ನಿರುದ್ಯೋಗಿ ಯುವಕ, ಯುವತಿಯರಿಗೆ ಯಶಸ್ವಿ ಉದ್ಯಮದಾರರನ್ನಾಗಿಸಲು ರುಡ್‍ಸೆಟ್ ಪಾತ್ರ ಪ್ರಮುಖ: ಜಿಲ್ಲಾಧಿಕಾರಿ ಟಿ. ಭೂಬಾಲನ್

????????????????????????????????????

ವಿಜಯಪುರ,ಜೂ.8:ಇಲ್ಲಿನ ರುಡ್‍ಸೆಟ್ ಸಂಸ್ಥೆ ಇಂದು ಸಾವಿರಾರು ನಿರುದ್ಯೋಗಿ ಯುವಕ ಯುವತಿಯರಿಗೆ ವಿವಿಧ ಕೌಶಲ್ಯ ತರಬೇತಿಗಳನ್ನು ನೀಡಿ ಅವರನ್ನು ಒಬ್ಬ ಯಶಸ್ವಿ ಉದ್ಯಮದಾರರನ್ನಾಗಿ ಹೊರ ಹೊಮ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಜಿಲ್ಲಾಧಿಕಾರಿ ಟಿ ಭೂಬಾಲನ್ ಅವರು ಹೇಳಿದರು.
ನಗರದಲ್ಲಿ ರುಡ್‍ಸೆಟ್ ಸಂಸ್ಥೆಯ 2023-24 ನೇ ಸಾಲಿನ ವಾರ್ಷಿಕ ವರದಿ ಬಿಡುಗಡೆ ಮಾಡಿ ಅವರು ಮಾತನಾಡಿದರು. ಧರ್ಮಸ್ಥಳ ಶಿಕ್ಷಣ ಸಂಸ್ಥೆ ಹಾಗೂ ಕೆನರಾ ಬ್ಯಾಂಕಿನ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ಈ ಸಂಸ್ಥೆಯು ಗ್ರಾಮೀಣ ಯುವಕ ಯುವತಿಯರಿಗೆ ಆಸಕ್ತ ತರಬೇತಿಗಳನ್ನು ನೀಡಿ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುತ್ತಿರುವುದು ಬಹಳ ಹೆಮ್ಮೆಯಾಗುತ್ತದೆ ಎಂದು ನುಡಿದರು.
ಈ ಸಂಸ್ಥೆ ಉತ್ತಮ ಗುಣಮಟ್ಟದ ತರಬೇತಿಗಳನ್ನು ನೀಡುವುದರ ಜೊತೆ ಅವರ ವ್ಯಕ್ತಿತ್ವದಲ್ಲಿ ಗುಣಾತ್ಮಕ ಬದಲಾವಣೆ ತರುತ್ತಿದ್ದು, ಆಸಕ್ತ ಗ್ರಾಮೀಣ ನಿರುದ್ಯೋಗಿ ಯುವಕರು ಸಂಸ್ಥೆಯಲ್ಲಿ ನೀಡುವ ವಿವಿಧ ತರಬೇತಿಗಳ ಲಾಭವನ್ನು ಉಪಯೋಗಿಸಿಕೊಂಡು ಜೀವನದಲ್ಲಿ ಮುಂದೆ ಬರಬೇಕು ಎಂದು ಅವರು ಕರೆ ನೀಡಿದರು.
ರುಡ್‍ಸೆಟ್ ಸಂಸ್ಥೆ 2023-24 ನೇ ಸಾಲಿನಲ್ಲಿ 797 ಅಭ್ಯರ್ಥಿಗಳಿಗೆ ತರಬೇತಿ ನೀಡಿದ್ದು ಅದರಲ್ಲಿ 620 ಅಭ್ಯರ್ಥಿಗಳು ಉದ್ಯಮದಲ್ಲಿ ತೊಡಗಿದ್ದಾರೆ. ಸಂಸ್ಥೆ ಕಳೆದ 34 ವರ್ಷಗಳಲ್ಲಿ 34214 ಅಭ್ಯರ್ಥಿಗಳಿಗೆ ತರಬೇತಿ ನೀಡಿದ್ದು ಅದರಲ್ಲಿ 27076 ಅಭ್ಯರ್ಥಿಗಳು ತಮ್ಮ ಉದ್ಯಮ ನಡೆಸಿ ಒಳ್ಳೇಯ ಜೀವನ ನಡೆಸುತ್ತಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕಾರ್ಯಕ್ರಮದಲ್ಲಿ ವಿಜಯಪುರ ಜಿಲ್ಲೆಯ ಅಗ್ರಣೀಯ ಬ್ಯಾಂಕಿನ ಪ್ರಬಂಧಕ ನರೇಂದ್ರ ಬಾಬು ಎನ್.ವಿ, ಸಂಸ್ಥೆಯ ನಿರ್ದೇಶಕÀ ಮತ್ತಣ್ಣ ಧನಗರ, ಸಂಸ್ಥೆಯ ಹಿರಿಯ ಉಪನ್ಯಾಸಕರುಗಳಾದÀ ಜಗದೀಶ ಪೂಜಾರ, ಮಲ್ಲಿಕಾರ್ಜುನ ಹತ್ತಿ, ಅತಿಥಿ ಉಪನ್ಯಾಸಕರುಗಳಾದ ಶಿವಾನಂದ ರಾಠೋಡ, ಚಂದ್ರಕಾಂತ, ಸಂಸ್ಥೆಯ ಸಿಬ್ಬಂದಿ ವರ್ಗದವರು ಹಾಗೂ ದ್ವಿ ಚಕ್ರ ವಾಹನ ರಿಪೇರಿ ಮತ್ತು ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ಶಿಬಿರಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.