ನಿರಂತರ ಮಳೆ: ಸುರಕ್ಷತಾ ಮುನ್ನೆಚ್ಚರಿಕೆಗೆ ಸೂಚನೆ

ಹುಬ್ಬಳ್ಳಿ,ಜು24: ಕಳೆದ ನಾಲ್ಕೈದು ದಿನಗಳಿಂದ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಬಸ್ಸು ಹಾಗೂ ಪ್ರಯಾಣಿಕರ ಸುರಕ್ಷತೆ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳು ವಂತೆ ಚಾಲಕರು ಹಾಗೂ ನಿರ್ವಾಹಕರಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸೂಚನೆಗಳನ್ನು ನೀಡಿದೆ.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯ ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಳೆದ ನಾಲ್ಕೈದು ದಿನಗಳಿಂದ ವ್ಯಾಪಕ ಮಳೆ ಸುರಿಯುತ್ತಿದೆ, ಹಲವಾರು ಕಡೆಗಳಲ್ಲಿ ರಸ್ತೆಗಳು ಹದಗೆಟ್ಟಿವೆ,ಕೆಲವು ಕಡೆ ಜಲಾವೃತವಾಗಿವೆ,ತಗ್ಗು ಪ್ರದೇಶಗಳಲ್ಲಿ ಹಾಗೂ ಸೇತುವೆಗಳ ಮೇಲೆ ಮಳೆನೀರು ಹರಿಯುತ್ತಿದೆ. ಒಟ್ಟಾರೆಯಾಗಿ ಬಸ್ಸು ಹಾಗೂ ಪ್ರಯಾಣಿಕರ ಸುರಕ್ಷತೆಯ ದೃಷ್ಡಿಯಿಂದ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ತಿಳಿಸಲಾಗಿದೆ.

ರಸ್ತೆಯ ಗುಂಡಿಗಳ ಆಳದ ಅಂದಾಜು ಸಿಗುವುದಿಲ್ಲ. ಹೀಗಾಗಿ ಬಸ್ಸಿನ ಚಕ್ರ ಗುಂಡಿಯಲ್ಲಿ ಸಿಕ್ಕಿಕೊಳ್ಳುವ, ನಿಯಂತ್ರಣ ತಪ್ಪು ಸಾಧ್ಯತೆಗಳಿರುತ್ತವೆ. ಇಂಥ ಸಂದರ್ಭಗಳಲ್ಲಿ ಚಾಲಕರು ತಮ್ಮ ಬಸ್ಸುಗಳನ್ನು ಎಚ್ಚರಿಕೆಯಿಂದ ಚಾಲನೆ ಮಾಡಬೇಕು. ರಸ್ತೆಯ ಮೇಲೆ ಮಳೆ ನೀರು ಹರಿಯುತ್ತಿರವಾಗ ವಾಹನ ಚಾಲನೆ ಅಪಾಯಕಾರಿ. ಅಂತಹ ಸಂದರ್ಭಗಳಲ್ಲಿ ಬಸ್ ಚಾಲನೆಯ ದುಸ್ಸಾಹಸ ಮಾಡಬಾರದು. ಜಡಿ ಮಳೆಯಿಂದಾಗಿ ಮಣ್ಣು ಸಡಿಲಗೊಂಡಿರುವ ಹಿನ್ನೆಲೆಯಲ್ಲಿ ಎದುರಿನಿಂದ ಬರುತ್ತಿರುವ ವಾಹನ ಹಾಗೂ ರಸ್ತೆಯ ಅಗಲದ ಬಗ್ಗೆ ಗಮನಿಸಿ ರಸ್ತೆಯ ಮುಖ್ಯ ಭಾಗದಿಂದ ಪಕ್ಕದ ಮಣ್ಣಿನ ರಸ್ತೆಗೆ ಬಸ್ ಇಳಿಸುವಾಗ ಜಾಗರೂಕತೆ ವಹಿಸಬೇಕು. ಅಸುರಕ್ಷಿತ ಸಂದರ್ಭಗಳಲ್ಲಿ ಮುಂದೆ ಹೋಗುತ್ತಿರುವ ವಾಹನಗಳನ್ನು ಹಿಂದಿಕ್ಕುವ ಪ್ರಯತ್ನ ಮಾಡಬಾರದು. ಸುರಕ್ಷಿತ ಚಾಲನೆಯಲ್ಲಿ ನಿರ್ವಾಹಕರು ಚಾಲಕರಿಗೆ ಅಗತ್ಯ ಸಲಹೆ ಸಹಕಾರ ನೀಡಲು ಸೂಚನೆಗಳನ್ನು ನೀಡಲಾಗಿದೆ.