ನಿರ್ಗತಿಕರಿಗೆ ಆಹಾರ ನೀಡುವ ಕಾರ್ಯ ದೊಡ್ಡದು

ಕಲಬುರಗಿ: ಮೇ.29:ಪ್ರಕೃತಿ ಮಾನವ ಸೇರಿದಂತೆ ಎಲ್ಲ ಜೀವಿಗಳಿಗೆ ಹಸಿವನ್ನು ನೀಡಿದೆ. ಹಸಿವು ನೀಗಿಸಲು, ಜೀವಿಯ ಉಳಿವು, ಬೆಳವಣಿಗೆಗೆ ಆಹಾರ ಅವಶ್ಯಕವಾಗಿದೆ. ಇಂದಿಗೂ ಕೂಡಾ ಅನೇಕ ಜನ ನಿರ್ಗತಿಕರು, ಬಡವರು ಆಹಾರ ದೊರೆಯದೆ ಹಸಿವಿನಿಂದ ಬಳಲುತ್ತಿದ್ದಾರೆ. ಅವರಿಗೆ ಆಹಾರ ನೀಡಿ, ಬದುಕಿಗೆ ಆಸರೆಯಾಗುವ ಕಾರ್ಯ ದೊಡ್ಡದಾಗಿದೆ ಎಂದು ಉಪನ್ಯಾಸಕ, ಸಮಾಜ ಸೇವಕÀ ಎಚ್.ಬಿ.ಪಾಟೀಲ ಹೇಳಿದರು.

    ವಿಶ್ವ ಹಸಿವಿನ ದಿನಾಚರಣೆ ಪ್ರಯುಕ್ತ 'ಕಾಯಕಯೋಗಿ ಸೇವಾ ಸಂಸ್ಥೆ' ವತಿಯಿಂದ ಭಾನುವಾರ ನಗರದ  ವಿವಿಧ ಸ್ಥಳಗಳಲ್ಲಿರುವ ನಿರ್ಗತಿಕರಿಗೆ ಆಹಾರದ ಪೊಟ್ಟಣಗಳನ್ನು ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ನಮ್ಮ ದೇಶದಲ್ಲಿ ಪ್ರತಿದಿನವು 224 ಕೋಟಿ ರೂಪಾಯಿ ಮೌಲ್ಯದ ಆಹಾರ ವ್ಯರ್ಥವಾಗುತ್ತಿದೆ ಎಂದು ಅಂದಾಜಿಸಲಾಗಿದೆ. 195.5 ದಶಲಕ್ಷ ಜನರಿಗೆ ಆಹಾರದ ಕೊರತೆಯಿಂದ ಮಾರಣಾಂತಿಕ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಒಟ್ಟು ಜನಸಂಖ್ಯೆಯ ಶೇ.14.8 ರಷ್ಟು ಜನರು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಆದ್ದರಿಂದ ಪ್ರತಿಯೊಬ್ಬರು ಅವಶ್ಯಕತೆಯಷ್ಟೆ ಆಹಾರವನ್ನು ಬಳಸಿ, ವ್ಯರ್ಥವಾಗದಂತೆ ಜಾಗೃತಿ ವಹಿಸುವುದು ಜವಬ್ದಾರಿಯಾಗಿದೆ. ಜಗತ್ತಿನಲ್ಲಿ ಪ್ರತಿವರ್ಷ 5 ದಶಲಕ್ಷ ಮಕ್ಕಳು ಹಸಿವಿನಿಂದ ಸಾವಿಗೀಡಾಗುತ್ತಿದ್ದಾರೆ. ಆದ್ದರಿಂದ ಆಹಾರದ ಬಗ್ಗೆ ಕಾಳಜಿ ವಹಿಸಬೇಕು ಎಂದರು.

 ಕಾಯಕಯೋಗಿ ಸೇವಾ ಸಂಸ್ಥೆಯ ಅಧ್ಯಕ್ಷ ಕೇದರನಾಥ ಕುಲಕರ್ಣಿ ಮಾತನಾಡಿ, ನಗರದ ಶರಣಬಸವೇಶ್ವರ ದೇವಸ್ಥಾನದ ಆವರಣ, ರೈಲು, ಬಸ್ ನಿಲ್ದಾಣ ಸೇರಿದಂತೆ ಕೆಲವು ಸ್ಥಳಗಳಲ್ಲಿ ಕಂಡುಬರುವ ನಿರ್ಗತಿಕರು, ಬಿಕ್ಷುಕರು, ಬಡವರಿಗೆ ನಮ್ಮ ಸಂಸ್ಥೆಯ ವತಿಯಿಂದ ಕಳೆದ ಕೆಲವು ವರ್ಷಗಳಿಂದ ದಿನನಿತ್ಯ ಆಹಾರವನ್ನು ನೀಡಲಾಗುತ್ತಿದೆ. ಶರಣರ ನಾಡಾದ ಕಲಬುರಗಿಯಲ್ಲಿ ನಿರ್ಗತಿಕರು ಹಸಿವಿನಿಂದ ಬಳಲಬಾರದು, ಅವರಲ್ಲಿ ದೇವರನ್ನು ಕಾಣುವ ಪ್ರವೃತ್ತಿ ನಮ್ಮದಾಗಿದ್ದು, ಇದರಿಂದ ನಮಗೆ ಸಾಕಷ್ಟು ಆತ್ಮತೃಪ್ತಿ ದೊರೆಯುತ್ತಿದೆ. ಇದಕ್ಕೆ ಸಹೃದಯರ ಸಹಕಾರ ದೊರೆಯುತ್ತಿದೆ ಎಂದು ತಮ್ಮ ಮನದಾಳದ ಇಂಗಿತವನ್ನು ವ್ಯಕ್ತಪಡಿಸಿದರು.
 ನೀಲಕಂಠಯ್ಯ ಹಿರೇಮಠ, ನರಸಪ್ಪ ಬಿರಾದಾರ ದೇಗಾಂವ, ಧರ್ಮಣ್ಣ ಧನ್ನಿ, ಹಣಮಂತರಾಯ ಎಸ್.ಅಟ್ಟೂರ್ ಸೇರಿದಂತೆ ಮತ್ತಿತರರಿದ್ದರು.