ನಿರಂತರ ಜಡಿ ಮಳೆಗೆ ಹೈರಾಣಾದ ಜನರು

ಕೋಲಾರ,ಜು.೨೫- ಕಳೆದ ಜೂನ್ ಮಾಹೆಯಲ್ಲಿ ಬಿಡುವು ನೀಡಿದ್ದ ಮಳೆರಾಯ, ಕಳೆದೆರಡು ದಿನಗಳಿಂದ ಜಿಲ್ಲೆಯಾದ್ಯಂತ ಅಲ್ಲಲ್ಲಿ ಧಾರಕಾರವಾದ ಮಳೆಯಾಗುತ್ತಿದೆ. ಎರಡು ದಿನಗಳಿಂದಲೂ ಮೋಡ ಕವಿದ ವಾತಾವರಣದಂತೆ ಕಂಡು ಬಂದು ತುಂತುರು ಮಳೆಯಿಂದ ಪ್ರಾರಂಭಗೊಂಡು ಹಂತ,ಹಂತವಾಗಿ ಕೆಲ ಕಾಲ ಜೋರು ಮಳೆಯಾಗಿದೆ.
ಕಳೆದೊಂದು ತಿಂಗಳಿನಿಂದ ಸಕಾಲಕ್ಕೆ ಮಳೆ ಬಾರದೆ ಬಿತ್ತನೆ ಕಾರ್ಯಕ್ಕೆ ಕುಠಿತಗೊಂಡಿತ್ತು, ನಾಲ್ಕೈದು ದಿನಗಳಿಂದ ತುಂತುರು ಮಳೆ ಅಲ್ಲಲ್ಲಿ ಆಗಿದ್ದರೂ ಅದು ಬಿತ್ತನೆಗೆ ಸಾಲದ್ದಾಗಿತ್ತು.
ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದ್ದರೂ ಅದು ಬಿತ್ತನೆಗೆ ಸಾಕಾದರೂ ಮೋಡ ಕವಿದ ವಾತಾವರಣ ಹಾಗೂ ಪದೇ ಪದೇ ಮಳೆ ಬರುತ್ತಿರುವುದರಿಂದ ಬಿತ್ತನೆ ಮಾಡಲು ಆಗುತ್ತಿಲ್ಲ.
ಕೆಲವು ಭಾಗಗಳಲ್ಲಿ ತುಂತುರು ಮಳೆಯೇ ಆಗುತ್ತಿದೆ, ಆದರೆ ಬಿತ್ತನೆಗೆ ಸಾಕಾಗುವಷ್ಟು ಮಳೆಯಾಗಿಲ್ಲ, ಕೋಲಾರ ನಗರ ಮತ್ತು ಸುತ್ತಮುತ್ತಲೂ ಭಾನುವಾರ ಮಧ್ಯಾಹ್ನದಿಂದ ಮಳೆಯಾಗುತ್ತಿದೆ, ಆದರೆ ಕೆರೆ ಕುಂಟೆಗಳು ಭರ್ತಿಯಾಗುವಷ್ಟು ಮಳೆಯಾಗಿಲ್ಲ.
ಸೋಮವಾರ ಬೆಳಗ್ಗೆಯಿಂದಲೂ ಮೋಡ ಕವಿದ ವಾತಾವರಣದ್ದಂತೆ ಕಂಡು ಬಂದಿತ್ತು, ಮಧ್ಯಾಹ್ನದ ನಂತರ ಪ್ರಾರಂಭವಾದ ಜಡಿ ಮಳೆ ರಾತ್ರಿ ೭ ಗಂಟೆಯಾದರೂ ಮುಂದುವರೆದಿತ್ತು, ಇದರಿಂದ ನಗರದಲ್ಲಿ ಸಾರ್ವಜನಿಕರ ಜೀವನ ಅಸ್ತವ್ಯಸ್ತಗೊಂಡಿತ್ತು, ಶಾಲಾ ಕಾಲೇಜುಗಳಿಂದ ವಿದ್ಯಾರ್ಥಿಗಳು ಛತ್ರಿ ಹಿಡಿದು ಮನೆ ಸೇರುವಂತಾಯಿತು, ಛತ್ರ ತರದೇ ಇದ್ದ ವಿದ್ಯಾರ್ಥಿಗಳು ಮಳೆಯಲ್ಲೇ ನೆನೆಯುತ್ತಾ ಮನೆ ಸೇರುವಂತಾಯಿತು.