ನಿರಂತರ ಪ್ರಯತ್ನ, ಛಲಗಾರಿಕೆಯಿಂದ ಉನ್ನತ ಸಾಧನೆ ಸಾಧ್ಯ

ಕಲಬುರಗಿ,ಸೆ.18: ಉನ್ನತ ಹುದ್ದೆಯ ಆಕಾಂಕ್ಷಿಗಳು ಮೊದಲು ತಮ್ಮಲ್ಲಿರುವ ಕೀಳರಿಮೆಯನ್ನು ತೊರೆದು, ಪ್ರಯತ್ನದಲ್ಲಿ ವಿಶ್ವಾಸವಿಟ್ಟು ನಿರಂತರವಾದ ಅಧ್ಯಯನಶೀಲ ಗುಣ, ಸಮಯ ಪ್ರಜ್ಞೆ, ಶಿಸ್ತು, ಯೋಜನಾಬದ್ದವಾದ ಕಾರ್ಯ, ಸಾಧಿಸಬೇಕೆಂಬ ಅಪ್ಪಟ ಛಲಗಾರಿಕೆಯಂತಹ ಗುಣಗಳನ್ನು ಮೈಗೂಡಿಸಿಕೊಂಡು ಸತತವಾಗಿ ಪ್ರಯತ್ನಿಸಿದರೆ ಖಂಡಿತವಾಗಿಯೂ ಉನ್ನತವಾದ ಸಾಧನೆ ಮಾಡಲು ಸಾಧ್ಯವಿದೆಯೆಂದು ಕ.ಕ ವಿಭಾಗದ ಕೆ.ಎ.ಎಸ್ ಪ್ರಥಮ ರ್ಯಾಂಕ್ ಪಡೆದು ಡಿವೈಎಸ್‍ಪಿ ಹುದ್ದೆಗೆ ಆಯ್ಕೆಯಾಗಿರುವ ವಿಜಯಕ್ರಾಂತಿ ಬಿ.ವಿಭೂತಿ ಅಭಿಮತ ವ್ಯಕ್ತಪಡಿಸಿದರು.
ಕೆಎಎಸ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿ ಆಯ್ಕೆಯಾಗಿರುವ ಪ್ರಯುಕ್ತÀ್ತ ‘ಬಸವೇಶ್ವರ ಸಮಾಜ ಸೇವಾ ಬಳಗ’ವು ನಗರದ ಹೊರವಲಯದ ಶರಣ ಸಿರಸಗಿ ಮಡ್ಡಿಯಲ್ಲಿರುವ ತಮ್ಮ ಮನೆಯ ಪ್ರಾಂಗಣದಲ್ಲಿ ಹಮ್ಮಿಕೊಂಡಿದ್ದ ಗೃಹ ಸನ್ಮಾನದಲ್ಲಿ ಗೌರವ ಸತ್ಕಾರವವನ್ನು ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಶೃದ್ಧೆಯಿಂದ ಅಧ್ಯಯನ ಮಾಡಿ. ಸೂಕ್ತ ವೇಳಾಪಟ್ಟಿ ತಯಾರಿಸಿ. ಕಠಿಣ ಪರಿಶ್ರಮ ಅಗತ್ಯ. ಉನ್ನತ ಗುರಿಯನ್ನು ಇಟ್ಟುಕೊಳ್ಳಿ. ಸಮಯದ ಸದುಪಯೋಗ ಮಾಡಿಕೊಳ್ಳಬೇಕು. ನಾನು ನಿರಂತರವಾಗಿ ಮೂರು ವರ್ಷಗಳ ಕಾಲ ಅಧ್ಯಯನ ಮಾಡಿದ್ದೇನೆ. ನಮ್ಮ ತಂದೆಯವರು ನನ್ನ ಬಾಲ್ಯದಿಂದಲೇ ನಾಗರಿಕ ಸೇವಾ ಹುದ್ದೆಯ ಕನಸನ್ನು ಬಿತ್ತಿದ್ದರು. ಅದಕ್ಕೆ ತಂದೆ-ತಾಯಿ, ಗುರು-ಹಿರಿಯರ ಸಲಹೆ-ಸಹಕಾರ ದೊರೆತಿದೆ. ನನಗೆ ದೊರೆತ ಹುದ್ದೆಯನ್ನು ಕರ್ತವ್ಯಬದ್ಧೆಯಿಂದ ಮಾಡುತ್ತೇನೆ. ನಮ್ಮ ಭಾಗದಲ್ಲಿ ಅನೇಕ ಪ್ರತಿಭಾವಂತರಿದ್ದಾರೆ. ಅವರನ್ನು ಗುರ್ತಿಸಿ ಪ್ರೋತ್ಸಾಹಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಉನ್ನತ ಹುದ್ದೆಗೆ ಆಯ್ಕೆಯಾಗಿ, ನಮ್ಮ ಭಾಗದ ಕೀರ್ತಿಯನ್ನು ತರುವ ಕೆಲಸ ಮಾಡಿ ಎಂದು ಸಾಧಕ ಆಕಾಂಕ್ಷಿಗಳಿಗೆ ಶುಭ ಹಾರೈಸಿದರು.
ಕ.ರಾ.ಪ್ರಾ.ಶಾ.ಶಿ.ಸಂಘದ ಜಿಲ್ಲಾ ಉಪಾಧ್ಯಕ್ಷ ವೇದಮೂರ್ತಿ ನೀಲಕಂಠಯ್ಯ ಹಿರೇಮಠ ಮಾತನಾಡಿ, ವಿಭೂತಿ ಕುಟುಂಬ ಸಂಸ್ಕಾರ, ಪರೋಪಕಾರಿ, ದಾಸೋಹ ಮನೆತನಕ್ಕೆ ಹೆಸರುವಾಸಿಯಾಗಿದೆ. ತಮ್ಮ ಮಕ್ಕಳಿಗೆ ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಬಿತ್ತಿದ್ದಾರೆ. ಬಸವರಾಜ ವಿಭೂತಿ ಅವರು ತಮ್ಮ ಮಗಳಿಗೆ ಜೀವನದಲ್ಲಿ ಸೂಕ್ತ ಗುರಿಯನ್ನು ಸಾಧಿಸಲು ಪ್ರೋತ್ಸಾಹಿ, ಸಮಾಜಕ್ಕೆ ಆದರ್ಶ ತಂದೆಯಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಎಚ್.ಬಿ.ಪಾಟೀಲ, ದೇವೇಂದ್ರಪ್ಪ ಗಣಮುಖಿ, ಚನ್ನಬಸಪ್ಪ ಗಾರಂಪಳ್ಳಿ, ಬಸಮ್ಮ ಬಿ.ವಿಭೂತಿ, ಬಸವರಾಜ ವಿಭೂತಿ, ಕ್ರಾಂತಿಕುಮಾರ ಬಿ.ವಿಭೂತಿ, ನ್ಯಾಯವಾದಿ ಯಶವಂತ ಯಾತನೂರ್, ಡಾ.ಸೂರ್ಯಕಾಂತ ಸೊನ್ನದ್, ಕವಿತಾ ಎನ್.ಪಾಳಾ, ನಾಗೀಂದ್ರ ಪಾಳಾ ಸೇರಿದಂತೆ ಮತ್ತಿತರರಿದ್ದರು.