ನಿಯಮ ಮೀರಿ ವಿವಾಹ ತಡೆದ ಪೊಲೀಸರ ಮೇಲೆ ಕಲ್ಲು ತೂರಾಟ

ಚಿತ್ರದುರ್ಗ,ಏ.೨೫: ಕೋವಿಡ್ ಮಹಾಮಾರಿಯ ನಡುವೆ ಸರ್ಕಾರ ಜಾರಿಗೊಳಿಸಿರುವ ನಿಯಮವನ್ನು ಮೀರಿ ಜನರನ್ನು ಸೇರಿಸಿ ಮದುವೆ ಮಾಡುತ್ತಿದ್ದ ಮನೆಗೆ ದಾಳಿ ನಡೆಸಿದ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿರುವ ಜನರು ಪೊಲೀಸ್ ೧೧೨ ವಾಹನವನ್ನು ಜಖಂ ಗೊಳಿಸಿರುವ ಘಟನೆ ಶನಿವಾರ ರಾತ್ರಿ ತಾಲ್ಲೂಕಿನ ಬ್ಯಾಲಾಳ ಗ್ರಾಮದಲ್ಲಿ ನಡೆದಿದೆ.
ಚಿತ್ರದುರ್ಗದ ತಾಲ್ಲೂಕಿನ ಭರಮಸಾಗರ ಪೊಲೀಸ್ ಠಾಣೆ ವ್ಯಾಪ್ತಿಯ ಬ್ಯಾಲಾಳು ಗ್ರಾಮದಲ್ಲಿ ಮದು – ಪೂಜಾ ಎಂಬುವವರ ವಿವಾಹ ನಡೆಯುತ್ತಿದ್ದು, ಇದರಲ್ಲಿ ಸುಮಾರು ೫೦೦ ಕ್ಕೂ ಹೆಚ್ಚು ಜನರನ್ನು ಸೇರಿಸಿ ಮದುವೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸ್ ಸಹಾಯವಾಣಿಯ ೧೧೨ ವಾಹನದಲ್ಲಿ ಪೊಲೀಸರು ದಾಳಿ ನಡೆಸಿ ಜನರನ್ನು ಗುಂಪು ಸೇರದಂತೆ ಚದುರಿಸಲು ಮುಂದಾಗಿದ್ದಾರೆ. ಈ ನಡುವೆ ಅಲ್ಲೇ ಸೇರಿದ್ದ ಗ್ರಾಮಸ್ಥರ ಗುಂಪೊಂದು ಪೊಲೀಸರು ಹಾಗೂ ಪೊಲೀಸ್ ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದರಲ್ಲಿ ಪೊಲೀಸ್ ೧೧೨ ವಾಹನದ ಗಾಜು ಹೊಡೆದು ಜಖಂಗೊಂಡಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಚಿತ್ರದುರ್ಗ ಆಙSP ಪಾಂಡುರಂಗ ಹಾಗೂ ಭರಮಸಾಗರ ಪೊಲೀಸ್ ಠಾಣೆ ಸಿಬ್ಬಂದಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಒಬ್ಬರನ್ನು ಬಂಧಿಸಲಾಗಿದ್ದು, ಈ ಬಗ್ಗೆ ಭರಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.