ನಿರೀಕ್ಷೆ ಹೆಚ್ಚಿಸಿದ ಅಗ್ರಸೇನಾ

ಆಕ್ಷನ್ ಫ್ಯಾಮಿಲಿ, ಲವ್, ಸೆಂಟಿಮೆಂಟ್ ಅಂಶಗಳನ್ನು ಒಳಗೊಂಡ  “ಅಗ್ರಸೇನಾ” ಟೀಸರ್, ಟ್ರೈಲರ್ ಮೂಲಕ ಚಿತ್ರ ಕುತೂಹಲ ಕೆರಳಿಸಿದ್ದು ನಿರೀಕ್ಷೆ ಹೆಚ್ಚು ಮಾಡಿದೆ.

ಹಳ್ಳಿ  ಹಾಗೂ ನಗರದಲ್ಲಿ ಡಬಲ್ ಟ್ರ್ಯಾಕ್‍ನಲ್ಲಿ  ಸಾಗುವ ಕಥಾಹಂದರ ಚಿತ್ರದಲ್ಲಿದ್ದು,  ತಂದೆ-ಮಗನ ಸಂಬಂಧದ ಕಥೆ ಒಂದು ಕಡೆಯಾದರೆ, ನಾಯಕ ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಹೇಗೆ ಹೋರಾಡುತ್ತಾನೆ ಎನ್ನುವುದು ಮತ್ತೊಂದು ಟ್ರಾಕ್‍ನಲ್ಲಿ ಸಾಗುವುದು ಚಿತ್ರದ ಕುತೂಹಲ.

ಮುರುಗೇಶ್ ಕಣ್ಣಪ್ಪ ನಿರ್ದೇಶನ ಮಾಡಿರುವ ಅಗ್ರಸೇನಾ ಚಿತ್ರ  ನಾಳೆ ರಾಜ್ಯಾದ್ಯಂತ ತೆರೆಗೆ ಬರಲಿದೆ. ಮಮತಾ ಜಯರಾಮರೆಡ್ಡಿ ಹಾಗೂ ಜಯರಾಮರೆಡ್ಡಿ  ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

ಚಿತ್ರದಲ್ಲಿ  ಅಮರ್ ವಿರಾಜ್ ಹಾಗೂ ಅಗಸ್ತ್ಯ ಬೆಳಗೆರೆ ನಾಯಕರಾಗಿ ಕಾಣಿಸಿಕೊಂಡಿದ್ದಾರೆ, ರಚನಾ ದಶರಥ್, ಭಾರತಿ ಹೆಗ್ಡೆ ನಾಯಕಿಯರಾಗಿ ಚಿತ್ರದಲ್ಲಿ ನಟಿಸಿದ್ದಾರೆ.

ಹಿರಿಯನಟ ರಾಮಕೃಷ್ಣ ಅವರು ಚಿತ್ರದಲ್ಲಿ  ಗ್ರಾಮದ ಮುಖಂಡ ಸೂರಪ್ಪ ಹಾಗೂ ನಾಯಕನ ತಂದೆಯ ಪಾತ್ರ ನಿರ್ವಹಿಸಿದ್ದು, ಇದು ಅವರ 200ನೇ ಚಿತ್ರ ಎನ್ನುವುದು ವಿಶೇಷ.  

ಎಂ.ಎಸ್. ತ್ಯಾಗರಾಜ್ ಸಂಗೀತದಲ್ಲಿ 5 ಹಾಡುಗಳಿವೆ.  ಆರ್.ಪಿ.ರೆಡ್ಡಿ ಛಾಯಾಗ್ರಹಣವಿದೆ. ಚೇತನ್ ಕುಮಾರ್, ಗೌಸ್‍ಪೀರ್, ವಿಜಯ್, ಶಿವು ಬೆರಗಿ ಅವರ ಸಾಹಿತ್ಯ,  ವಿಜಯ್ ಎಂ. ಕುಮಾರ್ ಅವರ  ಸಂಕಲನ ಈ ಚಿತ್ರಕ್ಕಿದೆ. ನಿರ್ಮಾಪಕರ ಪುತ್ರಿ ತನಿಶರೆಡ್ಡಿ ಚಿತ್ರದ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ.

ತಂದೆ ಮಗನ ಬಾಂಧವ್ಯ

ಅಗ್ರಸೇನಾ ಚಿತ್ರ ತಂದೆ ಮಗನ ಬಾಂಧವ್ಯದ ಕಥನ ಒಳಗೊಂಡಿದೆ. ಹಿರಿಯ ಗಾಯಕ ಗುರುರಾಜ್ ಹೊಸಕೋಟೆ ಹಾಡಿರುವ ಉತ್ತರ ಕರ್ನಾಟಕ ಶೈಲಿಯ ಹಾಡು ಗಮನ ಸೆಳೆದಿದೆ. ನಿರ್ದೇಶಕರು ಕಥೆ ಹೇಗೆ ಹೇಳಿದ ಹಾಗೆ ಸಿನಿಮಾ ಮಾಡಿಕೊಟ್ಟಿದ್ದಾರೆ. ಇದು ಖುಷಿಯ ಸಂಗತಿ. ಚಿತ್ರದ ಟ್ರೈಲರ್ ಬಗ್ಗೆ ಮತ್ತಷ್ಟು ನೀರೀಕ್ಷೆ ಹೆಚ್ಚು ಮಾಡಿದೆ.ಈ ವಾರ ತೆರೆಗೆ ಬರಲಿದ್ದು ಚಿತ್ರ ಎಲ್ಲರಿಗೂ ಇಷ್ಟವಾಗಲಿದೆ.

– ಮಮತಾ ಜಯರಾಮರೆಡ್ಡಿ,, ನಿರ್ಮಾಪಕಿ