ನಿರುದ್ಯೋಗ ನಿವಾರಣೆಗೆ ಉದ್ಯೋಗ ಖಾತ್ರಿ ವರದಾನ

ನರೇಗಲ್ಲ,ಮೇ.13: ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯು ಗ್ರಾಮದ ಜನರ ನಿರುದ್ಯೋಗ ಸಮಸ್ಯೆ ನಿವಾರಣೆ ಹಾಗೂ ಆರ್ಥಿಕ ಸ್ವಾವಲಂಬನೆಗೆ ಸಹಕಾರಿಯಾಗಿದ್ದು, ಇದನ್ನು ಪ್ರತಿಯೊಬ್ಬರೂ ಸದುಪಯೋಗಪಡಿಸಿಕೊಳ್ಳಬೇಕು ಎಂದು ಗ್ರಾ.ಪಂ ಅಧ್ಯಕ್ಷೆ ರೇಖಾ ವೀರಾಪೂರ ಹೇಳಿದರು.
ಸಮೀಪದ ಅಬ್ಬಿಗೇರಿ ಗ್ರಾ.ಪಂ, ಕೃಷಿ, ತೋಟಗಾರಿಕೆ ಇಲಾಖೆಗಳ ಸಹಯೋಗದಲ್ಲಿ ಸಾಮೂಹಿಕ ಬದು ನಿರ್ಮಾಣ ಕಾವiಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ರೈತರು ಕೃಷಿ ಜಮೀನಿನಲ್ಲಿ ಬದು ನಿರ್ಮಾಣ ಮಾಡಿಕೊಳ್ಳುವುದರಿಂದ ಅಂತರ್ಜಲ ಪ್ರಮಾಣ ಹೆಚ್ಚಾಗಲಿದೆ. ಬದು ನಿರ್ಮಾಣ ಮಾಡಿಕೊಳ್ಳುವುದರಿಂದ ಮಣ್ಣು ಕೊಚ್ಚಿ ಹೋಗದೆ ಗುಂಡಿಗಳಲ್ಲಿಯೇ ಸಂಗ್ರಹವಾಗಲಿದೆ. ಮಳೆಗಾಲದಲ್ಲಿ ಹೆಚ್ಚು ಮಳೆಯಾದಾಗ ನೀರು ಹರಿದು ಕೊಚ್ಚಿ ಹೋಗದಂತೆ ಬದುವಿನಲ್ಲಿ ಮಣ್ಣಿನ ಏರಿ ಹಾಕುವುದರಿಂದ ಮಣ್ಣು ಮತ್ತು ನೀರನ್ನು ತಡೆಹಿಡಿದು ಭೂ ಫಲವತ್ತತೆ ಹಾಗೂ ಅಂತರ್ಜಲ ಹೆಚ್ಚಿಸಿಕೊಂಡು ರೈತರು ಉತ್ತಮ ಇಳುವರಿ ಪಡೆಯಬಹುದಾಗಿದೆ ಎಂದರು.
ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಅಮೀರ್ ನಾಯ್ಕ ಮಾತನಾಡಿ, ಬದು ನಿರ್ಮಾಣ ಕಾಮಗಾರಿಯಲ್ಲಿ ಮೂರು ಮಾದರಿಗಳಿವೆ. 10 ಅಡಿ ಉದ್ದ, 10 ಅಡಿ ಅಗಲ, 1 ಅಡಿ ಆಳ, 10 ಅಡಿ ಉದ್ದ, 5 ಅಡಿ ಅಗಲ, 2 ಅಡಿ ಆಳ ಮತ್ತು 20 ಅಡಿ ಉದ್ದ, 5 ಅಡಿ ಅಗಲ, 1 ಅಡಿ ಆಳದ ಕಂದಕಗಳಿಗೆ ಅವಕಾಶವಿದೆ. ಇದರಿಂದ ಪ್ರತಿ ಕಂದಕವೂ 2700 ಲೀಟರ್ ನೀರು ಹಿಡಿದಿಡುವ ಸಾಮಥ್ರ್ಯ ಹೊಂದಿರುತ್ತದೆ. ಪ್ರತಿ ಎಕರೆ ಪ್ರದೇಶದಲ್ಲಿ 16 ಕಂದಕಗಳು ನಿರ್ಮಾಣವಾಗಲಿವೆ. ಬದು ನಿರ್ಮಾಣ ರೈತರಿಗೆ ಎರಡು ರೀತಿಯ ಲಾಭ ನೀಡುವ ಯೋಜನೆಯಾಗಿದೆ. ಇದರಲ್ಲಿ ದಿನ್ಕೆ 309 ರೂ. ಕೂಲಿ ಹಾಗೂ ಜಮೀನಿನ ಫಲವತ್ತತೆ ಹೆಚ್ಚಲಿದೆ. ಮಣ್ಣು ಮತ್ತು ನೀರು ಸಂರಕ್ಷಿಸಲು ಬದು ನಿರ್ಮಾಣ ಉತ್ತಮ ಯೋಜನೆಯಾಗಿದೆ. ಗ್ರಾಮದ ರೈತರು ತಮ್ಮ ಜಮೀನಿನಲ್ಲಿ ಬದು ನಿರ್ಮಿಸಿಕೊಳ್ಳಲು ಮುಂದಾಗಬೇಕು ಎಂದರು.
ಗ್ರಾ.ಪಂ ಉಪಾಧ್ಯಕ್ಷ ಬಸಪ್ಪ ಕಮ್ಮಾರ, ಸುರೇಶ ನಾಯ್ಕರ, ಸಿದ್ಧು ಹರದಾರಿ, ಶಂಕ್ರಪ್ಪ ಇಟಗಿ, ತಿಪ್ಪಣ್ಣ ತಲ್ಲೂರ, ಹನಮಂತಪ್ಪ ದ್ವಾಸಲ್, ಆನಂದ ಹಿರೇಮನಿ, ದೇವಪ್ಪ ಜಂತ್ಲಿ, ನೀಲಪ್ಪ ದ್ವಾಸಲ್, ಸಚಿನ್ ಪಾಟೀಲ, ಡಾ. ಶಶಿಕಾಂತ ನಿಡಗುಂದಿ, ಸುಶೀಲವ್ವ ಐಹೊಳ್ಳಿ, ಚನ್ನವ್ವ ತಳವಾರ, ರೇಣವ್ವ ಹಳ್ಳಿ, ರೇಖಾ ಅವರಡ್ಡಿ, ಸಿದ್ಧಮ್ಮ ಶಿವಪೂಜಿ, ಅಕ್ಕವ್ವ ಡೊಳ್ಳಿನ, ವಿಜಯಲಕ್ಷ್ಮೀ ಬಸವರಡ್ಡೇರ, ಜ್ಯೋತಿ ತೇಗ್ಗಿನಕೇರಿ, ರತ್ನವ್ವ ಮಾಳಶೆಟ್ಟಿ, ಲಲಿತಾ ರಾಠೋಡ ಸೇರಿದಂತೆ 3 ಸಾವಿರಕ್ಕೂ ಅಧಿಕ ಕೂಲಿ ಕಾರ್ಮಿಕರು ಉದ್ಯೋಗ ಖಾತ್ರಿ ಕೆಲಸದಲ್ಲಿ ಪಾಲ್ಗೊಂಡಿದ್ದರು.