ನಿರಂತರ ಅಧ್ಯಯನಶೀಲತೆಯಿಂದ ಉನ್ನತ ಸಾಧನೆ ಸಾಧ್ಯ

ಕಲಬುರಗಿ,ಏ.24: ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳು ನಾವು ಹಿಂದುಳಿದವರು, ನಮ್ಮಿಂದ ಉನ್ನತ ಸಾಧನೆ ಅಸಾಧ್ಯ ಎಂಬ ಮನೋಭಾವನೆ ಬೇಡ. ನಿರಂತರ ಅಧ್ಯಯನಶೀಲತೆ, ಸಮಯದ ಸೂಕ್ತ ಬಳಕೆ, ಬದ್ದತೆ, ಧನಾತ್ಮಕ ಚಿಂತನೆ, ಶಿಸ್ತುಬದ್ಧ ಅಧ್ಯಯನದ ಗುಣಗಳನ್ನು ಬೆಳೆಸಿಕೊಳ್ಳಬೇಕು. ಶಿಕ್ಷಕರು, ಪಾಲಕ-ಪೋಷಕರು ಸೂಕ್ತ ಮಾರ್ಗದರ್ಶನ ಮಾಡಬೇಕು. ಆಗ ನಮ್ಮ ಭಾಗದ ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ಉನ್ನತ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಉಪನ್ಯಾಸಕ, ಸಮಾಜ ಸೇವಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಶಿವ ನಗರದಲ್ಲಿರುವ ‘ಜ್ಞಾನ ಚಿಗುರು ಟ್ಯುಟೋರಿಯಲ್ಸ್’ನಲ್ಲಿ ಆಳಂದ ತಾಲೂಕಿನ ಪಡಸಾವಳಗಿ ಗ್ರಾಮದ ಅವಳಿ ಸಹೋದರಿಯರಾದ ಶ್ರೇಯಾ ಬಿ.ಕೊರಳ್ಳಿ ಶೇ.98ರಷ್ಟು ಅಂಕಗಳೊಂದಿಗೆ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 10ನೇ ರ್ಯಾಂಕ್, ಇನ್ನೊಬ್ಬ ಸಹೋದರಿ ಶೃದ್ಧಾ ಶೇ.92ರಷ್ಟು ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್‍ದೊಂದಿಗೆ ಉತ್ತೀರ್ಣರಾಗಿ ಅತ್ಯುತ್ತಮ ಸಾಧನೆ ಮಾಡಿದ ಪ್ರಯುಕ್ತ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಅವಳಿ ಸಹೋದರಿಯರಿಗೆ ಏರ್ಪಡಿಸಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಸತ್ಕಾರ ಸ್ವೀಕರಿಸಿ ಮಾತನಾಡಿದ ರಾಜ್ಯ ಟಾಪ್-10 ರ್ಯಾಂಕ್ ಸಾಧಕಿ ಶ್ರೇಯಾ ಬಿ.ಕೊರಳ್ಳಿ, ನಾನು ನಿರಂತರವಾಗಿ ಅಧ್ಯಯನ ಮಾಡುತ್ತಿದ್ದೆ. ಸಾಧಿಸಬೇಕು ಎಂಬ ಬದ್ಧತೆ ನನ್ನನ್ನು ಉನ್ನತ ಸಾಧನೆ ಮಾಡಲು ಪ್ರೇರಣೆ ನೀಡಿತು. ಅಂದಿನ ಕೆಲಸವನ್ನು ಅಂದೇ ಮಾಡುತ್ತಿದ್ದೆ. ನನ್ನ ಸಾಧನೆಗೆ ಉಪನ್ಯಾಸಕರು, ತಂದೆ-ತಾಯಿಯಯವರ ಮಾರ್ಗದರ್ಶನ, ಸಹಕಾರ ದೊರೆತಿದೆ. ನನ್ನ ತಾಲೂಕಿನ ಕೀರ್ತಿಯನ್ನು ರಾಜ್ಯ ಮಟ್ಟದಲ್ಲಿ ಹೆಚ್ಚಿಸಿದ ತೃಪ್ತಿ ನನಗಿದೆ ಎಂದು ಸಂತಸಪಟ್ಟಳು.
ಕಾರ್ಯಕ್ರಮದಲ್ಲಿ ಎಚ್.ಬಿ.ಪಾಟೀಲ, ಶಿವಯೋಗಪ್ಪ ಬಿರಾದಾರ, ಬಸವರಾಜ ಕೊರಳ್ಳಿ, ಮಲ್ಲಿಕಾರ್ಜುನ ಜಿ.ಬಂಗರಗಿ, ಶಂಭುಲಿಂಗ ವಿ.ಬಂಗರಗಿ, ಅಮರ ಜಿ.ಬಂಗರಗಿ, ವಿನಾಯಕ ಸುತಾರ, ಚಂಪಾಕಲಾ ನೆಲ್ಲೂರ ಸೇರಿದಂತೆ ಇನ್ನಿತರರು ಇದ್ದರು. ಅವಳಿ ಸಹೋದರಿಯರಿಬ್ಬರು ಉಡುಪಿಯ ವಿದ್ಯೋದಯ ಪಿಯು ಕಾಲೇಜಿನಲ್ಲಿ ಅಧ್ಯಯನ ಮಾಡಿದ್ದಾರೆ.