ನಿರಂತರ ಮಳೆ : ಕ್ಷೇತ್ರದಲ್ಲಿ ೧೦ ಸಾವಿರ ಹೆಕ್ಟರ್ ಬೆಳೆ ನಷ್ಟ

ಎಕರೆಗೆ ೬೦ ಸಾವಿರ ಪರಿಹಾರಕ್ಕೆ ದದ್ದಲ್ ಒತ್ತಾಯ
ರಾಯಚೂರು.ನ.೨೩- ಕಳೆದ ಒಂದು ವಾರದಿಂದ ಸುರಿದ ಭಾರೀ ಮಳೆಗೆ ಜಿಲ್ಲೆ ಸೇರಿದಂತೆ ತಾಲೂಕಿನಾದ್ಯಂತ ಬೆಳೆ ಹಾನಿಗೆ ಗುರಿಯಾದ ರೈತರಿಗೆ ತಕ್ಷಣವೇ ಪ್ರತಿ ಎಕರೆಗೆ ೫೦ ರಿಂದ ೬೦ ಸಾವಿರ ನಷ್ಟ ಪರಿಹಾರ ಒದಗಿಸುವಂತೆ ಗ್ರಾಮಾಂತರ ಶಾಸಕ ದದ್ದಲ್ ಬಸವನಗೌಡ ಅವರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಆಗ್ರಹಿಸಿದ್ದಾರೆ.
ಇಂದು ಬಿಜೆಪಿ ಅಭ್ಯರ್ಥಿಯ ಸಲ್ಲಿಕೆ ಪ್ರಕ್ರಿಯೆ ಹಿನ್ನೆಲೆಯಲ್ಲಿ ಜಿಲ್ಲೆಗೆ ಆಗಮಿಸಿದ ಉಸ್ತುವಾರಿ ಸಚಿವರನ್ನು ಭೇಟಿಯಾಗಿ ತಮ್ಮ ಕ್ಷೇತ್ರದಲ್ಲಿ ಇರುವ ರೈತರ ಸ್ಥಿತಿಗತಿ ಬಗ್ಗೆ ಮನವರಿಕೆ ಮಾಡಿದರು. ಕಳೆದ ಒಂದು ವಾರದಿಂದ ಸುರಿದ ಭಾರೀ ಮಳೆಯಿಂದಾಗಿ ರೈತರ ಬೆಳೆ ಸಂಪೂರ್ಣ ನಷ್ಟವಾಗಿದೆ. ಉಸ್ತುವಾರಿ ಸಚಿವರು ಇಲ್ಲಿವರೆಗೂ ಒಮ್ಮೆಯೂ ಅಲ್ಲಿಗೆ ಭೇಟಿ ನೀಡಿಲ್ಲ. ಕೇವಲ ಯಾವುದೊಂದು ವಿಶೇಷ ಸಂದರ್ಭದಲ್ಲಿ ಜಿಲ್ಲೆಗೆ ಭೇಟಿ ನೀಡುವುದು ಬಿಟ್ಟರೇ, ನಿರಂತರವಾಗಿ ಜಿಲ್ಲೆಯ ಭೇಟಿಯ ಬಗ್ಗೆ ಕಾಳಜಿಯಿಲ್ಲವೆಂದು ದೂರಿದರು.
ನಿರಂತರ ಮಳೆಯಿಂದ ೧೦ ಸಾವಿರ ಹೆಕ್ಟರ್‌ಗೂ ಅಧಿಕ ಬೆಳೆ ನಷ್ಟವಾಗಿದೆ. ಕಾಟಾಚಾರಕ್ಕೆ ಒಂದಿಷ್ಟು ಹಣ ನೀಡಿದರೇ, ಪರಿಹಾರವಾಗದು. ಪ್ರತಿ ಎಕರೆಗೆ ೫೦ ರಿಂದ ೬೦ ಸಾವಿರ ರೂ. ನೀಡುವ ಮೂಲಕ ರೈತರನ್ನು ರಕ್ಷಿಸಬೇಕೆಂದರು. ಈಗಾಗಲೇ ಬೆಳೆ ನಷ್ಟದಿಂದ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನೆಷ್ಟು ರೈತರು ಸಾಯಬೇಕು ಎನ್ನುವ ಪ್ರಶ್ನೆ ಸಚಿವರ ಮುಂದಿಟ್ಟಿದ್ದಾರೆ. ಎನ್‌ಡಿಆರ್‌ಎಫ್ ಮಾನದಂಡಗಳನ್ವಯ ಸಮೀಕ್ಷೆ ಕಾರ್ಯ ಕೈಗೊಂಡು ಪರಿಹಾರ ನೀಡಿದರೇ ಸಾಲದು ಎಂದ ಅವರು, ರೈತರ ಬೆಳೆ ಅನುಗುಣವಾಗಿ ಪರಿಹಾರ ನೀಡುವಂತೆ ಆಗ್ರಹಿಸಿದರು.