ನಿರಂತರ ಮಳೆ ಕೂಡ್ಲಿಗಿ ತಾಲೂಕಿನಲ್ಲಿ ಬೆಳೆಹಾನಿ,ಕುಸಿದ ಮನೆಗಳು. ಹಸು ಎಮ್ಮೆ ಸಾವು.

ಕೂಡ್ಲಿಗಿ.ನ. 20 :- ಮೂರ್ನಾಕು ದಿನದಿಂದ ನಿರಂತರ ಸುರಿವ ಮಳೆಗೆ ಕೂಡ್ಲಿಗಿ ತಾಲೂಕಿನಾಧ್ಯಂತ ಒಂದು ಹಸು, ಎಮ್ಮೆ ಗೋಡೆ ಕುಸಿತಕ್ಕೆ ಬಲಿಯಾಗಿದ್ದು ಹೊಲದಲ್ಲಿನ ಶೇಂಗಾ ಬೆಳೆ ನಷ್ಟವಾಗಿದ್ದು ಅಲ್ಲದೆ ತಾಲೂಕಿನ ಮೂರು ಹೋಬಳಿಯಲ್ಲಿ ಇಂದು ಬೆಳಗಿನವರೆಗೆ   ಸುಮಾರು 21 ಮನೆಗಳು ಭಾಗಶಃ ಕುಸಿದು ಬಿದ್ದಿರುವ ಬಗ್ಗೆ ಕಂದಾಯ ಇಲಾಖೆ ತಿಳಿಸಿದೆ.
ನಿನ್ನೆವರೆಗಿನ ಮಾಹಿತಿಯಂತೆ ಅಕಾಲಿಕ ಮಳೆಗೆ 17 ಮನೆಗಳು ಬಿದ್ದಿರುವ ಬಗ್ಗೆ ವರದಿಯಾಗಿದೆ.  ಕೂಡ್ಲಿಗಿ ತಾಲೂಕು ಭೀಮಸಮುದ್ರದ ರೈತ ಉಮಾಪತಿ ಎಂಬುವರ ಹೊಲದಲ್ಲಿ ಬೆಳೆಯಲಾಗಿದ್ದ ಶೇಂಗಾ ಫಸಲು ಕಿತ್ತಿದ್ದು ನಿರಂತರ ಸುರಿದ ಮಳೆಯಿಂದ ಅದನ್ನು ತೆಗೆಯಲು ಆಗದೆ ಶೇಂಗಾ ಇರುವ ಉಬ್ಬಲು ಸಂಪೂರ್ಣ ಕೊಳೆತು ಹೋದ ಸ್ಥಿತಿಯಲ್ಲಿದೆ ಈ ವರ್ಷ ಬೆಳೆದ ಬೆಳೆಗೆ ಬೆಂಬಲ ಸಿಗದೆ ಮಳೆಗೆ ಸುಲುಕಿದ ಬೆಳೆ ಸಂಪೂರ್ಣ ನಷ್ಟವಾಗಿದ್ದು ಉಮಾಪತಿಯಂತೆ ತಾಲೂಕಿನ ಅನೇಕ ರೈತರು ಬೆಳೆನಷ್ಟದಿಂದ ಕಂಗಾಲಾಗಿದ್ದಾರೆ. ಸರ್ಕಾರದ ಬೆಳೆ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ.      
ನಿನ್ನೆವರೆಗೂ ನಿರಂತರ ಸುರಿವ ಮಳೆಗೆ 17 ಮನೆಗಳು ಬಿದ್ದಿರುವ ಬಗ್ಗೆ ಮಾಹಿತಿ ನೀಡಿದ ಕಂದಾಯ ಇಲಾಖೆ ಇಂದು ಬೆಳಗಿನವರೆಗಿನ ಮಾಹಿತಿಯಂತೆ ಕೂಡ್ಲಿಗಿ ಹೋಬಳಿಯಲ್ಲಿ ಕೂಡ್ಲಿಗಿಯಲ್ಲಿ 2, ಶಿವಪುರ 1, ಹಿರೇಹೆಗ್ಡಾಳ್ 2, ಬಡೇಲಡಕು 2 ಮನೆಗಳು ಬಿದ್ದರೆ ಹೊಸಹಳ್ಳಿ ಹೋಬಳಿಯಲ್ಲಿ ಅಗ್ರಹಾರ ಗ್ರಾಮದಲ್ಲಿ ಗೋಡೆಕುಸಿತದಿಂದ ಒಂದು ಎಮ್ಮೆ ಒಂದು ಹಸು ಸಾವನ್ನಪ್ಪಿದ್ದು, ಚೌಡಾಪುರದಲ್ಲಿ 3, ಟಿ. ಬಸಾಪುರ 1, ಕ್ಯಾಸನಕೆರೆ 1, ಹುಡೇo 2 ಮನೆಗೋಡೆಗಳು ಭಾಗಶಃ ಬಿದ್ದಿವೆ. ಗುಡೇಕೋಟೆ ಹೋಬಳಿಗೆ ಸಂಬಂಧಿಸಿದಂತೆ ಎಕ್ಕೆಗುಂದಿ 3, ಅರ್ಜುನಚಿನ್ನೇನಹಳ್ಳಿ 1, ಗುಂಡುಮುಣುಗು 1 ಮತ್ತು ಹರವದಿಯಲ್ಲಿ 1ಮನೆಗಳ ಗೋಡೆಗಳು ಭಾಗಶಃ ಕುಸಿದು ಬಿದ್ದಿರುವ ಬಗ್ಗೆ ಕಂದಾಯ ಇಲಾಖೆ ಸ್ಥಳಕ್ಕೆ ಬೇಟಿ ನೀಡಿ ಮಾಹಿತಿ ಕಲೆ ಹಾಕಿದೆ.  
ಇಂದಿನ ಮಳೆಪ್ರಮಾಣ ಕೂಡ್ಲಿಗಿ – 29.4 ಮಿ. ಮೀ,  ಗುಡೇಕೋಟೆ – 66.2 ಮಿ ಮೀ,  ಹೊಸಹಳ್ಳಿ -43.1ಮಿ ಮೀ, ಬಣವಿಕಲ್ – 38.3 ಮಿ ಮೀ,  ಚಿಕ್ಕಜೋಗಿಹಳ್ಳಿ – 42.2 ಮಿ ಮೀ ಹಾಗೂ ಕೊಟ್ಟೂರು – 28.4 ಮಿ ಮೀ ನಷ್ಟು ಮಳೆ ಸುರಿದಿರುವ ಬಗ್ಗೆ ಕಂದಾಯ ಇಲಾಖೆಯ ಮಾಹಿತಿಯಿಂದ ತಿಳಿದಿದೆ.