ನಿರ್ಗತಿಕ ಮಹಿಳೆಗೆ ನೆರವಾದ ಸಚಿವ ಪ್ರಭು ಚವ್ಹಾಣ್

ಬೀದರ: ಜೂ.10:ಪಶುಸಂಗೋಪನೆ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ಬುಧವಾರ ಔರಾದ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ತೆರಳಿ, ಕೋವಿಡ್‍ನಿಂದ ಸಂಕಷ್ಟದಲ್ಲಿರುವವರಿಗೆ ವೈಯಕ್ತಿಕ ಧನಸಾಯ ಮಾಡಿದರು.

ಕೋರೆಕಲ್ ಗ್ರಾಮಕ್ಕೆ ಭೇಟಿ ನೀಡಿ, ನಿರ್ಗತಿಕ ಮಹಿಳೆ ಖಾಜಾಮಾ ಸೈಯದ್‍ಸಾಬ್ ಅವರೊಂದಿಗೆ ಮಾತನಾಡಿಸಿ, ಅವರ ಸಮಸ್ಯೆಗಳನ್ನು ಆಲಿಸಿದರು. ವಿವಿಧ ಯೋಜನೆಗಳಡಿ ಸರ್ಕಾರದಿಂದ ಸೌಲಭ್ಯಗಳನ್ನು ಒದಗಿಸಲು ಕ್ರಮ ವಹಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಅಲ್ಲದೇ ವೈಯಕ್ತಿಕ ಧನಸಹಾಯ ಮಾಡಿ ಔದಾರ್ಯ ಮೆರೆದರು.

ಕೋವಿಡ್‍ನಿಂದ ಮೃತಪಟ್ಟ ಪಕ್ಷದ ಪ್ರಮುಖ ಕಾರ್ಯಕರ್ತರಾದ ನಾಗೂರ(ಬಿ) ಗ್ರಾಮದ ಓಂಕಾರ ಸ್ವಾಮಿ ಹಾಗೂ ಲಾಧಾ ಗ್ರಾಮದ ಬಾಪುರಾವ ಕಾಳೆಕರ್ ಅವರ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಲ್ಲಿ ಧೈರ್ಯ ತುಂಬಿ ವೈಯಕ್ತಿಕ ಧನಸಹಾಯ ಮಾಡಿದರು. ನನಗೆ ಪಕ್ಷದ ಕಾರ್ಯಕರ್ತರೇ ಮಿಗಿಲು. ಏಳು-ಬೀಳುಗಳಲ್ಲಿ ಅವರ ಜೊತೆಗೆ ನಿಂತಿರುತ್ತೇನೆ. ಕಾರ್ಯಕರ್ತರ ಕುಟುಂಬದ ಸಹಕಾರಕ್ಕೆ ಸದಾ ಸಿದ್ಧನಿದ್ದೇನೆ. ಯಾವುದೇ ರೀತಿಯ ಸಮಸ್ಯೆ ಇರಲಿ ತಮ್ಮನ್ನು ನೇರವಾಗಿ ಭೇಟಿ ಮಾಡಬಹುದು ಎಂದು ಮೃತರ ಕುಟುಂಬಸ್ಥರಿಗೆ ಧೈರ್ಯ ನೀಡಿದರು.

ಜಿಲ್ಲೆಯಲ್ಲಿ ಕೋವಿಡ್ ಹಂತ ಹಂತವಾಗಿ ನಿಯಂತ್ರಣಕ್ಕೆ ಬರುತ್ತಿದೆ. ವೈರಸ್‍ನ್ ಚೈನ್ ಲಿಂಕ್ ಸಂಪೂರ್ಣ ಕತ್ತರಿಸಬೇಕಿದೆ. ಈ ನಿಟ್ಟಿನಲ್ಲಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸ್ಯಾನಿಟೈಸರ್ ಬಳಕೆ ಮಾಡಬೇಕು. ಆಗಾಗ ಸೋಪ್‍ನಿಂದ ಕೈ ತೊಳೆಯುತ್ತಿರಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಲಸಿಕೆ ಪಡೆಯಬೇಕು ಎಂದು ಉಪಸ್ಥಿತರಿದ್ದವರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ತಾಲ್ಲೂಕು ಅಧ್ಯಕ್ಷರಾದ ರಾಮಶೆಟ್ಟಿ ಪನ್ನಾಳೆ, ಮುಖಂಡರಾದ ಬಂಡೆಪ್ಪಾ ಕಂಟೆ, ರಮೇಶ ಉಪಾಸೆ, ಗಿರೀಶ್ ವಡೆಯರ್, ಸುರೇಶ ಭೋಸ್ಲೆ ಹಾಗೂ ಇತರರಿದ್ದರು.