ನಿರೋಗಿಗಳಾಗ ಬಯಸುವವರ ಮೊದಲ ಆದ್ಯತೆ ಪ್ರಕೃತಿ ಚಿಕಿತ್ಸೆ


ದಾವಣಗೆರೆ.ನ.೧೯; ಪ್ರಕೃತಿ ಚಿಕಿತ್ಸೆ, ನಿಸರ್ಗ ಚಿಕಿತ್ಸೆ, ನಿಸರ್ಗೋಪಚಾರ, ನ್ಯಾಚುರೋಪತಿ, ನೇಚರ್ ಕ್ಯೂರ್ ಹೀಗೆ ಹಲವು ನಾಮಗಳಿಂದ ಕರೆಯಲ್ಪಡುವ ಈ ಚಿಕಿತ್ಸೆಯು ಒಂದು ವೈಜ್ಞಾನಿಕ ಚಿಕಿತ್ಸಾ ಪದ್ಧತಿಯಾಗಿದ್ದು ಇದು ಕೇವಲ ರೋಗವನ್ನು ಮಾತ್ರ ದೂರ ಮಾಡುವುದಲ್ಲದೆ, ಮನುಷ್ಯನ ಜೀವನ ಶೈಲಿಯನ್ನು ಸರಿಮಾಡಿ, ದೇಹದ ರೋಗ ನಿರೋಧಕ ಶಕ್ತಿ ಹಾಗೂ ಚೈತನ್ಯ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ದೇಹದ ವಿಸರ್ಜನಾಂಗಗಳನ್ನು ಉತ್ತೇಜನಗೊಳಿಸಿ ದೇಹದ ಕಶ್ಮಲಗಳನ್ನು ಹೊರಹಾಕಿ ಮಾನವನ ಆರೋಗ್ಯವನ್ನು ನೈಸರ್ಗಿಕವಾಗಿ ವೃದ್ಧಿಗೊಳಿಸುತ್ತದೆ. ಪ್ರಕೃತಿ ಚಿಕಿತ್ಸೆಯಿಂದ ಎಲ್ಲ ರೀತಿಯ ಕಾಯಿಲೆಗಳನ್ನು ಔಷಧ ರಹಿತವಾಗಿ ಸರಿಪಡಿಸಬಹುದು ಮಾತ್ರವಲ್ಲದೆ, ನಿರೋಗಿಗಳಾಗ ಬಯಸುವ ಪ್ರತಿಯೊಬ್ಬರೂ ಪ್ರಕೃತಿ ಚಿಕಿತ್ಸಾ ಪದ್ದತಿಯನ್ನು ಮೊದಲ ಆದ್ಯತೆಯನ್ನಾಗಿ ಸ್ವೀಕರಿಸಬೇಕೇ ಹೊರತು, ಕೊನೆಯ ಆದ್ಯತೆಯನ್ನಾಗಿ ಅಲ್ಲವೆಂದು ಶ್ರೀಮತಿ ತುಳಸಿ ರಾಮರಾಜು ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕಿ ಡಾ. ವಿಂಧ್ಯ ಗಂಗಾಧರ ವರ್ಮ ಸಲಹೆ ನೀಡಿದರು.
ದಾವಣಗೆರೆ ನಗರದ, ವಿದ್ಯಾನಗರ ಮುಖ್ಯ ರಸ್ತೆಯಲ್ಲಿರುವ ಶ್ರೀಮತಿ ತುಳಸಿ ರಾಮರಾಜು ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ವತಿಯಿಂದ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಕಾರ್ಗಲ್ ಕ್ಯಾಪ್ಟನ್ ಶಿವನಗೌಡ ತೆಗ್ಗಿರವರು ಮಾತನಾಡಿ, ದೇಶ ಸೇವೆಯನ್ನೇ ಮುಖ್ಯ ಗುರಿಯಾಗಿಟ್ಟುಕೊಂಡು ಸೇನೆಯಲ್ಲಿ ಸೇರಿಕೊಂಡು ಧೈರ್ಯ, ಸಾಹಸ, ಉತ್ಸಾಹ ಯುಕ್ತವಾಗಿ ಜೀವನದುದ್ದಕ್ಕೂ ಹೆಮ್ಮೆಯಿಂದ ಎದೆಗುಂದದೆ ಬಂದ ತೊಂದರೆಗಳನ್ನು ಎದುರಿಸುತ್ತಾ ಮುಂದೆ ನುಗ್ಗಲು ಪಣವನ್ನು ತೊಟ್ಟು ಸೇನೆಗೆ ಸೇರಿದವರು ನಾವು. ಈಗ ಸೇನೆಗೆ ಸೇರುವವರೂ ಕೂಡ ಈ ರೀತಿಯಲ್ಲಿಯೇ ದೃಢವಾಗಿ ನಿರ್ಧರಿಸಿ ಸೇನೆಗೆ ಸೇರಬೇಕೆಂದು ಸಲಹೆ ನೀಡಿದರು. ತಾವು ಕೆಲಸ ನಿರ್ವಹಿಸಿದ ಜಾಗಗಳಾದ ಶ್ರೀನಗರ, ರಾಜಸ್ಥಾನ, ಅಸ್ಸಾಮ್, ಅರುಣಾಚಲ ಪ್ರದೇಶ, ಪಂಜಾಬ್, ಉತ್ತರ ಪ್ರದೇಶ, ಪ್ರೋಕ್ರಾನ್, ಲೆಹ್ ಲಡಾಕ್, ಸಿಯಾಚಿನ್ ಎಲ್ಲ ಭಾಗಗಳಲ್ಲಿ ತಾವು ಕಂಡಂತಹ ಪ್ರಕೃತಿಯ ಬಗ್ಗೆ ತಿಳಿಸಿದ್ದಲ್ಲದೆ ಅಲ್ಲಿಯ ಸ್ಥಾನಿಕ ಚಿಕಿತ್ಸೆಗಳ ಬಗ್ಗೆ ಅಲ್ಲಿನ ಜನರಿಗಿರುವ ಅರಿವನ್ನು ತಿಳಿಸಿದರು. ಪ್ರಕೃತಿ ಚಿಕಿತ್ಸೆಯು ನಿರೌಷಧ ಚಿಕಿತ್ಸಾ ಪದ್ದತಿಯಾಗಿದ್ದು, ಪ್ರತಿಯೊಬ್ಬರೂ ಇದನ್ನು ತಮ್ಮ ಜೀವನಕ್ರಮವಾಗಿ ಸ್ವೀಕರಿಸುವುದರಿಂದ ಎಲ್ಲ ರೀತಿಯ ಕಾಯಿಲೆಗಳಿಂದ ಹೊರಬರಬಹುದೆಂದು ತಿಳಿಸಿದರು. ಶಿಸ್ತು ಬದ್ದ ಜೀವನ ಶೈಲಿಯನ್ನು ತಿಳಿಸಿಕೊಡುವ ಅತ್ಯುತ್ತಮ ಚಿಕಿತ್ಸಾ ಪದ್ದತಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆ, ತಾವು ಕರ್ತವ್ಯ ನಿರ್ವಹಿಸಿದ ಜಾಗಗಳ ಉಷ್ಣಾಂಶಗಳನ್ನು ನೆನೆದರೆ ಇಂದಿಗೂ ಮೈ ಜುಮ್ಮೆನುತ್ತದೆ. ಈ ಪ್ರಕೃತಿ ಚಿಕಿತ್ಸೆಯ ನಿಯಮಬದ್ದ ಜೀವನಶೈಲಿಯು ಎಲ್ಲ ಸಂದರ್ಭಗಳಲ್ಲಿಯೂ ಆರಾಮವಾಗಿ ಕೆಲಸ ನಿರ್ವಹಿಸಲು ಸಾಧ್ಯತೆಯನ್ನು ಮಾಡಿಕೊಟ್ಟಿತ್ತು. ಈಗ ನಾನು ನಿವೃತ್ತಿ ಹೊಂದಿದ್ದರೂ ಮಾಜಿ ಸೈನಿಕ ಎಂಬ ಬಿರುದು ನನ್ನ ಮನವನ್ನು ಸಂತೋಷವಾಗಿಡುತ್ತದೆ. ಈ ನಮ್ಮ ಭಾರತ ದೇಶವು ಆರೋಗ್ಯ ಸಂಪತ್ತನ್ನು ಪಡೆಯ ಬೇಕಾದರೆ ಅದು ನಮ್ಮ ಋಷಿ ಮುನಿಗಳ ಪರಂಪರೆಯ ವೈದ್ಯಕೀಯ ಚಿಕಿತ್ಸಾ ಪದ್ದತಿಯಾದ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ನಿಯಮಗಳ ಪರಿಪಕ್ವ ಪಾಲನೆಯಿಂದ ಮಾತ್ರವೇ ಸಾಧ್ಯವೆಂದು ತಿಳಿಸಿದರು.
ಕಾರ್ಯಕ್ರಮದ ಸ್ವಾಗತವನ್ನು ಆಸ್ಪತ್ರೆಯ ಮ್ಯಾನೇಜರ್ ಆದ ಪ್ರಹ್ಲಾದ್ ಕೊಪ್ಪದ್ ಮಾಡಿ, ವಂದನಾರ್ಪಣೆಯನ್ನು ಕು. ರೋಜಾರವರು ನೆರವೇರಿಸಿದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ಸಿಬ್ಬಂದಿಗಳಾದ ಶೋಭಾ ಮತ್ತು ನಾಗಣ್ಣರವರು ಉಪಸ್ಥಿತರಿದ್ದರು.