
ಸಂಜೆವಾಣಿ ವಾರ್ತೆ
ಚಿತ್ರದುರ್ಗ, ಆ. 22 – ನಾಗರಪಂಚಮಿ ಹಾಲು ಚೆಲ್ಲುವ ಹಬ್ಬವಾಗದೆ ಹಾಲು ಕುಡಿಸುವ ಹಬ್ಬವಾಗಬೇಕಿದೆ ಎಂದು ಶ್ರೀ ಬಸವಪ್ರಭು ಸ್ವಾಮಿಗಳು ನುಡಿದರು.ಗೋನೂರು ನಿರಾಶ್ರಿತರ ಕೇಂದ್ರದಲ್ಲಿ ಶ್ರೀ ಮುರುಘರಾಜೇಂದ್ರ ಬೃಹನ್ಮಠ, ಚಿನ್ಮೂಲಾದ್ರಿ ರೋಟರಿ ಸಂಸ್ಥೆ ಹಾಗು ಎಸ್.ಜೆ.ಎಂ. ಬ್ಯಾಂಕ್‌ನ ಸಹಯೋಗದಲ್ಲಿ ನಡೆದ ಹಾಲು ವಿತರಣಾ ಕಾರ್ಯಕ್ರಮದಲ್ಲಿ ನಿರಾಶ್ರಿತರಿಗೆ ಹಾಲು-ಹಣ್ಣುಗಳನ್ನು ವಿತರಿಸಿ, ಶ್ರೀಗಳು ಮಾತನಾಡಿದರು.ನಿರಾಶ್ರಿತರ ಕೇಂದ್ರದಲ್ಲಿ ಆಧ್ಯಾತ್ಮಿಕವಾದ ಪರಿಸರ ನಿರ್ಮಾಣವಾಗಿದೆ. ಬಡವರು, ನಿರಾಶ್ರಿತರಲ್ಲಿ ದೇವರಿದ್ದಾನೆ. ವಿಕಲಚೇತನರಲ್ಲಿ ದೇವರನ್ನು ಕಾಣಬೇಕು. ಪಂಚಮಿ ಹಬ್ಬದಂದು ಅನೇಕರು ಹುತ್ತಕ್ಕೆ ಹಾಲನ್ನೆರೆಯುತ್ತಾರೆ. ಆದರೆ ಅದೇ ಹಾಲನ್ನು ಮಕ್ಕಳಿಗೆ, ವೃದ್ಧರಿಗೆ, ಹಸಿದವರಿಗೆ ನೀಡಿದರೆ ಅವರಲ್ಲಿ ಪೌಷ್ಟಿಕಾಂಶ ಹೆಚ್ಚಾಗುತ್ತದೆ. ಮೂಢನಂಬಿಕೆಗಳನ್ನು ಆಚರಣೆ ಮಾಡಬಾರದು. ಮೂಢ ಆಚರಣೆಗಳಿಂದ ವ್ಯಕ್ತಿ ಅಥವಾ ಸಮಾಜದ ಅಭಿವೃದ್ಧಿ ಅಸಾಧ್ಯ. ಜಗತ್ತು ಸ್ವರ್ಗ ಆಗಬೇಕಾದರೆ ಮೂಢನಂಬಿಕೆಗಳನ್ನು ನಿರಾಕರಿಸಬೇಕೆಂದರು.ಜಿಲ್ಲಾ ನ್ಯಾಯಾಧೀಶರು ಹಾಗು ಆಡಳಿತಾಧಿಕಾರಿ ಶ್ರೀಮತಿ ಬಿ.ಎಸ್. ರೇಖಾ ಮಾತನಾಡಿ, ಮಡದಿ ಮಕ್ಕಳನ್ನು ಸಾಕಿ ಸಲುಹಿ ಕುಟುಂಬದ ಜವಾಬ್ದಾರಿಯನ್ನು ನಿರ್ವಹಿಸಿ, ಕೊನೆಗೆ ಜೀವನದ ಮುಪ್ಪಾವಸ್ಥೆಯನ್ನು ಕುಟುಂಬದೊAದಿಗೆ ನೆಮ್ಮದಿಯಾಗಿ ಕಳೆಯದೆ ನೀವೆಲ್ಲ ಆಶ್ರಮದಲ್ಲಿರುವುದು ದುಃಖದ ಸಂಗತಿ. ಇಂದು ಜನರಲ್ಲಿ ಅವಿಭಕ್ತ ಮರೆಯಾಗಿ ವಿಭಕ್ತ ಕುಟುಂಬದ ಕಲ್ಪನೆ ಮೂಡುತ್ತಿದೆ. ಎಲ್ಲರೂ ಸೇರಿ ಬದುಕುವ ಆಲೋಚನೆಗಳು ನಮ್ಮಲ್ಲಿ ಮರೆಯಾಗಿವೆ. ಇಲ್ಲಿ ನೀವೆಲ್ಲ ಪರಸ್ಪರ ಸಹೋದರ ಸಹೋದರಿಯರಂತೆ ಜೀವನ ಸಾಗಿಸಬೇಕು. ಚಿಕ್ಕವಳಿದ್ದಾಗಲೇ ನನಗೆ ನ್ಯಾಯಾಧೀಶೆಯಾಗಬೇಕು ಹಾಗು ವೃದ್ಧಾಶ್ರಮ ತೆರೆದು ಆಶ್ರಯ ಕಲ್ಪಿಸಬೇಕೆನ್ನುವ ಕಲ್ಪನೆ ನನ್ನಲ್ಲಿ ಮೂಡಿತ್ತು. ಅದರಂತೆ ಮುಂದೆ ವದ್ಧಾಶ್ರಮ ತೆರೆದು ಅಲ್ಲಿಯೇ ಇರುತ್ತೇನೆಂದರು.ಬAಡಾಯ ದೃಷ್ಟಿ ವಿಷಯ ಕುರಿತು ಮಾತನಾಡಿದ ಶ್ರೀ ಮುರುಘೇಂದ್ರ ಸ್ವಾಮಿಗಳು, ಬಂಡಾಯ ದೃಷ್ಟಿ ಮನೆಯಿಂದಲೇ ಪ್ರಾರಂಭವಾಗುತ್ತದೆ. ಮಕ್ಕಳಿಗೆ ಪ್ರೀತಿ ತೋರಿಸದೇ ಹೋದರೆ ಬಂಡಾಯ ಏಳುತ್ತಾರೆ. ಬ್ರಿಟೀಷರ ದೌರ್ಜನ್ಯ ದಬ್ಬಾಳಿಕೆ ವಿರುದ್ಧ ಭಾರತೀಯರು ಬಂಡಾಯವೆದ್ದರು. ಸಮಾಜದಲ್ಲಿ ನ್ಯಾಯ, ಧರ್ಮ, ನೀತಿ ನೆಲೆಸಬೇಕು. ಬಸವಾದಿ ಶರಣರು ಸಮಾನತೆಗಾಗಿ ಬಂಡಾಯವೆದ್ದಿದ್ದರು. ಜನರನ್ನು ಅತ್ಯಂತ ಗೌರವದಿಂದ ಕಾಣಬೇಕು ಎಂದು ಹೇಳಿದರು.ಡಾ. ಅವಿನಾಶ್ ಕವಿ ಮಾತನಾಡಿ, ಕಲ್ಯಾಣ ಎಂದರೆ ಮಂಗಳಕರವಾದುದು. ಪ್ರತಿಯೊಬ್ಬ ವ್ಯಕ್ತಿಯಲ್ಲಿ ಕಲ್ಯಾಣದ ಆಲೋಚನೆ ಬಿತ್ತಬೇಕು. ಬಸವಾದಿ ಶರಣರು ಮುಖ್ಯವಾಗಿ ಮಾಡಿದ ಕೆಲಸ ಇದು. ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನವು ಭಾರತದ ಕಟ್ಟ ಕಡೆಯ ವ್ಯಕ್ತಿಗೂ ಕಲ್ಯಾಣದ ಪ್ರಯೋಜನ ತಲುಪಬೇಕು ಎಂಬುದಾಗಿತ್ತು ಎಂದು ತಿಳಿಸಿದರು.ಶ್ರೀ ಶಿವಬಸವ ಸ್ವಾಮಿಗಳು, ಶ್ರೀ ಬಸವಾದಿತ್ಯ ದೇವರು, ಎಸ್.ಜೆ.ಎಂ. ಬ್ಯಾಂಕ್‌ನ ವ್ಯವಸ್ಥಾಪಕ ಟಿ.ಕೆ. ರಾಜಶೇಖರ್, ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಗುಂಡಮ್ಮ, ಉಪಾಧ್ಯಕ್ಷ ಮಲ್ಲಿಕಾರ್ಜುನ್, ಶ್ರೀಮತಿ ವೀಣಾ ಸುರೇಶ್‌ಬಾಬು, ಶಂಕ್ರಪ್ಪ, ಎಂ. ಮಹದೇವಯ್ಯ ಇದ್ದರು.ತೋಟಪ್ಪ ಉತ್ತಂಗಿ ಮತ್ತು ಸಂಗಡಿಗರು ವಚನ ಪ್ರಾರ್ಥನೆ ಹಾಡಿದರು. ಪಿ.ಟಿ. ಜ್ಞಾನಮೂರ್ತಿ ಸ್ವಾಗತಿಸಿದರು. ಶ್ರೀಮತಿ ಪ್ರತಿಭಾ ನಿರೂಪಿಸಿದರು.