ನಿರಂತರ ವಿಮಾನ ಹಾರಾಟಕ್ಕೆ ಕ್ರಮ: ಕೇಂದ್ರ ಸಚಿವ ಭಗವಂತ ಖೂಬಾ

(ಸಂಜೆವಾಣಿ ವಾರ್ತೆ)
ಬೀದರ್:ಫೆ.26: 2008 ರಿಂದ ನಿರಂತರ ಹೊರಾಟದ ಫಲವಾಗಿ 2020ರಲ್ಲಿ ಆರಂಭವಾದ ಬೀದರ ವಿಮಾನ ನಿಲ್ದಾಣವು ಸಾಕಷ್ಟು ಏಳು ಬೀಳುಗಳ ಮಧ್ಯೆಯೂ ಇಂದಿಗೆ ಮೂರು ವರ್ಷಗಳನ್ನು ಪೂರೈಸಿದ್ದು. ವಿಮಾನ ನಿಲ್ದಾಣದ ನಿರ್ವಹಣೆಯ ಜವಾಬ್ದಾರಿ ಹೊಂದಿದ ಜಿ.ಎಮ್.ಆರ್ ಸಂಸ್ಥೆಯೂ ಉತ್ತಮ ನಿರ್ವಹಣೆ ಮಾಡುತ್ತಿದೆ ಎಂದು ಕೇಂದ್ರ ನೂತನ ನವೀಕರಿಸಬಹುದಾದ ಇಂಧನ ಮೂಲ ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ ರಾಜ್ಯ ಖಾತೆ ಸಹ ಸಚಿವರಾದ ಭಗವಂತ ಖೂಬಾ ಹೇಳಿದರು
ಅವರು ಶನಿವಾರ ಬೀದರ ವಿಮಾನ ನಿಲ್ದಾಣ ಆವರಣದಲ್ಲಿ ಬೀದರ ವಿಮಾನ ನಿಲ್ದಾಣದ ಮೂರನೇ ವರ್ಷದ ವಾರ್ಷಿಕೊತ್ಸವ ಹಿನ್ನೇಲೆಯಲ್ಲಿ ಜಿ.ಎಮ್.ಆರ್ ಸಂಸ್ಥೆಯಿಂದ ಆಯೋಜಿಸಿದ ಸಸಿ ನೆಡುವ ಮತ್ತು ರಕ್ತದಾನ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೊವೀಡ್ ಕಾರಣದಿಂದ ಮಧ್ಯದಲ್ಲಿ ವಿಮಾನ ಹಾರಾಟ ಸ್ಥಗಿತಗೊಂಡಿತ್ತು. ಕೊವೀಡ್ ನಂತರ ಮತ್ತೆ ವಿಮಾನ ಹಾರಾಟ ಆರಂಭವಾಗಿ ಸ್ಟಾರ್ ಏರ್‍ಲೈನ್ ಸಂಸ್ಥೆ ನಿರಂತರ ಹಾಗೂ ಸರಿಯಾದ ಸಮಕ್ಕೆ ವಿಮಾನ ಹಾರಾಟ ನಡೆಸುತ್ತಿಲ್ಲ ಎಂದು ಸ್ಥಳಿಯರಿಂದ ದೂರ ಬಂದ ಹಿನ್ನೆಲೆಯಲ್ಲಿ ಇಗಾಗಲೇ ಸ್ಟಾರ್ ಏರ್‍ಲೈನ್ಸ್ ಸಂಸ್ಥೆಯೊದಿಗೆ ಚರ್ಚಿಸಿದ್ದು, ಇದು ದಿನನಿತ್ಯ ವಿಮಾನ ಹಾರಾಟ, ಸಮಯ ಬದಲಾವಣೆ ಸೇರಿದಂತೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದೆ ಎಂದರು.
ಈಗಾಗಲೇ ಇಂಡಿಯೋ ಸಂಸ್ಥೆಯೊದಿಗೂ ಸಹ ಚರ್ಚಿಸಿದ್ದು ಅದು ಕೂಡ ಮುಂದಿನ ದಿನಗಳಲ್ಲಿ ಬೀದರನಿಂದ ವಿವಿಧ ನಗರಗಳಿಗೆ ವಿಮಾನ ಹಾರಾಟ ನಡೆಸುವ ಭರವಸೆ ನೀಡಿದ್ದು.
ತನ್ನ ಸರ್ವೆ ಕಾರ್ಯವನ್ನು ಇಂಡಿಗೋ ಸಂಸ್ಥೆ ಆರಂಭಗೊಳಿಸಿದೆ ಎಂದ ಅವರು ಈ ಎರಡು ಸಂಸ್ಥೆಗಳು ನೀಡಿದ ಭರವಸೆ ಫಲಶೃತಿಗೊಂಡಲ್ಲಿ ಏಪ್ರೀಲ್‍ನಲ್ಲಿ ನಿರಂತವಾಗಿ ಬೀದರನಿಂದ ವಿವಿಧ ನಗರಗಳಿಗೆ ವಿಮಾನ ಹಾರಾಟವಾಗಲಿವೆ ಎಂದು ಅವರು ಭರವಸೆ ನೀಡಿದರು.
ಸ್ಟಾರ್ ಏರ್‍ಲೈನ್ಸನ ಕಾರ್ಯನಿರ್ವಹಣೆ ಮುಖ್ಯಸ್ಥ ಭುಪ್ಪಣ್ಣ ಮಾತನಾಡಿ ಬೀದರನಿಂದ ನಿರಂತರ ವಿಮಾನ ಹಾರಾಟಕ್ಕೆ ಈಗಾಗಲ ನೆಟವರ್ಕ ತಂಡದೊದಿಗೆ ಚರ್ಚೆ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ದಿನನಿತ್ಯ ಹೆಚ್ಚಿನ ಬೀದರ ವಿಮಾನನಿಲ್ದಾಣದಿಂದ ಹೆಚ್ಚಿ ವಿಮಾನ ಹಾರಾಟಗೊಳಿಸಲಾಗುವುದು ಎಂದು ಭರವಸೆ ನೀಡಿದ ಅವರು ಬೀದರನಿಂದ ಹೊಸ ಏಮ್‍ರೆರ್-170 ವಿಮಾನ ಹಾರಾಟ ಮಾಡಲು ನಿರ್ಧರಿಸಿದ್ದು ಇದು ಒಟ್ಟು 76 ಆಸನಗಳ ವ್ಯವಸ್ಥೆ ಹೊಂದಿದ್ದು ಇದರಲ್ಲಿ 12 ಬಿಸಿನೆಸ್ ಕ್ಲಾಸ್ ಆಸನಗಳು ಹೊಂದಿರಲಿವೆ ಹಾಗೂ ಗಂಟೆಗೆ 850 ಕಿ.ಮಿ ವೇಗದಲ್ಲಿ ಚಲಿಸಲಿದೆ ಎಂದು ಅವರು ಹೇಳಿದರು.
ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಶನ್ ಅಧ್ಯಕ್ಷ ಸೂರ್ಯಕಾಂತ ನಾಗಾಮಾರಪಳ್ಳಿ ಮಾತನಾಡಿ ಬೀದರ ನಗರವು ಉತ್ತಮ ಪ್ರವಾಸೋದ್ಯಮ ತಾಣಗಳನ್ನು ಹೊಂದಿದ್ದು ಇಲ್ಲಿಂದ ದಿನನಿತ್ಯ ವಿಮಾನ ಹಾರಾಟವಾಗುವುದರಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ ಪಡೆಯುವುದಲ್ಲದೆ ಇಲ್ಲಿನ ಆರ್ಥಿಕ ಪ್ರಗತಿಗೆ ಸಹಕಾರಿಯಾಗಲಿದೆ ಎಂದು ಅವರು ವಿಮಾನ ಹಾರಾಟವನ್ನು ಕೇವಲ ಬೆಂಗಳೂರಿಗೆ ಸಿಮಿತಗೊಳಿಸದೆ ವಾಯಾ ಮಾರ್ಗವನ್ನು ಶಿರಡಿ ಅಥವಾ ತಿರಿಪತಿಯನ್ನಾಗಿ ಮಾಡಬೇಕು ಅಂದಾಗ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವುದು ಎಂದು ಅವರು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬು ವಾಲಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ.ಎಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ರತಿಕಾಂತ ಸ್ವಾಮಿ, ಜಿ.ಎಮ್.ಆರ್ ಸಂಸ್ಥೆಯ ಬೀದರ ವಿಮಾನ ನಿಲ್ದಾಣದ ಪ್ರಭಾರ ನಿರ್ದೇಶಕ ಅಮಿತ ಮಿಶ್ರಾ, ಪ್ರಥಮ ದರ್ಜೇ ಗುತ್ತಿಗೆದಾರ ಗುರುನಾಥ ಕೊಳ್ಳುರ್, ಗುರುನಾನಕ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಬಲ್ಬೀರ್ ಸಿಂಗ್, ಶಾಹೀನ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಅಬ್ದುಲ್ ಖದಿರ್,ಅಬ್ದುಲ್ ಮನ್ನಾನ್ ಸೇಠ್ ಸೇರಿದಂತೆ ಇತರೆ ಸರ್ಕಾರಿ ಅಧಿಕಾರಿಗಳು ಹಾಗೂ ವಿಮಾನ ನಿಲ್ದಾಣ ನಿರ್ವಹಣ ಸಿಬ್ಬಂದಿ ಉಪಸ್ಥಿತರಿದ್ದರು.