ನಿಯಮ ಮೀರಿದ ಅಂಗಡಿ ಮಾಲೀಕರು ಜನರನ್ನು ವಶಕ್ಕೆ ಪಡೆದ ಪೊಲೀಸರು

ಹೊಸಪೇಟೆ ಮೇ1: ಜನತಾಕಪ್ರ್ಯೂ ನಿಯಮ ಮೀರಿ 10 ಗಂಟೆಯಾದರೂ ವ್ಯಾಪಾರ-ವಹಿವಾಟು ನಡೆಸುತ್ತಿದ್ದ ಅಂಗಡಿ ಮಾಲೀಕರಿಗೆ ಹಾಗೂ ಖರೀದಿ ಮುಗಿಸದ ಸಾರ್ವಜನಿಕರಿಗೆ ಬಿಸಿ ಮುಟ್ಟಿಸಿದ ಪೊಲೀಸರು, ಕೆಲವರನ್ನು ಠಾಣೆಗೆ ಕರೆದೊಯ್ದು ಬುದ್ದಿ ಹೇಳಿದರು.
ಬೆಳಿಗ್ಗೆ 10 ಗಂಟೆಯವರಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದ್ದರೂ ಅಂಗಡಿಗಳನ್ನು ತೆರೆದುಕೊಂಡು ವ್ಯಾಪಾರ-ವಿಹಿವಾಟು ನಡೆಸುತ್ತಿದ್ದ ಅಂಗಡಿ ಮಾಲೀಕರ ವಿರುದ್ಧ ಸಿಡಿಮಿಡಿಗೊಂಡ ಪೊಲೀಸರು, ಜೀಪ್‍ನಲ್ಲಿ ಠಾಣೆಗೆ ಕರೆದೊಯ್ದು ವಾರ್ನಿಂಗ್ ಮಾಡಿದರು. ಕೋವಿಡ್ ಪ್ರಕರಣಗಳ ಏರಿಕೆ ಪರಿಣಾಮ ಸಾವು-ನೋವು ಸಂಭವಿಸುತ್ತಿದ್ದರೂ ನಿಮಗೆ ಯಾವಾಗ ಬುದ್ದಿ ಬರುತ್ತೆ ಎಂದು ಅಂಗಡಿ ಮಾಲೀಕರಿಗೆ ತರಾಟೆ ತೆಗೆದುಕೊಂಡರು.
ಖರೀದಿ ನೆಪದಲ್ಲಿ ತಿರುಗಾಟ:
ಅಗತ್ಯ ವಸ್ತುಗಳ ಖರೀದಿ ನೆಪದಲ್ಲಿ ಜನರು ಸುಖಾ ಸುಮ್ಮನೆ ತಿರುಗಾಡುವ ದೃಶ್ಯ ಕಂಡು ಬಂದಿತು. ಕೆಲವರು ಮಾಸ್ಕ್ ಧರಿಸಿದೇ ರಸ್ತೆ ಅಕ್ಕ-ಪಕ್ಕದಲ್ಲಿ ಇರುವ ದೃಶ್ಯ ಸಾಮಾನ್ಯವಾಗಿತ್ತು. ಬೇಕಾಬಿಟ್ಟಿ ರಸ್ತೆಯಲ್ಲಿ ತಿರುಗಾಡುವ ಜನರು ಕೂಡಲೇ ಮನೆ ಸೇರಿಕೊಳ್ಳಬೇಕು ಎಂದು ಧ್ವನಿವರ್ಧಕದ ಮೂಲಕ ಎಚ್ಚರಿಕೆ ನೀಡಿದರು.
ವಿಜಯನಗರ ಸ್ತಬ್ಧ:
ಹೊಸಪೇಟೆ ಸೇರಿದಂತೆ ವಿಜಯನಗರ ಜಿಲ್ಲೆಯಲ್ಲಿ ವಾಣಿಜ್ಯ ಚಟುವಟಿಕೆಗಳು ಬಂದ್ ಆಗಿದ್ದು, ಸಂಪೂರ್ಣ ಸ್ತಬ್ಧವಾಗಿದೆ. ಮಂಗಳವಾರ ರಾತ್ರಿ 9 ಗಂಟೆಯಿಂದಲೇ ಕಫ್ರ್ಯೂ ಜಾರಿ ಮಾಡಿದ್ದು, ತಾಲೂಕಿನ ಹಾಗೂ ಜಿಲ್ಲೆಯ ಎಲ್ಲೆಡೆ ಅಂಗಡಿ ಮುಂಗಟ್ಟುಗಳು ಬಂದ್ ಆಗಿ ಜನಜೀವನ ಸಂಪೂರ್ಣ ಸ್ತಬ್ಧಗೊಂಡಿದೆ.
ಸರ್ಕಾರಿ ಸಾರಿಗೆ ಬಸ್, ಖಾಸಗಿ ವಾಹನಗಳ ಓಡಾಟ ಸಂಪೂರ್ಣ ಸ್ಥಗಿತಗೊಂಡಿದೆ. ಅಂಗಡಿ ಮುಂಗಟ್ಟುಗಳು ಬಾಗಿಲು ಮುಚ್ಚಿವೆ. ಕಫ್ರ್ಯೂ ನಿಯಮದಂತೆ 10ರವರೆಗೂ ಅವಶ್ಯ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಡಲಾಗಿದ್ದು, ಅದರಂತೆ ಜನ ಬೆಳಗ್ಗೆಯೇ ಹಾಲು, ತರಕಾರಿ ಸೇರಿದಂತೆ ಅವಶ್ಯ ವಸ್ತುಗಳ ಖರೀದಿಗೆ ಮುಗಿ ಬಿದ್ದಿದ್ದರು. ಬೆಳಗ್ಗೆ 10 ಗಂಟೆಯ ನಂತರ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಲಾಗಿದೆ. ಎಲ್ಲ ರೀತಿಯ ವಾಣಿಜ್ಯ ಚಟುವಟಿಕೆಗಳಿಗೆ ಬೀಗ ಬಿದ್ದಿದೆ.
ತುರ್ತು ಕೆಲಸ ಇರುವವರು ಮಾತ್ರ ತಮ್ಮ ಗುರುತಿನ ಚೀಟಿ ತೋರಿಸಿ ಓಡಾಡುತ್ತಿದ್ದಾರೆ. ಪೊಲೀಸರು ರಸ್ತೆಗಿಳಿಯುವ ಪ್ರತಿಯೊಬ್ಬರನ್ನು ತಪಾಸಣೆ ಮಾಡುತ್ತಿದ್ದು, ಏನೂ ಕೆಲಸ ಇಲ್ಲದೆ ರಸ್ತೆಗೆ ಬಂದವರ ಮೇಲೆ ಕೇಸ್ ದಾಖಲಿಸುವ ಮೂಲಕ ದಂಡಕ್ಕೆ ಮುಂದಾಗಿದ್ದು ಶುಕ್ರವಾರ ರಾತ್ರಿವೇಳೆಗೆ 50ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ದೃಢಪಡಿಸಿವೆ. .
ಕಡಿಮೆಯಾದ ಎಣ್ಣೆ ಪ್ರೀಯರು
ಮದ್ಯದ ಅಂಗಡಿಯಲ್ಲಿ 10 ಗಂಟೆಯವರಗೆ ಪಾರ್ಸಲ್ ಕೊಂಡೊಯ್ಯಲು ಮಾತ್ರ ಅವಕಾಶವಿರುವ ಹಿನ್ನಲೆಯಲ್ಲಿ ಬೆರಳಣಿಕೆಯ ಜನರು ಮಾತ್ರ ಬ್ರಾಂಡಿ ಅಂಗಳಿತ್ತ ಸುಳಿದಾಡುತ್ತಿದ್ದಾರೆ.