ನಿರಂತರ ಜ್ಯೋತಿ ಯೋಜನೆ ಹೆಚ್ಚುವರಿ ಪಾವತಿ ಮೊತ್ತ ವಸೂಲು ಮಾಡಲು ಸೂಚನೆ

ಶಿವಮೊಗ್ಗ, ಎ.20;  ಜಿಲ್ಲೆಯಲ್ಲಿ ನಿರಂತರ ಜ್ಯೋತಿ ಯೋಜನೆಯಡಿ ಮಾರ್ಗಸೂಚಿ ಪ್ರಕಾರ ಸರಿಯಾಗಿ ಕಾಮಗಾರಿ ನಿರ್ವಹಿಸದಿದ್ದರೂ, ಪಾವತಿ ಮಾಡಲಾಗಿರುವ ಮೊತ್ತವನ್ನು ಗುತ್ತಿಗೆದಾರರಿಂದ ವಸೂಲು ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.ಅವರು  ಜಿಲ್ಲಾಧಿಕಾರಿ ಕಚೇರಿಯಲ್ಲಿ ನಿರಂತರ ಜ್ಯೋತಿ ಯೋಜನೆ ಅನುಷ್ಟಾನದಲ್ಲಿನ ಲೋಪಗಳ ಕುರಿತು ಪರಿಶೀಲನಾ ಸಭೆ ನಡೆಸಿದರು.ಪೀಢರ್ ಬೇರ್ಪಡಿಸುವಿಕೆ ಕಾಮಗಾರಿಗೆ ಸಂಬಂಧಿಸಿದಂತೆ ಒಟ್ಟು 41 ಮಾರ್ಗಗಳ ಕಾಮಗಾರಿಗೆ 105 ಕೋಟಿ ರೂ. ಬಿಲ್ ಪಾಸು ಮಾಡಲಾಗಿದೆ. ಪ್ರಸ್ತುತ ಎಲ್ಲಾ ಮಾರ್ಗಗಳ ಕಾಮಗಾರಿ ಅನುಷ್ಟಾನದ ಗುಣಮಟ್ಟವನ್ನು ಪರಿಶೀಲಿಸಲಾಗುತ್ತಿದೆ. ಇದುವರೆಗೆ 28ಮಾರ್ಗಗಳ ತಪಾಸಣೆ ಕಾರ್ಯ ಪೂರ್ಣಗೊಂಡಿದ್ದು, ಈ ಕಾಮಗಾರಿಗಳಿಗೆ ಸಂಬಂಧಿಸಿದಂತೆ 71.55ಕೋಟಿ ರೂ. ಬಿಲ್ಲು ಪಾಸು ಮಾಡಲಾಗಿದೆ. ತಪಾಸಣೆಯಲ್ಲಿ ಸಾಮಾಗ್ರಿಗಳ ಖರೀದಿಯಲ್ಲಿ 4.80 ಕೋಟಿ ರೂ. ಹಾಗೂ ಕಂಬಗಳಿಗೆ ಮಾಡಲಾದ ಕಾಂಕ್ರೀಟ್‌ನಲ್ಲಿ 3.65ಕೋಟಿ ರೂ. ವ್ಯತ್ಯಾಸ ಕಂಡು ಬಂದಿದೆ. ಭದ್ರಾವತಿಯಲ್ಲಿ ಇನ್ನೂ 10 ಮಾರ್ಗಗಳ ತಪಾಸಣೆ ಕಾರ್ಯ ಬಾಕಿ ಇದ್ದು ಎಲ್ಲಾ ಮಾರ್ಗಗಳ ತಪಾಸಣೆ ಕಾರ್ಯವನ್ನು ಆದಷ್ಟು ಬೇಗನೆ ಪೂರ್ಣಗೊಳಿಸುವಂತೆ ಸಚಿವರು ಕೆಪಿಟಿಸಿಎಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಕೆಪಿಟಿಸಿಎಲ್ ಮತ್ತು ಮೆಸ್ಕಾಂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.