ನಿರ್ಭೀತಿಯಿಂದ ಮತ ಚಲಾಯಿಸುವಂತೆ ಜಿಲ್ಲಾಚುನಾವಣಾಧಿಕಾರಿ ಯಶವಂತ ವಿ. ಗುರುಕರ್ ಮನವಿ

ಕಲಬುರಗಿ,ಮೇ.9: ವಿಧಾನಸಭೆ ಚುನಾವಣೆಯ ಮುಕ್ತ, ನ್ಯಾಯಸಮ್ಮತ, ನಿಷ್ಪಕ್ಷಪಾತ ಹಾಗೂ ಶಾಂತಿಯುತವಾಗಿ ನಡೆಯಲು ಸಕಲ ವ್ಯವಸ್ಥೆ ಮಾಡಲಾಗಿದ್ದು, ಮೇ 10 ರಂದು ಬೆಳಗಿನ 7 ರಿಂದ ಸಂಜೆ 6 ಗಂಟೆ ವರೆಗೆ ಜರುಗುವ ಮತದಾನದಲ್ಲಿ ಮತದಾರರು ಯಾವುದೇ ಆಸೆ, ಆಮೀಷಕ್ಕೆ ಒಳಗಾಗದೇ ನಿರ್ಭೀತಿಯಿಂದ ಮತ ಚಲಾಯಿಸಬೇಕು ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಯಶವಂತ ವಿ. ಗುರುಕರ್ ಜಿಲ್ಲೆಯ ಮತದಾರ ಪ್ರಭುಗಳಲ್ಲಿ ಮನವಿ ಮಾಡಿದ್ದಾರೆ.

ಮತದಾನ ಮಾಡಲು ಅನುಕೂಲವಾಗುವಂತೆ ಕೇಂದ್ರ-ರಾಜ್ಯ ಸರ್ಕಾರಿ ಕಚೇರಿ, ಕಾರ್ಖಾನೆ, ವಾಣಿಜ್ಯ, ಅಂಗಡಿ-ಮುಂಗಟ್ಟುಗಳು, ಸಂಘ-ಸಂಸ್ಥೆಗಳು, ಔದ್ಯೋಗಿಕ ಕಾರ್ಖಾನೆಗಳು, ಖಾಸಗಿ ಸಂಸ್ಥೆಗಳಿಗೆ ಸರ್ಕಾರ ರಜೆ ಘೋಷಿಸಿರುವ ಹಿನ್ನೆಲೆಯಲ್ಲಿ ಎಲ್ಲರು ತಪ್ಪದೆ ಮತ ಚಲಾಯಿಸಬೇಕು. ಬುಧವಾರ ಮತದಾರರ ನಡೆ ಬೂತ್ ಕಡೆಗೆ ಇರಲಿ ಎಂದಿದ್ದಾರೆ.

ಪ್ರÀಜಾಪ್ರÀ್ರಭುತ್ವ ವ್ಯವಸ್ಥೆಯಲ್ಲಿ ಸಾರ್ವತ್ರಿಕ ಚುನಾವಣೆಗಳು ಮಹತ್ತರ ಪಾತ್ರ ವಹಿಸುತ್ತವೆ. ಚುನಾವಣಾ ಪ್ರಕ್ರಿಯೆಯಲ್ಲಿ ಮತದಾರ ಬಂಧುಗಳೇ ಮಹಾಪ್ರಭುಗಳಾಗಿದ್ದಾರೆ. ಮತದಾರರ ಮತ ಚಲಾವಣೆಯ ಮೇಲೆಯೇ ಪ್ರಜಾಪ್ರಭುತ್ವ ನೆಲೆಗೊಂಡಿದೆ ಎಂದಿದ್ದಾರೆ.

ಜಿಲ್ಲೆಯ ಪ್ರತಿಯೊಬ್ಬ ಮತದಾರ ಸಂವಿಧಾನಾತ್ಮಕ ಮತದಾನದ ಹಕ್ಕನ್ನು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವದ ಬಲವರ್ಧನೆಗೊಳಿಸಬೇಕು. ಮತಕ್ಕೆ ಹಣ ಕೊಡುವುದು ಮತ್ತು ಕೇಳೋದು ಅಪರಾಧವಾಗಿದ್ದು, ಜಿಲ್ಲೆಯ ಎಲ್ಲ ಮತಬಾಂಧವರು, ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಸುಗಮ ಮತ್ತು ಶಾಂತಿಯುತ ಮತದಾನ ಪ್ರಕ್ರಿಯೆಗೆ ಸಹಕರಿಸಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ.