ನಿರಂತರ ಪರಿಶ್ರಮದಿಂದ ಕಂಡ ಕನಸು ನನಸಾಗಲು ಸಾಧ್ಯ: ಪ್ರವೀಣ ಪಾಟೀಲ

ಅಥಣಿ:ಮಾ.14: ಕೇವಲ ಕನಸುಗಳನ್ನು ಹೊಂದಿದ್ದರೆ ಗುರಿ ಮುಟ್ಟಲು ಸಾಧ್ಯವಿಲ್ಲ, ನಿರಂತರ ಕಠಿಣ ಪರಿಶ್ರಮದ ಮೂಲಕ ಕಂಡ ಕನಸನ್ನು ನನಸು ಮಾಡಲು ಸಾಧ್ಯವೆಂದು ತಾಲೂಕಾ ಸಮಾಜ ಕಲ್ಯಾಣ ಅಧಿಕಾರಿ ಪ್ರವೀಣ ಪಾಟೀಲ ಹೇಳಿದರು.
ಅವರು ಪಟ್ಟಣದ ಚಿಕ್ಕಟ್ಟಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗಾಗಿ ಗುರಿ ಮತ್ತು ಕನಸು ಎಂಬ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿ ಜೀವನ ಸತತ ಅಧ್ಯಯನಶೀಲ ವಾಗಿರಬೇಕು. ಛಲ ಮತ್ತು ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡುವುದರ ಜೊತೆಗೆ ತಮ್ಮ ಗುರಿ ಸಾಧನೆಗಾಗಿ ಕಠಿಣ ಪರಿಶ್ರಮ ಮಾಡುವುದು ಅಗತ್ಯ. ನಿಮ್ಮ ಕನಸು ಶ್ರೇಷ್ಠ ಮತ್ತು ಉನ್ನತ ಮಟ್ಟದ್ದಾಗಿರಬೇಕು. ಗುರಿ ಸಾಧಿಸಿದ ನಂತರ ಜನ್ಮ ನೀಡಿದ ತಂದೆ ತಾಯಿ, ವಿದ್ಯ ಕಲಿಸಿದ ಶಿಕ್ಷಕರನ್ನು ಮತ್ತು ಶಾಲೆಯನ್ನು ಎಂದೆಂದಿಗೂ ಮರೆಯಬಾರದು. ಸಮಾಜದಲ್ಲಿ ಆದರ್ಶಮಯ ಬದುಕು ನಡೆಸುವ ಮೂಲಕ ನಮ್ಮ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುರೇಶ ಚಿಕ್ಕಟ್ಟಿ ಮಾತನಾಡಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಿರಂತರ ಓದು ಬಹಳ ಅಗತ್ಯ. ಜೀವನದಲ್ಲಿ ಏನಾದರೂ ಸಾಧಿಸುವ ಕನಸು ಹೊಂದಿರಬೇಕು. ಕೇವಲ ಕನಸು ಕಂಡರೆ ಸಾಲದು, ಕನಸು ನನಸಾಗಿಸಲು ನಿರಂತರ ಪ್ರಯತ್ನ ಹೊಂದಿರಬೇಕು. ವಿದ್ಯಾರ್ಥಿ ಜೀವನದ ನಂತರ ಜೀವನದಲ್ಲಿ ಏನೇ ಕೆಲಸ ಮಾಡಿ, ಆದರೆ ತಂದೆ ತಾಯಿಯಂದಿರು ಈ ಸಮಾಜದಲ್ಲಿ ತಲೆ ತಗ್ಗಿಸುವಂತಹ ಕೆಲಸ ಮಾತ್ರ ಮಾಡಬೇಡಿ, ಅವರ ಕಣ್ಣೀರಿಗೆ ಕಾರಣ ಆಗಬೇಡಿ, ಈ ಸಮಾಜದಲ್ಲಿ ಒಳ್ಳೆಯ ಆದರ್ಶ ಬದುಕು ಸಾಗಿಸಿ ಎಂದು ಸಲಹೆ ನೀಡಿದರು.
ಈ ವೇಳೆ ಸಮಾಜ ಸೇವಕ ರಾಮಣ್ಣ ಧರಿಗೌಡ, ಸಂಸ್ಥೆಯ ಕಾರ್ಯದರ್ಶಿ ಸದಾಶಿವ ಚಿಕ್ಕಟ್ಟಿ, ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ವಿಶ್ವನಾಥ ಸೌದಾಗರ, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಟಿ.ಎ.ಮೊಗೇರ ಮತ್ತು ಶಾಲೆಯ ಶಿಕ್ಷಕ, ಶಿಕ್ಷಕಿಯರು ಹಾಗೂ ಮಕ್ಕಳು ಹಾಜರಿದ್ದರು. ಜೀನತಕೌಸರ ಲಿಂಗಸೂರ ಸ್ವಾಗತಿಸಿದರು. ಸ್ವಾತಿ ಕುಲಕರ್ಣಿ ನಿರೂಪಿಸಿದರು. ಮೈತ್ರಾ ಕಂಕಣವಾಡಿ ವಂದಿಸಿದರು.