ನಿರುದ್ಯೋಗ ಸಮಸ್ಯೆಗೆ ಕೌಶಲ್ಯ ತರಬೇತಿ ಪರಿಹಾರ.

 ಚಿತ್ರದುರ್ಗ. ಜ.೧೦; ಮಹಿಳೆಯರು ಮನೆಯಲ್ಲಿ ಪೇಂಟಿಂಗ್, ಹೊಲಿಗೆ, ಎಂಬ್ರಾಯಿಡರಿ, ಕರಕುಶಲ ಕಲೆಗಳನ್ನು ಕಲಿತವರು ಮುಂದೆ ಜೀವನದಲ್ಲಿ ಕಷ್ಟ ಬಂದಾಗ ದುಡಿಮೆ ಮಾಡಿಕೊಳ್ಳಲು ಸಹಾಯವಾಗುತ್ತದೆ. ಫ್ಯಾಷನ್ ಡಿಸೈನಿಂಗ್, ಟೈಲರಿಂಗ್ ಬದುಕಿಗೆ ಆಸರೆಯಾಗುತ್ತದೆ, ಯಾವುದಾದರೂ ಒಂದು ಕಲೆಯ ಬಗ್ಗೆ ಮಹಿಳೆಯರು ತರಬೇತಿ ಹೊಂದಿ, ಅದನ್ನ ಅಭಿವದ್ಧಿಗೊಳಿಸಿಕೊಳ್ಳಬೇಕು ಎಂದುರುಡ್‌ಸೆಟ್ ಸಂಸ್ಥೆಯ ಹೊಲಿಗೆ ತರಬೇತಿ ಶಿಕ್ಷಕಿಯಾದ ಶ್ರೀಮತಿ ಶೋಭ ತಿಳಿಸಿದರು.ಅವರು ನಗರದ ಕೆಳಗೋಟೆಯಲ್ಲಿರುವ ರುಡ್‌ಸೆಟ್ ಸಂಸ್ಥೆಯಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಕಲ್ಪವೃಕ್ಷ ಚಾರಿಟೇಬಲ್ ಟ್ರಸ್ಟ್, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಸಂಯುಕ್ತವಾಗಿ ಆಯೋಜಿಸಿದ್ದ “ನಿರುದ್ಯೋಗ ಸಮಸ್ಯೆಗೆ ಕೌಶಲ್ಯ ತರಬೇತಿ ಪರಿಹಾರ” ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಮಹಿಳೆಯರು ಜೀವನದಲ್ಲಿ ನೆಲೆಯೂರಲು ಇಂಥ ಕರಕುಶಲಗಳು ಅನುಕೂಲಕರವಾಗುತ್ತದೆ, ಶಾಲೆಗಳಲ್ಲಿ ಶಾಲಾ ಶಿಕ್ಷಕಿಯರು ಯಾವುದಾದರೊಂದು ಸಣ್ಣ ಕರಕುಶಲ ಕೌಶಲ್ಯವನ್ನ ಹೇಳಿಕೊಡುತ್ತಾರೆ, ಆದರೆ ತರಬೇತಿಗಳಿಗೆ ಬಂದಾಗ ಬಹಳ ಆಳವಾಗಿ, ದುಡಿಮೆಗೆ ದಾರಿ ಮಾಡುವಂತಹ ಕರಕುಶಲ ಕೌಶಲ್ಯಗಳನ್ನು ಹೇಳಿಕೊಡಲಾಗುತ್ತದೆ. ತರಬೇತಿ ಶಾಲೆಗಳಲ್ಲಿ ಕಡಿಮೆ ಸಮಯದಲ್ಲಿ ಹೆಚ್ಚು ಜ್ಞಾನವನ್ನು ತುಂಬಲು ಅನುಕೂಲವಾಗುತ್ತದೆ. ಶಿಬಿರಾರ್ಥಿಗಳು ಅಲ್ಲೇ ವಾಸವಾಗಿದ್ದರಂತೂ ಇನ್ನೂ ಹೆಚ್ಚಿನ ತರಬೇತಿಯನ್ನು ಹೊಂದಬಹುದು, ಕರಕುಶಲ ವಸ್ತುಗಳನ್ನು ಪ್ರದರ್ಶನ ಮಾಡಿ, ಮಾರಾಟ ಮಾಡಿ, ಕಲಿಯುವೆ ಸಮಯದಲ್ಲೇ ದುಡಿಮೆಯನ್ನು ಮಾಡಿಕೊಳ್ಳಬಹುದು. ಕೆಲವು ಹೆಣ್ಣು ಮಕ್ಕಳ ಡ್ರೆಸ್‌ಗಳು, ಬ್ಲೌಸ್‌ಗಳು ಸಾವಿರದಿಂದ 5 ಸಾವಿರದವರೆಗೆ ಮಾರಾಟವಾಗುತ್ತಿದೆ, ಫ್ಯಾಷನ್ ಲೋಕ ಅಷ್ಟೊಂದು ಅವರಿಗೆ ಮಾರುಕಟ್ಟೆ ಒದಗಿಸಿ ಕೊಟ್ಟಿದೆ ಎಂದರು.
ಮಹಿಳಾ ಸಂಘಗಳು, ಸ್ವಸಹಾಯ ಸಂಘಗಳು ತರಬೇತಿದಾರನ ಕರಸಿ, ಶಿಬಿರಗಳನ್ನ ಏರ್ಪಡಿಸಿದಾಗ ಇನ್ನೂ ಹೆಚ್ಚು ಜನರಿಗೆ ಈ ಕೌಶಲ್ಯವನ್ನು ತಲುಪಿಸಲು ಅನುಕೂಲವಾಗುವುದು, ಮಹಿಳೆಯರು ಮನೆಯಲ್ಲಿ ಒಂಟಿಯಾಗಿ ಕಲಿಯುವುದಕ್ಕಿಂತ ಗುಂಪುಗುಂಪಾಗಿ ತರಬೇತಿಗಳಲ್ಲಿ ಸೇರಿ ಕಲಿತಾಗ ಅವರು ಸಾಮೂಹಿಕವಾಗಿ ಅಭಿವೃದ್ಧಿ ಹೊಂದಲು ಅನುಕೂಲವಾಗುವುದು ಹಾಗೂ ಸಂಘಟನಾ ಶಕ್ತಿ ಬೆಳೆಯುವುದು. ಅವರು ಬ್ಯಾಂಕಿನಿಂದ ಸಾಲ ಪಡೆದು ತಮ್ಮದೇ ಸ್ವಂತ ಉದ್ದಿಮೆಗಳನ್ನು ಸ್ಥಾಪಿಸಲು ಅನುಕೂಲಕರವಾಗುವುದು, ಮಹಿಳೆಯರಿಗಿಂತ ಗಂಡಸರು ಈಗ ಹೆಚ್ಚು ಫ್ಯಾಷನ್ ಜಗತ್ತಿನಲ್ಲಿ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ. ಪುರುಷರು ಈಗ ಮಹಿಳಾ ವೇಷಭೂಷಣಗಳ ಡಿಸೈನಿಂಗ್‌ಗಳಲ್ಲಿ ಬಾಳ ಮುಂಚುಣಿಯಲ್ಲಿದ್ದಾರೆ, ಮಾರುಕಟ್ಟೆಯಲ್ಲಿ ಅವರು ಸಾವಿರಾರು ರೂಗಳನ್ನ ಸಂಪಾದಿಸುತ್ತಿದ್ದಾರೆ, ಆಗಾಗಿ ತರಬೇತಿಗಳನ್ನು ಪುರುಷರಿಗೂ ಸಹ ಆಯೋಜನೆ ಮಾಡಬಹುದು ಎಂದರು.
ಕಾರ್ಯಕ್ರಮದಲ್ಲಿ ವಿಂಡ್ ಮಿಲ್ ಸಿಟಿ ಅಧ್ಯಕ್ಷರಾದ ಲತಾ ಉಮೇಶ್, ಅಮೃತಾ ಸಂತೋಷ್, ಕಾರ್ಯದರ್ಶಿ ಸುಜಾತಾ ಶ್ರೀಶೈಲಪ್ಪ, ಗೀತಾ ಜಯಣ್ಣ, ಶಿಲ್ಪಾ ಜಗದೀಶ, ಶಿಬಿರಾರ್ಥಿಗಳಾದ ಪ್ರಿಯಾಂಕಾ, ರಕ್ಷಿತಾ, ರಮ್ಯಾ, ಕಲಾ, ರಾಧಾ, ಜ್ಯೋತಿ, ರೋರ‍್ಯಾಕ್ಟ್ ಎಚ್. ಎಸ್. ರಚನ, ಎಚ್.ಎಸ್. ಪ್ರೇರಣಾ ಭಾಗವಹಿಸಿದ್ದರು.