ತೆಗೆದುಕೊಂಡರು.
ಇದೇ ವೇಳೆ ಕೆಂಪೇಗೌಡರ ಪ್ರತಿಮೆ ಉದ್ಘಾಟನೆ ಸಮಾರಂಭಕ್ಕೆ ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡರನ್ನು ಆಹ್ವಾನಿಸದೇ ಇರುವ ಕುರಿತು ಪ್ರತಿಕ್ರಿಯಿಸಿದ ಇಬ್ರಾಹಿಂ ಅವರು, ದೇವೆಗೌಡರು ಪ್ರಧಾನಿಯಾದ ಮೊದಲ ಕನ್ನಡಿಗ. ದೇವೆಗೌಡರಿಗೆ ಕರೆಯದೇ ಇರುವುದು ಕನ್ನಡಿಗರಿಗೆ ಮಾಡಿದ ಅವಮಾನ. ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯ ವಿಧಾನಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರನ್ನೂ ಸಹ ಶಿಷ್ಠಾಚಾರದಂತೆ ಕಾರ್ಯಕ್ರಮಕ್ಕೆ ಕರೆಯಬೇಕಿತ್ತು. ಪ್ರಧಾನಿ ನಾಡು ಕಟ್ಟಲು ರಾಜ್ಯಕ್ಕೆ ಬಂದಿಲ್ಲ. ಬಿಜೆಪಿ ಕಟ್ಟಲು ಬಂದಿದ್ದಾರೆ ಎಂದು ಅವರು ಕಿಡಿಕಾರಿದರು.
ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಬಂದಿದ್ದು ಜೆಡಿಎಸ್‍ಗೆ ಲಾಭವಾಗಿದೆ. ಅದೇ ರೀತಿ ಇನ್ನೂ ಎರಡು ಸಲ ರಾಜ್ಯಕ್ಕೆ ಬಂದು ಹೋದರೆ ಜೆಡಿಎಸ್‍ಗೆ ಒಳ್ಳೆಯದು. ಪೆಟ್ರೋಲ್ ಲೀಟರ್‍ಗೆ ನೂರು ರೂ.ಗಳಾಗಿದೆ. ದೇಶದಲ್ಲಿ ಅಷ್ಟಲಕ್ಷ್ಮೀಯವರು ಹೋಗಿ ಇದೀಗ ದರಿದ್ರ ಲಕ್ಷ್ಮೀ ಉಳಿದಿದ್ದಾಳೆ. ಕೆಂಪೇಗೌಡರ ಮೂರ್ತಿ ಅನಾವರಣ ಸಂತೋಷ. ಆದಾಗ್ಯೂ, ಅದು ಬಿಜೆಪಿಮಯವಾಗಿದ್ದು ಸರಿಯಲ್ಲ. ಜನಕ್ಕೆ ಮೂರ್ತಿಕ್ಕಿಂತ ರಾಜ್ಯಕ್ಕೆ ಮೋದಿ ಆರ್ಥಿಕ ಶಕ್ತಿ ಏನು ಕೊಟ್ಟಿದ್ದಾರೆ? ರಾಜ್ಯದ ಜಿಎಸ್‍ಟಿ ಸೇರಿದಂತೆ ಯಾವ ವಿಚಾರಗಳನ್ನು ಪ್ರಸ್ತಾಪಿಸಿದರು? ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ನಂತರ ಕಾಂಗ್ರೆಸ್, ಬಿಜೆಪಿ ಇಬ್ಬರೂ ಒಂದೇ ಬೀದಿಯಲ್ಲಿರುವ ಪತಿವೃತೆಯರು ಎಂದು ಟೀಕಿಸಿದ ಅವರು, ಶೇಕಡಾ 40ರಷ್ಟು ಅವರು, ಇವರು ಶೇಕಡಾ 20ರಷ್ಟು. ಎರಡೂ ಪಕ್ಷಗಳು ಸಾಕಷ್ಟು ಭ್ರಷ್ಟಾಚಾರ ಮಾಡಿವೆ. ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.