ನಿರಾಶ್ರಿತ ಮಹಿಳೆಗೆ ಆಸರೆಯಾದ ಯೋಜನೆ

ದೇವದುರ್ಗ.ಡಿ.೨೧- ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ತಾಲೂಕಿನ ವಂದಲಿ ಗ್ರಾಮದ ನಿವಾಸಿ ವಾತ್ಸಲ್ಯ ಫಲಾನುಭವಿ ಹನುಮಮ್ಮಗೆ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಹೊಸ ಮನೆ ನಿರ್ಮಾಣ ಕಾಮಗಾರಿ ಬುಧವಾರ ಭೂಮಿಪೂಜೆ ನೆರವೇರಿಸಲಾಯಿತು.
ಜಿಲ್ಲಾ ನಿರ್ದೇಶಕ ಮೋಹನ್ ನಾಯ್ಕ್ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆ ಶ್ರೀವೀರೇಂದ್ರ ಹೆಗ್ಗಡೆ ಕನಸಿನಂತೆ ರಾಜ್ಯಾದ್ಯಂತ ಸಮಾಜಮುಖಿ ಕೆಲಸ ಮಾಡುತ್ತಿದೆ. ವಂದಲಿ ಗ್ರಾಮದ ಕಡುಬಡವಿ ಹನುಮಮ್ಮ ಅವರಿಗೆ ವಾತ್ಸಲ್ಯ ಯೋಜನೆಯಡಿ ಮನೆ ನೀಡಲಾಗಿದೆ. ನಿರ್ಮಾಣಕ್ಕೆ ಚಾಲನೆ ನೀಡಿದ್ದು ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸಿ ಹಸ್ತಾಂತರಿಸಲಾಗುವುದು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಿರ್ಗತಿಕ ಕುಟುಂಬಗಳ ಅರ್ಹ ಫಲಾನುಭವಿಗಳಿಗೆ ಸೂರು ನೀಡುವ ಮಹತ್ಕಾರ್ಯಕ್ಕೆ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ವಿ.ಹೆಗ್ಗಡೆ ಕಲ್ಪನೆಯಲ್ಲಿ ಮೂಡಿಬಂದ ವಾತ್ಸಲ್ಯಮಯಿ ಕಾರ್ಯಕ್ರಮ ಬಡತನ ಕುಟುಂಬಗಳ ಕಣ್ಣೀರು ಒರೆಸುವ ಕಾರ್ಯ ಮಾಡುತ್ತಿದೆ. ರಾಜ್ಯಾದ್ಯಂತ ಹಲವಾರು ನಿರ್ಗತಿಕರ ಬದುಕನ್ನು ಹಸನಾಗಿಸಿರುವ, ಬದುಕು ಕಟ್ಟಿಕೊಟ್ಟ ಕಾರ್ಯಕ್ರಮವಾಗಿದೆ. ತಾಲೂಕಿನಲ್ಲಿ ೬೦ಕ್ಕೂ ಹೆಚ್ಚು ನಿರ್ಗತಿಕ ಕುಟುಂಬಕ್ಕೆ ಯೋಜನೆಯಿಂದ ಮಾಸಾಶನ ನೀಡಲಾಗುತ್ತಿದೆ ಎಂದರು.
ತಾಲೂಕು ಯೋಜನಾಧಿಕಾರಿ ರಾಜೇಶ್ ಎಂ.ಕಾನರ್ಪ, ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯ ಬಲಭೀಮ್, ತಾ.ಪಂ. ಮಾಜಿ ಸದಸ್ಯ ಮಲ್ಲನಗೌಡ ಮಾಪಾ, ಯಲ್ಲಪ್ಪ ಮೇಸ್ತ್ರಿ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಗುರುಲಿಂಗಮ್ಮ, ಮೇಲ್ವಿಚಾರಕ ಮಂಜುನಾಥ್, ರವಿಗಣೇಶ್ ಇತರರಿದ್ದರು.