ನಿರಂತರ ಪರಿಶ್ರಮದಿಂದ ಯಶಸ್ಸು ಕಟ್ಟಿಟ್ಟ ಬುತ್ತಿ: ಕುಲಪತಿ ಡಾ. ವಿಜಯ ನಾಗಣ್ಣವರ

(ಸಂಜೆವಾಣಿ ವಾರ್ತೆ)
ವಿಜಯಪುರ:ಜು.13: ವಿದ್ಯಾರ್ಥಿಗಳು ತಾವು ತಲುಪಬೇಕಾದ ಗುರಿಯನ್ನು ಸಾಧಿಸಲು ಅಚಲ ಆತ್ಮವಿಶ್ವಾಸ, ದೃಡನಂಬಿಕೆ, ನಿರಂತರ ಪರಿಶ್ರಮ ಬೇಕಾಗುತ್ತದೆ ಎಂದು ಬೆಳಗಾವಿ ರಾಣಿ ಚೆನ್ನಮ್ಮಾ ವಿಶ್ವವಿದ್ಯಾಲಯ ಹಂಗಾಮಿ ಕುಲಪತಿ ಡಾ. ವಿಜಯ ನಾಗಣ್ಣವರ ಕರೆ ನೀಡಿದರು.
ನಗರದ ಹೊರವಲಯದ ಹಿಟ್ನಳ್ಳಿ ಕೃಷಿ ಮಹಾವಿದ್ಯಾಲಯದಲ್ಲಿ ಇಂದು ಜರುಗಿದ ಕಾರ್ಯಕ್ರಮದಲ್ಲಿ ಅವರಿಗೆ ಹಮ್ಮಿಕೊಳ್ಳಲಾದ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿ ಮಾತನಾಡಿ, ತಾವು ವಿಜಯಪುರ ಕೃಷಿ ಮಹಾವಿದ್ಯಾಲಯದಲ್ಲಿ 17 ವರ್ಷಗಳ ಕಾಲ ಇಂಗ್ಲಿಷ್ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದನ್ನು ಸ್ಮರಿಸಿಕೊಂಡರು. ಇಲ್ಲಿ ಸಲ್ಲಿಸಿದ ಸೇವೆ ನೆನಪಿನಲ್ಲಿ ಅಚ್ಚಳಿಯುವಂತೆ ಮಾಡಿದ್ದು, ಕುಲಪತಿ ಹುದ್ದೆ ಅಧಿಕಾರ ವಹಿಸಿಕೊಂಡ ತಕ್ಷಣ ಹಿಂದೆ ಸುದಿರ್ಘ ಸೇವೆ ಮಾಡಿದ ಕೃಷಿ ಕಾಲೇಜಿನ ನೆನಪಾಗಿ ಇಲ್ಲಿರುವ ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಬೇಟಿಯಾಗಿ ಹೋಗಲು ಬಂದಿದ್ದು, ಕೃಷಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗುವ ವಿಪುಲ ಅವಕಾಶಗಳಿವೆ. ವಿದ್ಯಾರ್ಥಿಗಳು ಇಲ್ಲಿರುವ ಶಿಕ್ಷಕರ ಮಾರ್ಗದರ್ಶನದೊಂದಿಗೆ ಮುನ್ನಡೆದು, ಜೀವನದಲ್ಲಿ ಯಶಸ್ಸು ಸಾಧಿಸಲು ಹೇಳಿದರು.
ಡೀನ್ (ಕೃಷಿ), ಕೃಷಿ ಮಹಾವಿದ್ಯಾಲಯ, ವಿಜಯಪುರ ಡಾ. ಆಯ್ ಕೆ. ಕಾಳಪ್ಪನವರ ಮಾತನಾಡಿ, ಇಲ್ಲಿ ಸೇವೆ ಸಲ್ಲಿಸಿ ಕುಲಪತಿ ಹುದ್ದೆ ಅಲಂಕರಿಸಿರುವ ಡಾ. ನಾಗಣ್ಣವರ ಅವರ ಕಾರ್ಯವೈಖರಿ ತುಂಬಾ ವಿಶಿಷ್ಟವಾದುದು ಎಂದು ಶ್ಲಾಘಿಸಿದರು. ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಮಾತನಾಡಿ, ಡಾ. ನಾಗಣ್ಣವರ ಜೊತೆ ಕಾರ್ಯ ನಿರ್ವಹಿಸಿದ ಹಲವು ಸಂದರ್ಭಗಳನ್ನು ನೆನಪಿಸಿಕೊಂಡರು.
ಕಾರ್ಯಕ್ರಮದಲ್ಲಿ ಕೃಷಿ ವಿವಿ ವ್ಯವಸ್ಥಾಪನಾ ಮಂಡಳಿ ಸದಸ್ಯ ಪಿ. ಮಲ್ಲೇಶಿ, ಪ್ರಾದ್ಯಾಪಕರಾದ ಡಾ. ಶ್ರೀಶೈಲ ಗೋಟ್ಯಾಳ, ಡಾ. ಕೆ. ಬಿ. ಯಡಹಳ್ಳಿ, ಡಾ. ಎಸ್. ಹೆಚ್. ಗುತ್ತರಗಿ, ಡಾ. ಎಮ್. ವಾಯ್. ತೆಗ್ಗಿ, ಡಾ. ಆರ್. ಬಿ. ಜೊಳ್ಳಿ, ಡಾ. ಜಿ. ಶ್ರೀನಿವಾಸಲು, ಡಾ. ಕಿರಣಕುಮಾರ, ಎಲ್. ಎನ್. ವಾರತದಾರ ಸೇರಿದಂತೆ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.