
ಚಿತ್ರದುರ್ಗ.ಏ.೨೧; ನಿರ್ಜಲೀಕರಣ ಆಗದಂತೆ ಮಕ್ಕಳನ್ನು ಆರೈಕೆ ಮಾಡಿ ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ತಾಯಂದಿರಿಗೆ ಸಲಹೆ ನೀಡಿದರು.
ಚಿತ್ರದುರ್ಗ ತಾಲ್ಲೂಕಿನ ಮದಕರಿಪುರ ಗ್ರಾಮದ ಲಂಬಾಣಿಹಟ್ಟಿ ಸೇವಾಲಾಲ್ ದೇವಸ್ಥಾನದ ಬಳಿ ಲಸಿಕಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಬೇಸಿಗೆಯಲ್ಲಿ ಮಕ್ಕಳ ಆರೈಕೆ ಮಾಡಲು ನೀರು ಉಪ್ಪು ಸಕ್ಕರೆಯ ದ್ರಾವಣ ಮಾಡಿ ಮಕ್ಕಳಿಗೆ ಕುಡಿಸುತ್ತಿರಬೇಕು. ಸಾಮಾನ್ಯವಾಗಿ ಬೇಸಿಗೆಯಲ್ಲಿ ಮಕ್ಕಳು ಹೆಚ್ಚು ಹೆಚ್ಚು ಬೆವರುವುದರಿಂದ ನಿರ್ಜಲೀಕರಣವಾಗುತ್ತದೆ. ಹಾಗಾಗಿ ಪದೇ ಪದೇ ಮನೆಯಲ್ಲಿ ಮಕ್ಕಳಿಗೆ ನೀರು ಉಪ್ಪು ಸಕ್ಕರೆ ದ್ರಾವಣ ತಯಾರಿಸಿ ಪದೇಪದೇ ಕುಡಿಸುತ್ತಿರಬೇಕು. ಇದರಿಂದ ನಿರ್ಜಲೀಕರಣವಾಗದೆ ಮಕ್ಕಳ ಆರೈಕೆ ಮಾಡಬಹುದಾಗಿದೆ. ಅಲ್ಲದೆ ಗೃಹಿಣೀಯರು ಈ ಬೇಸಿಗೆಯಲ್ಲಿ ತೆಳುವಾದ ಮತ್ತು ಬಿಳಿ ನೀಲಿ ಬಣ್ಣದ ಉಡುಪು ಧರಿಸಬೇಕು ಎಂದರು.ಎಲ್ಲಾದರೂ ಓಡಾಡುವಾಗ ಬಿಸಿಲಿನ ತಾಪ ತಾಗದಂತೆ ಛತ್ರಿ ಬಳಸಬೇಕು. ಆದಷ್ಟು ಬೆಳಿಗ್ಗೆ ಮತ್ತು ಸಾಯಂಕಾಲ ಸೂರ್ಯನ ತಾಪ ಕಡಿಮೆ ಇರುವಾಗ ನಿಮ್ಮ ಕೆಲಸ ಕಾರ್ಯ ನಿರ್ವಹಿಸಿಕೊಳ್ಳಬೇಕು. ಅಲ್ಲದೆ ಬೇಸಿಗೆಯಲ್ಲಿ ಮಕ್ಕಳಿಗೆ ತಗಲುಬಹುದಾದ ದಡಾರಾ ಅಮ್ಮ ಬೆವರು ಸಾಲೆ ಆದಾಗ ಮೂಡನಂಬಿಕೆ ಬಿಟ್ಟು ಹತ್ತಿರದ ಸರ್ಕಾರಿ ಆಸ್ಪತ್ರೆಗಳಲ್ಲಿ ಮಕ್ಕಳಿಗೆ ಚಿಕಿತ್ಸೆ ಕೊಡಸಬೇಕು. ನಿಂಬೆಹಣ್ಣಿನಲ್ಲಿ ನೈಸರ್ಗಿಕವಾಗಿ ವಿಟಮಿನ್ ಸಿ ದೊರೆಯುವುದರಿಂದ ಹೆಚ್ಚು ಹೆಚ್ಚು ನಿಂಬೆಹಣ್ಣಿನ ಪಾನಕ ಸೇವಿಸಬೇಕು ಎಂದು ಹೇಳಿದರು.