ನಿರಗುಡಿಯಲ್ಲಿ ಭಾವೈಕ್ಯದ ಜಾತ್ರೆಯಲ್ಲಿ ಸಿದ್ಧೇಶ್ವರ ಪಲ್ಲಕ್ಕಿ-ಪಿಂಜಾರ ಮೆರವಣಿಗೆ

ಆಳಂದ:ಎ.11: ತಾಲೂಕಿನ ನಿರಗುಡಿ ಗ್ರಾಮದಲ್ಲಿ ಶ್ರೀ ಸಿದ್ಧೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿಸೋಮವಾರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಿದ್ಧೇಶ್ವರ ಪಲ್ಲಕ್ಕಿ ಉತ್ಸವದಲ್ಲಿ ಮಹಿಬೂಬ ಸುಬಾನಿ ಪಿಂಚಾರದ ಮೆರವಣಿಗೆ ಕೈಗೊಂಡ ಭಕ್ತಾದಿಗಳಿಗೆ ದರ್ಶನ ನೀಡುವ ಮೂಲಕ ಎಂದಿನಂತೆ ಭಾವೈಕ್ಯದ ಜಾತ್ರೆ ಗಮನ ಸೆಳೆಯಿತು.

ಬೆಳಗಿನ ಜಾವ 3:00ಗಂಟೆಗೆ ದೇಶಮುಖರ ಮನೆಯಿಂದ ಶಬೀನಿ, ನಂದಿಕೋಲ ಮೆರವಣಿಗೆ ಮೂಲಕ ಗ್ರಾಮದ ಹೊರವಲಯದ ಶ್ರೀ ಸಿದ್ಧೇಶ್ವರ ದೇವಸ್ಥಾನಕ್ಕೆ ತಲುಪಿ ಸೂರ್ಯದಯ ಮುನ್ನ ಪಲ್ಲಕ್ಕಿ ಉತ್ಸವ ಮೂಲಕ ದೇವರ ಮೂರ್ತಿ ಗ್ರಾಮದಲ್ಲಿ ಭಕ್ತಾದಿಗಳು ತೆಂಗು ಕಾಯಿ ಕರ್ಪೂರ ಬೆಳಗಿ ಭಕ್ತಿಯನ್ನು ಸಮರ್ಪಿಸಿದರು. ಮೆರವಣಿಗೆಯಲ್ಲಿ ವಾದ್ಯ ವೈಭವ ಭಜನೆ ಕಾಯಿಕೋಲ ದೀಪ ಕೈಯಲ್ಲಿ ಹಿಡಿದು ಜೈಘೋಷದೊಂದಿಗೆ ದೇಶಮುಖ ಮನೆಯವರೆಗೆ ಪಲ್ಲಕ್ಕಿ ತಲುಪಿತು. ನಂತರ ಜಾನಪದ ಕಲಾತಂಡಗಳಿಂದ ಗೀ ಗೀ ಪದಗಳು ಮತ್ತು ಮಧ್ಯಾಹ್ನ ಜಂಗೀ ಪೈಲ್ವಾನರಿಂದ ಜಂಗೀ ಕುಸ್ತಿ ಪಂದ್ಯಾವಳಿಯಲ್ಲಿ ಕೊನೆಯ ಕುಸ್ತಿ ಗೆದ್ದ ಪಟುವಿಗೆ ಬೆಳ್ಳಿ ಖಡ್ಯಾ ನೀಡಿ ಗೌರವಿಸಲಾಯಿತು. ನಂತರ ರಂಗು ರಂಗಿನ ಮದ್ದು ಸುಡುವ ಕಾರ್ಯಕ್ರಮ ರಾತ್ರಿ ಬಸವಕಲ್ಯಾಣದ ಬಸವಣ್ಣಾ ನಾಟ್ಯ ಕಂಪನಿಯ ಪ್ರದರ್ಶನ ಕೈಗೊಂಡ ತಾಯಿ ಇಲ್ಲದ ತವರು ಸಾಮಾಜಿಕ ನಾಟಕ ನಡೆಯಿತು.

ಜಾತ್ರ ಸಮಿತಿಯ ಮುಖಂಡ ಸಿದ್ಧಣ್ಣರಾವ್ ಎಂ. ದೇಶಮುಖ, ಚಂದ್ರಕಾಂತ ಅಣೂರೆ, ಅಪ್ಪಾಸಾಬ ದೇಶಮುಖ, ರಾಜು ಗಾಡೆಕರ್, ಶಿವಾನಂದ ನಾಗೂರೆ, ಗುಂಡಪ್ಪ ಅಣೂರೆ, ಪ್ರಕಾಶ ಪಿಪಳೆ, ಧನರಾಜ ಕೋರೆ, ಮಂಜುನಾಥ ಮೂಲಗೆ, ಶಿವಲಿಂಗಪ್ಪ ಕೋರೆ, ರಮೇಶ ಮೂಲಗೆ, ಚನ್ನಪ್ಪ ನಾಗೂರೆ ಸೇರಿದದಂತೆ ಸಮಸ್ತ ಗ್ರಾಮಸ್ಥರು ಹಾಗೂ ನೆರೆ ಹೊರೆಯ ಗ್ರಾಮಗಳಿಂದ ಅನೇಕ ಭಕ್ತಾದಿಗಳು ಭಾಗವಹಿಸಿದ್ದರು.