ನಿಯೋಜಿತ ಆಸ್ಪತ್ರೆಗಳಲ್ಲೇ ಒಮಿಕ್ರಾನ್ ಸೋಂಕಿತರಿಗೆ ಚಿಕಿತ್ಸೆ: ರಾಜ್ಯಗಳಿಗೆ ಕೇಂದ್ರದ ಪತ್ರ

ನವದೆಹಲಿ, ಡಿ.8- ನಿಯೋಜಿತ ಆಸ್ಪತ್ರೆಗಳಲ್ಲೇ ಒಮಿಕ್ರೋನ್ ಸೋಂಕಿತರಿಗೆ ಚಿಕಿತ್ಸೆ ನೀಡಬೇಕೆಂದು ಕೇಂದ್ರ ಸರ್ಕಾರ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಇಂದು ಬಿಡುಗಡೆ ಮಾಡಿದೆ.
ದೇಶದ ಹಲವೆಡೆ ಒಮಿಕ್ರೋನ್ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನಲೆಯಲ್ಲಿ ನಿಯೋಜಿತ ಕೋವಿಡ್ ಆಸ್ಪತ್ರೆಗಳಲ್ಲಿ ಹಾಗೂ ಐಸೋಲೇಷನ್ ಪ್ರದೇಶಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಬೇಕು ಎಂಬ ಸೂಚನೆ ಸೇರಿದಂತೆ 10 ಅಂಶಗಳ ಮಾರ್ಗಸೂಚಿಯನ್ನು ಕೇಂದ್ರ ಆರೋಗ್ಯ ಸಚಿವಾಲಯ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕಳುಹಿಸಿದೆ.
ಬೇರೆ ರೋಗಿಗಳಿಗೆ ಒಮಿಕ್ರಾನ್ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಈ ಸೂಚನೆ ನೀಡಲಾಗಿದೆ ಎಂದು ಆರೋಗ್ಯ ಇಲಾಖೆಯ ಕಾರ್ಯದರ್ಶಿ ರಾಜೇಶ್ ಭೂಷಣ್ ಎಲ್ಲ ರಾಜ್ಯಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಅಂತರರಾಷ್ಟ್ರೀಯ ಪ್ರಯಾಣಿಕರು ಒಮಿಕ್ರಾನ್‌ ಸೋಂಕಿಗೆ ಒಳಗಾದರೆ, ಅವರ ಸಂಪರ್ಕಿತರು ಮತ್ತು ಹಾಟ್‌ಸ್ಪಾಟ್‌ಗಳಿಂದ ಮಾದರಿಗಳು ಜಿನೋಮ್‌ ಸೀಕ್ವೆನ್ಸಿಂಗ್‌ಗಾಗಿ ಐಎನ್‌ಎಸ್‌ಎಸಿಒಜಿ ಪ್ರಯೋಗಾಲಯಗಳಿಗೆ ರವಾನೆಯಾಗುತ್ತಿ ರುವುದನ್ನು ನಿರಂತರ ಪರಿಶೀಲಿಸುವಂತೆ ನಿರ್ದೇಶನ ನೀಡಿದೆ.
ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಂಪರ್ಕಿತರನ್ನು ತಕ್ಷಣ ಪತ್ತೆಹಚ್ಚಿ ಹಾಗೂ ಅವರೆಲ್ಲರಿಗೂ ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳುವ ವ್ಯವಸ್ಥೆ ಕಲ್ಪಿಸುವಂತೆ ಮಾರ್ಗಸೂಚಿಯಲ್ಲಿ ವಿವರಿಸಲಾಗಿದೆ.
ಒಮಿಕ್ರಾನ್ ಸೋಂಕಿತರು ಮತ್ತು ಅವರ ಸಂಪರ್ಕಿತರನ್ನು ವಿಳಂಬ ಇಲ್ಲದೆ ಕ್ವಾರಂಟೈನ್‌ಗೆ ಒಳಪಡಿಸಬೇಕು, ಸಮುದಾಯದ ಮೇಲೆ ನಿಗಾ ವಹಿಸುವುದಕ್ಕೆ ಆದ್ಯತೆ ನೀಡಬೇಕು.
ವಾರಕ್ಕೆ ಶೇ 5ಕ್ಕಿಂತ ಅಧಿಕ ಪಾಸಿಟಿವಿಟಿ ದರ ಇರುವ ಜಿಲ್ಲೆಗಳಲ್ಲಿ ಸೂಕ್ತ ಪರೀಕ್ಷಾ ಸೌಲಭ್ಯವನ್ನು ಕಲ್ಪಿಸಬೇಕು, ಈ ವ್ಯವಸ್ಥೆ ಇಲ್ಲದಿದ್ದರೆ ಸೋಂಕು ಹರಡುವ ಮಟ್ಟವನ್ನು ಅಂದಾಜಿಸುವುದು ಕಷ್ಟವಾಗುತ್ತದೆ ಎಂದು ತಿಳಿಸಲಾಗಿದೆ.
ದೇಶದಲ್ಲಿ ಚಳಗಾಲ ಕಾಲಿಟ್ಟಿದ್ದು, ವಿಷಮ ಶೀತ ಮಾದರಿಯ ಜ್ವರ, ತೀವ್ರ ಉಸಿರಾಟದ ತೊಂದರೆಗಳಂತಹ ಸಮಸ್ಯೆಗಳೂ ಕಾಡುತ್ತವೆ. ಇಂತಹ ಕಾಯಿಲೆಗಳ ಬಗ್ಗೆಯೂ ಸೂಕ್ಷ್ಮವಾಗಿ ಮೇಲ್ವಿಚಾರಣೆ ನಡೆಸುವಂತೆಯೂ ಪತ್ರದಲ್ಲಿ ಅವರು ವಿವರಿಸಿದ್ದಾರೆ.