ನಿರಾಶ್ರಿತರ ಶಿಬಿರದಲ್ಲಿ ಅಗ್ನಿ ಅವಘಡ: ೨೧ ಮಂದಿ ಮೃತ್ಯು

ಗಾಜಾ ಪಟ್ಟಿ, ನ.೧೮- ಗಾಜಾ ಪಟ್ಟಿಯಲ್ಲಿರುವ ಜಬಾಲಿಯಾ ಜನನಿಬಿಡ ನಿರಾಶ್ರಿತರ ಶಿಬಿರದ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ೧೦ ಮಕ್ಕಳು ಸೇರಿದಂತೆ ಕನಿಷ್ಠ ೨೧ ಜನರು ಸಾವನ್ನಪ್ಪಿದ ಘಟನೆ ನಡೆದಿದೆ. ಘಟನೆಯಲ್ಲಿ ಹಲವು ಮಂದಿ ಗಂಭೀರ ರೀತಿಯ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಏರುವ ಸಾಧ್ಯತೆ ಇದೆ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಗಾಜಾದಲ್ಲಿರುವ ಎಂಟು ನಿರಾಶ್ರಿತರ ಶಿಬಿರಗಳ ಪೈಕಿ ಜಬಾಲಿಯಾ ಕೂಡ ಒಂದಾಗಿದ್ದು, ಇದರಲ್ಲೇ ಅಗ್ನಿ ಅವಘಡ ಸಂಭವಿಸಿದೆ. ಮೂಲಗಳ ಪ್ರಕಾರ ಅಡುಗೆ ಕೋಣೆಯೊಂದರಲ್ಲಿ ಗ್ಯಾಸ್ ಸೋರಿಕೆಯಿಂದ ಅಗ್ನಿ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ. ಆದರೆ ಇದರ ಬಗ್ಗೆ ಹೆಚ್ಚಿನ ತನಿಖೆ ಮುಂದುವರೆದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉತ್ತರ ಗಾಜಾದಲ್ಲಿರುವ ಇಂಡೋನೇಶ್ಯಾ ಆಸ್ಪತ್ರೆಯ ತುರ್ತು ಸೇವೆ ವಿಭಾಗದ ನಿರ್ದೇಶಕ ಡಾ. ಅಬು ಲಾಲ, ಇದೊಂದು ಭೀಕರ ದುರಂತವಾಗಿದ್ದು, ವಿಡಿಯೋದಲ್ಲಿ ತೋರಿಸಿರುವಂತೆ ಇಡೀ ಕಟ್ಟಡಕ್ಕೆ ಅಗ್ನಿ ಆವರಿಸಿದೆ. ಸದ್ಯಅವಘಡವನ್ನು ಹತೋಟಿಗೆ ತರಲಾಗಿದ್ದರೂ ಸಾವಿನ ಸಂಖ್ಯೆ ಮತ್ತಷ್ಟು ಏರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಉರಿಯುತ್ತಿರುವ ಕಟ್ಟಡದ ಹೊರಗೆ ಜನರು ಕಿರುಚುತ್ತಿರುವುದು ಕಂಡುಬಂದರೆ, ಸಂತ್ರಸ್ತರ ಸಂಬಂಧಿಕರು ಬೀದಿಗಳಲ್ಲಿ ಅಳುತ್ತಾ ಪ್ರಾರ್ಥಿಸುತ್ತಿರುವ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇನ್ನೂ ಕೆಲವು ಮೂಲಗಳ ಪ್ರಕಾರ, ವಿದ್ಯುತ್ ಜನರೇಟರ್‌ಗೆ ಬೇಕಾದ ಗ್ಯಾಸೋಲಿನ್ ಅನ್ನು ಶೇಖರಿಸಿಟ್ಟ ಕಡೆ ಅಗ್ನಿ ಅವಘಡ ಸಂಭವಿಸಿದ್ದು, ಇಡೀ ಕಟ್ಟಡಕ್ಕೆ ವ್ಯಾಪಿಸಿದೆ ಎನ್ನಲಾಗಿದೆ. ವೆಸ್ಟ್ ಬ್ಯಾಂಕ್ ಮೂಲದ ಪ್ಯಾಲೆಸ್ತೀನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಇದನ್ನು ರಾಷ್ಟ್ರೀಯ ದುರಂತ ಎಂದು ಕರೆದಿದ್ದು, ಅಲ್ಲದೆ ಶುಕ್ರವಾರ ಶೋಕಾಚರಣೆಯ ದಿನವನ್ನಾಗಿ ಘೋಷಿಸಿದ್ದಾರೆ.