
ಮಾನ್ವಿ,ಜು.೨೪-
ಭಾರತದಲ್ಲಿ ಹಕ್ಕುವಂಚಿತ ಸಮುದಾಯಗಳಿಗೆ ಪುನಃ ಹಕ್ಕು, ಸೌಲಭ್ಯಗಳನ್ನು ಒದಗಿಸಲು ಅವಿರತವಾಗಿ ಶ್ರಮವಹಿಸಿದ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೋರಾಟದ ಹೆಜ್ಜೆಗಳನ್ನು ತಿಳಿದು ನಿರಂತರವಾಗಿ ಹೋರಾಟ ಮುಂದೆ ಸಾಗಿಸಿದಾಗ ಮಾತ್ರ, ಬಾಬಾ ಸಾಹೇಬರ ಆಶಯಗಳು ಈಡೇರುತ್ತವೆ ಎಂದು ಸಂತ ರಾಯಪ್ಪರ ದೇವಾಲಯದ ವಿಚಾರಣೆ ಗುರುಗಳಾದ ವಂದನೀಯ ಫಾದರ್ ರಾಯಪ್ಪ ಜಾಗೀರ ಪನ್ನೂರು ಅಭಿಪ್ರಾಯ ವ್ಯಕ್ತಪಡಿಸಿದರು.
ಮಾನವಿ ತಾಲೂಕಿನ ಜಾಗೀರ ಪನ್ನೂರು ಗ್ರಾಮದ ಸೀಮಾ – ಚಿನ್ನಪ್ಪ ಬಡಿಗೇರ್ ಇವರ ಮನೆಯಲ್ಲಿ ಬಹುಜನ ಸಂಘರ್ಷ ಸಮಿತಿಯಿಂದ ಭಾನುವಾರ ಆಯೋಜಿಸಿದ್ದ ೬೫ನೇ ಮನೆ-ಮನೆಗೆ ಅಂಬೇಡ್ಕರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಭಾಷಣಕಾರರಾಗಿ ಮಹಿಳಾ ಜಾಗೃತಿ ಸಂಘಟನೆ ಪೋತ್ನಾಳ ಸಂಯೋಜಕ ದೇವಪುತ್ರಪ್ಪ ಪೋತ್ನಾಳ ಮಾತನಾಡಿ, ಅಸ್ಪೃಶ್ಯತೆಯ ನೋವನ್ನು ಬಾಬಾ ಸಾಹೇಬರು ಸ್ವತಃ ಅನಭವಿಸಿ ಮುಂದಿನ ಪೀಳಿಗೆ ಸಮಾನತೆಯಿಂದ ಬದುಕುವುದಕ್ಕಾಗಿ ಸರ್ವ ಶ್ರೇಷ್ಠವಾದ ಸಂವಿಧಾನವನ್ನು ರಚಿಸಿದ್ದಾರೆ. ಮೂಲತಃ ಶಿಕ್ಷಣ ವಂಚಿತ ಜನಾಂಗದಲ್ಲಿ ಹುಟ್ಟಿ ಅಗಾದವಾದ ಶಿಕ್ಷಣ ಪಾಂಡಿತ್ಯ ಪಡೆದ ಡಾ.ಬಿ.ಆರ್.ಅಂಬೇಡ್ಕರ್ ರವರು ದೇಶದ ಪ್ರತಿಯೊಬ್ಬ ಪ್ರಜೆಗೂ ಸ್ಪೂರ್ತಿಯಾಗಿದ್ದಾರೆ ಎಂದರು.
ಪ್ರಾಸ್ತಾವಿಕವಾಗಿ ಬಹುಜನ ಸಂಘರ್ಷ ಸಮಿತಿ ಅಧ್ಯಕ್ಷ ಜೆ.ಶರಣಪ್ಪ ಬಲ್ಲಟಗಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಕಟ್ಟಡ ಕಾರ್ಮಿಕ ಯೂನಿಯನ್ ಪೋತ್ನಾಳ ಅಧ್ಯಕ್ಷ ಚಿನ್ನಪ್ಪ ಜಾಗೀರ ಪನ್ನೂರು ಮಾತನಾಡಿದರು. ಕಾರ್ಯಕ್ರಮ ಮುಕ್ತಾಯದ ಕೊನೆಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರವನ್ನು ಮನೆಯವರಿಗೆ ಹಸ್ತಾಂತರಿಸಲಾಯಿತು, ಮರಿಯಪ್ಪ ಜಾಗೀರ ಪನ್ನೂರು ನಿರೂಪಿಸಿ, ವಂದಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಜನಜಾಗೃತಿ ಸಂಘಟನೆಯ ಅಧ್ಯಕ್ಷ ಯೇಸಪ್ಪ ಪೋತ್ನಾಳ, ಗ್ರಾ.ಪಂ.ಮಾಜಿ ಅಧ್ಯಕ್ಷ ಈರಣ್ಣ ಪೋತ್ನಾಳ, ದುರುಗಪ್ಪ, ಮರಿಯಪ್ಪ, ಸುಭಾಷ್, ಶಿವುಕುಮಾರ್, ಯೇಸಪ್ಪ, ಬಸಲಿಂಗಪ್ಪ, ಭೀಮಯ್ಯ, ಈರಪ್ಪ, ಹುಚ್ಚಪ್ಪ, ಮರಿಯಮ್ಮ ಇತರರು ಭಾಗವಹಿಸಿದ್ದರು.