ನಿರುದ್ಯೋಗ ನಿವಾರಣೆಗೆ ಟಾಟಾ ಸಮೂಹದೊಂದಿಗೆ ರಾಜ್ಯ ಸರ್ಕಾರ ಒಪ್ಪಂದ: ನಮೋಶಿ ಮೆಚ್ಚುಗೆ

ಕಲಬುರಗಿ.ನ.7: ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯದ 150 ಸರ್ಕಾರಿ ಕೈಗಾರಿಕಾv Àರಬೇತಿ ಸಂಸ್ಥೆಗಳನ್ನು ಉನ್ನತೀಕರಿಸುವ ಸಂಬಂಧ ಟಾಟಾ ಟೆಕ್ನಾಲಜಿಸ್ ಲಿಮಿಟೆಡ್ ಅವರ ಸಹ ಭಾಗಿತ್ವದಲ್ಲಿ ಉನ್ನತೀಕರಿಸಲು ಪ್ರತಿ ಸಂಸ್ಥೆಗೆ 30.91 ಕೋಟಿ ರೂ.ಗಳಂತೆ ಒಟ್ಟು 4636.50 ಕೋಟಿ ರೂ.ಗಳ ವೆಚ್ಚ ತಗುಲಲಿದ್ದು, ಯೋಜನೆಗೆ ಟಾಟಾ ಟೆಕ್ನಾಲಜಿಸ್ ಶೇಕಡಾ 88 ರಷ್ಟು ಅಂದರೆ ಪ್ರತಿ ಐಟಿಐಗೆ 27.20 ಕೋಟಿನಂತೆ 150 ಐಟಿಐ ಕಾಲೇಜುಗಳಿಗೆ ಒಟ್ಟು 4080 ಕೋಟಿ ರೂ.ಗಳ ವೆಚ್ಚವನ್ನು ಕೊಡುಗೆಯಾಗಿ ಭರಿಸುತ್ತಿದ್ದು, ಇದೊಂದುರಾಜ್ಯ ಸರ್ಕಾರದ ಐತಿಹಾಸಿಕ ಮೈಲುಗಲ್ಲಾಗಿದ್ದು ಎಂದು ರಾಜ್ಯ ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಬಿಜೆಪಿ ಮುಖಂಡ ಶಶೀಲ್ ಜಿ. ನಮೋಶಿ ಅವರು ಬಣ್ಣಿಸಿದ್ದಾರೆ.
ಇದರಿಂದಾಗಿ ವಿದ್ಯಾರ್ಥಿಗಳಿಗೆ ಅಧುನಿಕ ತಂತ್ರಜ್ಞಾನದ ಕೌಶಲ್ಯ ದೊರೆತು ನಿರುದ್ಯೋಗ ನಿವಾರಣೆಯಾಗುವುದರಲ್ಲಿ ಸಂದೇಹವಿಲ್ಲವೆಂದು ಅವರು ಹೇಳಿಕೆಯಲ್ಲಿ ಶ್ಲಾಘಿಸಿದ್ದಾರೆ.
ಟಾಟಾ ಟೆಕ್ನಾಲಜಿಸ್ ಶೇಕಡಾ 88ರಷ್ಟು ವೆಚ್ಚ ಭರಿಸುವುದರೊಂದಿಗೆ 5 ವರ್ಷಗಳ ಉಚಿತ ಎಎಂಸಿ ಮತ್ತು 2 ವರ್ಷಕ್ಕೆ 300 ಜನರನ್ನು ತರಬೇತುದಾರರಾಗಿ ಉಚಿತವಾಗಿ ಆನ್‍ಲೈನ್ ಪ್ಲಾಟ್ ಫಾರಂನ್ನು ಒದಗಿಸಿ ಯೋಜನೆಗೆ ಮೇ. ಕೆ.ಪಿ.ಎಂ. ಜಿರ್ ಅವರನ್ನು 24 ತಿಂಗಳುಗಳಿಗೆ ಅಂದಾಜು 5.18 ಕೋಟಿ ರೂ.ಗಳ ವೆಚ್ಚದಲ್ಲಿ ನಾಲೆಡ್ಜ್ ಪಾರ್ಟ್‍ನರ್ಸ್ ಆಗಿ ನೇಮಿಸಿಕೊಳ್ಳುವುದಾಗಿ ತಿಳಿಸಿರುತ್ತಾರೆ. ಇದೊಂದು ಮಹತ್ವದ ಹೆಜ್ಜೆಯಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ 150 ಸಂಸ್ಥೆಗಳಲ್ಲಿ ಬಹಳ ಹಳೆಯದಾದ ಯಂತ್ರೋಪಕರಣಗಳನ್ನು ಉಪಯೋಗಿಸಲಾಗುತ್ತಿದ್ದು, ಇತ್ತೀಚಿನ ದಿನಮಾನಗಳ ಅನುಗುಣವಾಗಿ ಸಮಯಕ್ಕೆ ಈ ಯಂತ್ರೋಪಕರಣಗಳು ಅನಾವಶ್ಯಕವಾಗಿದ್ದು, ಅಧುನಿಕ ತಂತ್ರಜ್ಞಾನ ಯಂತ್ರಗಳ ಅವಶ್ಯಕತೆ ಇದ್ದು, ಅಂತರಾಷ್ಟ್ರೀಯ ಮಟ್ಟದ ಉದ್ದಿಮೆಗಳ ಜೊತೆಗೆ ಸ್ಪರ್ಧೆ ಮಾಡಬೇಕಾದರೆ ಅಧುನಿಕ ತಂತ್ರಜ್ಞಾನದ ಅವಶ್ಯಕತೆ ಇತ್ತು. ಈಗ ಆ ಅವಶ್ಯಕತೆಗೆ ಅನುಗುಣವಾಗಿ ಟಾಟಾ ಟೆಕ್ನಾಲಜಿಸ್ ಲಿಮಿಟೆಡ್ ಈ 150 ತರಬೇತಿ ಸಂಸ್ಥೆಗಳನ್ನು ಉನ್ನತೀಕರಿಸಲು ರಾಜ್ಯ ಸರ್ಕಾರದೊಂದಿಗೆ ಸಹಭಾಗಿತ್ವ ಹೊಂದಿರುವುದು ಅಭಿವೃದ್ಧಿಗೆ ಪೂರಕವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದು ಹಬ್ ಮತ್ತು ಸ್ಪೋಕ್ ಮಾಡೆಲ್‍ನಂತೆ ಎಲ್ಲ ಖಾಸಗಿ, ಅನುದಾನಿತ ಮತ್ತುಇತರೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳು ಹಾಗೂ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೂ ಸಹ ಅಧುನಿಕ ಕೌಶಲ್ಯ ತರಬೇತಿಯನ್ನು ಉಪಯೋಗಿಸಿಕೊಳ್ಳಲು ಅವಕಾಶ ಕಲ್ಪಿಸಲಾಗುವುದೆಂದು ಟಾಟಾ ಸಂಸ್ಥೆ ತಿಳಿಸಿದ್ದು, ಇದರಿಂದಾಗಿ ಕೇವಲ ಸರ್ಕಾರಿ ಐಟಿಐಗಳಲ್ಲದೇ ಅನುದಾನಿತ, ಖಾಸಗಿ ಹಾಗೂ ಇತರೆ ಸಂಸ್ಥೆಗಳ ವಿದ್ಯಾರ್ಥಿಗಳಿಗೂ ಇದು ಲಾಭವಾಗಲಿದ್ದು, ಇದರಿಂದಾಗಿ ರಾಜ್ಯದ ವಿದ್ಯಾರ್ಥಿಗಳಿಗೆ ಅಧುನಿಕ ಉನ್ನತ ಮಟ್ಟದ ಕೌಶಲ್ಯ ತಂತ್ರಜ್ಞಾನ ಸಿಗುವುದರಲ್ಲಿ ಸಂದೇಹವಿಲ್ಲ. ನಮ್ಮ ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಸಾಧನೆ ಮಾಡಲು ಸಹಾಯಕವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ನೇತೃತ್ವದ ರಾಜ್ಯ ಸರ್ಕಾರವು ಯಾವಾಗಲೂ ನಿರುದ್ಯೋಗ ನಿವಾರಣೆಗೆ ಶ್ರಮಿಸುತ್ತಿದೆ ಎನ್ನುವುದಕ್ಕೆ ಇದು ಕೈಗನ್ನಡಿಯಾಗಿದೆ. ಈ ಯೋಜನೆಯಲ್ಲಿ ಕಲಬುರ್ಗಿ ವಿಭಾಗಕ್ಕೆ ಸುಮಾರು 40 ಐಟಿಐ ಕಾಲೇಜುಗಳ ಮೇಲ್ದರ್ಜೆಗೇರಿಸಲು ನಿರ್ಧರಿಸಿದ್ದು, ಇದರಿಂದಾಗಿ ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲ ಆಗುವುದರೊಂದಿಗೆ ಉದ್ಯೋಗ ತಾನಾಗಿಯೇ ಹುಡುಕಿಕೊಂಡು ಬರಲಿದೆ. ಮತ್ತು ಇವರಲ್ಲಿ ಅಧುನಿಕಜ್ಞಾನ, ಕೌಶಲ್ಯ ಸಿಗಲಿದೆ. ಈ ರೀತಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿರುವುದರಿಂದ ರಾಜ್ಯದ ಅಭಿವೃದ್ಧಿಯ ಜೊತೆಗೆ ವಿದ್ಯಾರ್ಥಿಗಳಿಗೆ ಉದ್ಯೋಗ ದೊರಕುವುದರೊಂದಿಗೆ ನಿರುದ್ಯೋಗ ನಿವಾರಣೆಯಾಗಲಿದೆ ಎಂದು ನಮೋಶಿಯವರು ಅಭಿಪ್ರಾಯಪಟ್ಟಿದ್ದಾರೆ.