
ಚಿತ್ರದುರ್ಗ, ಮೇ.26: ರಾಜ್ಯದಲ್ಲಿರುವ ಎಲ್ಲಾ ನಿರುದ್ಯೋಗಿಗಳಿಗೂ ಸರ್ಕಾರ ನೀಡಿರುವ ಭರವಸೆಯಂತೆ ನಿರುದ್ಯೋಗ ಭತ್ಯೆ ನೀಡಬೇಕು ಎಂದು ಆಗ್ರಹಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಶನ್ ಅವರು ಇಂದು ಜಿಲ್ಲಾಧಿಕಾರಿ ಕಚೇರಿ ಎದರು ಪ್ರತಿಭಟನೆ ನಡೆಸಿದರು.ಕಳೆದ ಮೇ 20 ರಂದು ಪ್ರಮಾಣ ವಚನ ಸ್ವೀಕರಿಸಿದ ಕಾಂಗ್ರೇಸ್ ಸರ್ಕಾರವು ಚುನಾವಣೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಲು ಮೊದಲ ಮಂತ್ರಿ ಮಂಡಲದ ಸಭೆಯಲ್ಲಿಯೇ ತೀರ್ಮಾನಿಸಿ ಷರತ್ತುಬದ್ದ ಆದೇಶ ಹೊರಡಿಸಿದೆ. ಆದರೆ ಪದವಿ ಮತ್ತು ಡಿಪ್ಲೋಮಾ ಮುಗಿಸಿರುವ ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳು ನಿರುದ್ಯೋಗ ಭತ್ಯೆ ನೀಡುವ ಯುವ ನಿಧಿ ಯೋಜನೆಯ ಪ್ರಕಾರ 2022-23 ನೇ ಶೈಕ್ಷಣಿಕ ವರ್ಷದಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ಮಾತ್ರ ನಿರುದ್ಯೋಗ ಭತ್ಯೆ, ಅದು ಕೂಡ ಎರಡು ವರ್ಷದ ಅವಧಿಗೆ ಮಾತ್ರ ನೀಡಲಾಗುವುದು ಎಂಬ ಷರತ್ತು ವಿಧಿಸಿದೆ. ಹಾಗಾದರೆ ಈ ಅವಧಿಗೂ ಮುನ್ನಾ ಪದವಿ, ಡಿಪ್ಲೋಮಾ ಇನ್ನಿತರ ಕೋರ್ಸ್ ಗಳನ್ನು ಮುಗಿಸಿ ಉದ್ಯೋಗಕ್ಕಾಗಿ ಹಗಲಿರುಳು ಶ್ರಮಿಸುತ್ತಾ, ಜಾತಕ ಪಕ್ಷಿಗಳಂತೆ ಕಾಯುತ್ತಿರುವ ಯುವಜನರು ನಿರುದ್ಯೋಗಿಗಳಲ್ಲವೆ ? ಸ್ವಾವಲಂಬಿಗಳಾಗಿ ಬದುಕಲು ಉದ್ಯೋಗಕ್ಕಾಗಿ ಸುಮಾರು ವರ್ಷಗಳಿಂದ ಮನೆ ಬಿಟ್ಟು ನಗರಗಳಿಗೆ ಬಂದು ಬಾಡಿಗೆ ಕೊಠಡಿಗಳಲ್ಲಿ ಇದ್ದು, ಸ್ವಂತ ಖರ್ಚಿನಲ್ಲೇ ಖಾಸಗಿ ಗ್ರಾಂಥಲಯಗಳಲ್ಲಿ ಸಾವಿರಾರೂ ರೂ.ಗಳನ್ನು ಖರ್ಚು ಮಾಡಿ ಓದುತ್ತಿರುವವರು ನಿರುದ್ಯೋಗಿಗಳಲ್ಲವೆ ? ಎಂದು ಸರ್ಕಾರವನ್ನು ಪ್ರಶ್ನಿಸಿರುವ ಪ್ರತಿಭಟನಾಕಾರರು, ಸುಮಾರು ವರ್ಷಗಳಿಂದ ಉದ್ಯೋಗಕ್ಕಾಗಿ ಖಾಯುತ್ತಿರುವ ನಿರುದ್ಯೋಗಿಗಳನ್ನು ಗುರುತಿಸಿ ನಿರುದ್ಯೋಗ ಭತ್ಯೆಯನ್ನು ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಪ್ರತಿಭಟನೆಯ ನೇತೃತ್ವವನ್ನು ಕೃಷ್ಣ ವಹಿಸಿದ್ದು, ಮಧುಕುಮಾರ್, ಅರುಣ್, ರವಿಕುಮಾರ್, ಮಂಜುನಾಥ್, ಶಿವುಕುಮಾರ್, ಕಿರಣ್ ಕುಮುದಾ ಸೇರಿದಂತೆ ಇತರರು ಭಾಗವಹಿಸಿದ್ದರು.