ನಿಯಮ ಸಡಿಲಿಕೆ ಇಲ್ಲ

ಬೆಂಗಳೂರು,ಏ.೩- ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಜಾರಿ ಮಾಡಿರುವ ಕಠಿಣ ನಿಯಮಗಳನ್ನು ಬದಲಾಯಿಸುವ ಪ್ರಶ್ನೆಯೇ ಇಲ್ಲ. ಥಿಯೇಟರ್ ರೂಲ್ಸ್ ಸೇರಿದಂತೆ ಯಾವುದೇ ನಿಯಮವನ್ನು ಸಡಿಲಿಸುವುದಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೊನಾ ೨ನೇ ಅಲೆ ಜೋರಾಗಿದೆ. ಇದನ್ನು ನಿಯಂತ್ರಿಸಲು ಬಿಗಿ ಕ್ರಮಗಳನ್ನು ಜಾರಿ ಮಾಡಿದ್ದೇವೆ. ಯಾವುದೇ ಮಾರ್ಗಸೂಚಿಗಳನ್ನು ಏಕಾಏಕಿ ಜಾರಿ ಮಾಡಿಲ್ಲ. ಇದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು ಎಂದರು.
ಕೊರೊನಾ ೨ನೇ ಅಲೆ ತಡೆಯಲು ಮಾರ್ಗಸೂಚಿ ಜಾರಿ ಮಾಡುವ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ನಿಯಮಗಳನ್ನು ಎಲ್ಲರೂ ಪಾಲಿಸಲೇಬೇಕು. ಏಕಾಏಕಿ ಈ ನಿಯಮ ಜಾರಿ ಮಾಡಿಲ್ಲ ಎಂದರು.
ರಾಜ್ಯದಲ್ಲಿ ಕೊರೊನಾ ೨ನೇ ಅಲೆ ಇನ್ನೆರೆಡು ತಿಂಗಳು ಆರ್ಭಟಿಸಲಿದೆ ಎಂದು ತಾಂತ್ರಿಕ ಸಲಹಾ ಸಮಿತಿ ಹೇಳಿದೆ. ಇದರಿಂದಾಗಿ ಪರಿಸ್ಥಿತಿ ಕೈ ಮೀರಬಾರದೆಂದು ಎಲ್ಲವನ್ನೂ ಅಳೆದುತೂಗಿ ಮಾರ್ಗಸೂಚಿಗಳನ್ನು ಜಾರಿಮಾಡಿದ್ದೇವೆ ಎಂದರು.
ರಾಜ್ಯದ ೮ ಜಿಲ್ಲೆಗಳಲ್ಲಿ ಬಿಗಿ ಕ್ರಮಗಳನ್ನು ಜಾರಿ ಮಾಡಿದ್ದೇವೆ. ಈ ೮ ಜಿಲ್ಲೆಗಳಲ್ಲಿ ಥಿಯೇಟರ್‌ಗಳಲ್ಲಿ ಶೇ. ೫೦ರಷ್ಟು ಆಸನ ಭರ್ತಿಗೆ ಅವಕಾಶ ನೀಡಲಾಗಿದೆ. ಈ ನಿಯಮವನ್ನು ಬದಲಿಸುವ ಪ್ರಶ್ನೆಯೇ ಇಲ್ಲ ಎಂದರು.
ಕೊರೊನಾ ಪರಿಸ್ಥಿತಿ ಮುಂದೆ ಕೈ ಮೀರಬಹುದು ಎಂದು ತಜ್ಞರ ಸಲಹಾ ಸಮಿತಿ ಎಚ್ಚರಿಕೆ ನೀಡಿರುವುದರಿಂದಲೇ ಥಿಯೇಟರ್‌ಗಳಿಗೆ ಹೊಸ ನಿಯಮಾವಳುಗಳನ್ನು ಜಾರಿ ಮಾಡಿ, ಜಿಮ್, ಈಜುಕೊಳಗಳನ್ನು ಬಂದ್ ಮಾಡುವ ತೀರ್ಮಾನ ಮಾಡಿದ್ದೇವೆ. ಈ ತೀರ್ಮಾನಗಳನ್ನು ಬದಲಿಸುವ ಪ್ರಶ್ನೆ ಇಲ್ಲ ಎಂದರು.