ನಿರಂತರ ಪರಿಶ್ರಮವೇ ಯಶಸ್ಸಿನ ಕೀಲಿ ಕೈ 

ದಾವಣಗೆರೆ. ಜೂ.೧೧: ಕನಸು ಪ್ರಯತ್ನಕ್ಕೆ ಸಹಕಾರಿ. ಪ್ರಯತ್ನ     ಗುರಿಯ ರಹದಾರಿ. ನಿರಂತರ ಪರಿಶ್ರಮವೇ ಯಶಸ್ಸಿನ ಕೀಲಿ ಕೈ. ಆದ್ದರಿಂದ ವಿದ್ಯಾರ್ಥಿಗಳು ಪ್ರತಿದಿನ ಪ್ರತಿಕ್ಷಣ ಕರ್ತವ್ಯದೆಡೆಗೆ ಜಾಗೃತರಾಗಿರಬೇಕು ಎಂದು  ಸಂಪನ್ಮೂಲ ವ್ಯಕ್ತಿ ಗಂಗಾಧರ ಬಿ ಎಲ್ ನಿಟ್ಟೂರ್ ವಿದ್ಯಾರ್ಥಿಗಳಿಗೆ  ಸಲಹೆ ನೀಡಿದರು.ದಾವಣಗೆರೆ ವಿದ್ಯಾನಗರದ ಮಾಗನೂರು ಬಸಪ್ಪ ವಿದ್ಯಾಸಂಸ್ಥೆಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ವ್ಯಕ್ತಿತ್ವ ವಿಕಸನ ಕಾರ್ಯಾಗಾರದಲ್ಲಿ ಮಾತನಾಡಿದ ಅವರು ನಿಮ್ಮ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ಅರಿತು, ಸದಾ ಲವಲವಿಕೆ ಮತ್ತು ಉತ್ಸಾಹದಿಂದ ಗುರಿಯೆಡೆಗೆ ನಿತ್ಯ ಪಯಣಿಸಿರಿ ಎಂದು ತಿಳಿ ಹೇಳಿದರು. ಪ್ರೇರಣೆ ಎಂಬುದು ಎಲ್ಲರ ಜೀವನದಲ್ಲೂ ಮಾರ್ಗ ತೋರುವ ದಾರಿ ದೀಪ ಇದ್ದಂತೆ. ಗುರುಗಳು ಮತ್ತು ಪೋಷಕರೇ ನಿಜವಾದ ಪ್ರೇರಕ ಶಕ್ತಿಗಳು. ಹಗಲಿರುಳು ನಿಮ್ಮ ಏಳ್ಗೆಗಾಗಿ ಶ್ರಮಿಸುವ ಅವರ ಬಗ್ಗೆ ನಿಮ್ಮಲ್ಲಿ ವಿನಯ, ವಿಧೇಯತೆ ಹಾಗೂ ಕೃತಜ್ಞತೆಯ ಭಾವವಿರಬೇಕು. ಗುರು ಹಿರಿಯರ ಕಿವಿಮಾತುಗಳಿಗೆ ಓಗೊಡುವ ವಿದ್ಯಾರ್ಥಿಗಳು ದೊಡ್ಡ ಸಾಧಕರಾಗುವಲ್ಲಿ ಸಂದೇಹವಿಲ್ಲ ಎಂದರು.