ನಿರಂತರವಾಗಿ ಮಾಸಿಕ ಶಿವಾನುಭವಗಳು ಜರುಗಲಿ :ಮಲ್ಲಮ್ಮ ಯಾಳವಾರ

ವಿಜಯಪುರ :ನ.24: ಆಶ್ರಮ, ಗುಡಿ-ಗುಂಡಾರಗಳಲ್ಲಿ ಸತ್ಸಂಗ, ಧ್ಯಾನ ವಿವಿಧ ಜ್ಞಾನಾರ್ಜಕ ಕಾರ್ಯಕ್ರಮಗಳು ಜರುಗುತ್ತಿರಬೇಕು. ಅಂದಾಗ ನಮ್ಮ ಸುತ್ತಲಿನ ವಾತಾವರಣ ನಿರ್ಮಲವಾಗಿರುತ್ತದೆ . ಸಾಮಾಜಿಕ ಕಲುಷಿತ ವಾತಾವರಣವನ್ನು ಶುದ್ಧಗೊಳಿಸುವಲ್ಲಿ ಮಠ-ಮಂದಿರಗಳ ಪಾತ್ರ ಅತ್ಯಂತ ಮಹತ್ವದ್ದು. ಶಂಭುಲಿಂಗ ಸ್ವಾಮೀಜಿಯವರ ಶಿವಬಸವ ಯೋಗಾಶ್ರಮದಲ್ಲಿ ನಿರಂತರವಾಗಿ ಮಾಸಿಕ ಶಿವಾನುಭವಗಳು ಜರುಗುತ್ತಿರಲಿ ಎಂದು ಸಹಕಾರ ರತ್ನ ಪ್ರಶಸ್ತಿ ಪುರಸ್ಕøತೆ ಮಲ್ಲಮ್ಮ ಯಾಳವಾರ ನುಡಿದರು.
ಅವರು ವಿಜಯಪುರ ನಗರದ ರಾಧಾಕೃಷ್ಣನ್ ಬಡಾವಣೆಯ ಶಿವಬಸವ ಯೋಗಾಶ್ರಮದಲ್ಲಿ ಹಮ್ಮಿಕೊಂಡಿದ್ದ ಸಾಧಕರಿಗೆ ಸತ್ಕಾರ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಮಹಾನಗರಪಾಲಿಕೆ ಸದಸ್ಯರಾದ ಪ್ರೇಮಾನಂದ ಬಿರಾದಾರ ಮಾತನಾಡಿ, ಜನಸೇವೆಯು ನಮಗೆ ಜನರೇ ನೀಡಿದಂತಹ ಒಂದು ಸದವಕಾಶ. ನಾನು ಜನರ ಸೇವಕನೇ ಹೊರತು ದೊಡ್ಡ ಸಾಧಕನಲ್ಲ. ನಿಮ್ಮಿಂದ ಆಗದ್ದು ನನ್ನಿಂದ ಆಗಲಿ ಎಂದು ನೀವೇ ನನ್ನನ್ನು ಚುನಾಯಿಸಿ ನಿಮ್ಮ ಪ್ರತಿನಿಧಿಯಾಗಿ ನನ್ನನ್ನು ಕಳುಹಿರುತ್ತೀರಿ. ನಿಮ್ಮ ಆಶಯಗಳೆಲ್ಲವನ್ನು ಸಾಧ್ಯವಾದಷ್ಟು ಮಟ್ಟಿಗೆ ಈಡೇರಿಸುವುದೇ ನನ್ನ ಪ್ರಾಮಾಣಿಕ ಜವಾಬ್ದಾರಿಯಾಗಿದೆ ಎಂದು ನುಡಿದರು.
ಸಾನಿಧ್ಯವನ್ನು ಶಿವಬಸವ ಯೋಗಾಶ್ರಮದ ಶಂಭುಲಿಂಗ ಸ್ವಾಮೀಜಿ ವಹಿಸಿಕೊಂಡಿದ್ದರು. ಈ ಸಾಧಕರಿಗೆ ಸತ್ಕಾರ ಕಾರ್ಯಕ್ರಮದಲ್ಲಿ ಆಶ್ರಮದ ಸದ್ಭಕ್ತರೆಲ್ಲರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ರಾಜಕೀಯ ಧುರೀಣರಾದ ಬಿ.ಎಸ್. ಪಾಟೀಲ (ಯಾಳಗಿ), ದಂತವೈದ್ಯೆ, ಸಾಹಿತಿ ಡಾ. ರೇಖಾ ಪಾಟೀಲ ಉಪಸ್ಥಿತರಿದ್ದರು. ಯು.ಎನ್. ಕುಂಟೋಜಿ ನಿರೂಪಿಸಿ ವಂದಿಸಿದರು. ಅನುರಾಧಾ, ಅನುಪಮ ಪ್ರಾರ್ಥಿಸಿದರು. ರಾಜೇಂದ್ರಕುಮಾರ್ ಬಿರಾದಾರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.