ನಿಯಮ ಪಾಲಿಸಿ ಜೀವ ರಕ್ಷಿಸಿ

ಬಂಗಾರಪೇಟೆ,ಜ. ೧೯- ಸಂಚಾರಿ ನಿಯಮಗಳು ಇರುವುದು ದಂಡ ವಸೂಲಾತಿಯ ದ್ಯುತಕವಲ್ಲ, ಅದು ಸಾರ್ವಜನಿಕರ ಜೀವ ರಕ್ಷಣೆಗೆ ಇಟ್ಟ ವ್ಯವಸ್ಥೆ, ಸಾರ್ವಜನಿಕರು ಸಂಚಾರಿ ನಿಯಮಗಳನ್ನು ಸಮರ್ಪಕ ಪಾಲನೆ ಮಾಡಿದ್ದಲ್ಲಿ ನಡೆಯಬಹುದಾದ ಅಪಘಾತಗಳನ್ನು ತಡೆಯಬಹುದು. ಇದರಿಂದ ಸಾವಿರಾರು ಜನತೆಯ ಜೀವ ರಕ್ಷಣೆಯಾಗುತ್ತದೆ. ಈ ಹಿನ್ನಲೆಯಲ್ಲಿ ಪ್ರತಿಯೊಬ್ಬರು ಸಂಚಾರಿ ನಿಯಮಗಳನ್ನು ಪಾಲಿಸಬೇಕು ಎಂದು ಬೂದಿಕೋಟೆ ಪಿಎಸ್‌ಐ ಸುನೀಲ್ ಅವರು ಅಭಿಪ್ರಾಯಪಟ್ಟರು.
ತಾಲ್ಲೂಕಿನ ಬೂದಿಕೋಟೆ ಗ್ರಾಮದಲ್ಲಿ ಆಯೋಜಿಸಲಾಗಿದ್ದ ರಸ್ತೆ ಸಂಚಾರ ಸುರಕ್ಷತಾ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಾರ್ವಜನಿಕರು ಮೊದಲನೇಯದಾಗಿ ವಾಹನ ಚಾಲನೆಗೆ ಪರವಾನಿಗೆ ಹೊಂದಿರಬೇಕು. ದೂಮಪಾನ, ಮದ್ಯಪಾನ ಮಾಡಿ ಚಾಲನೆ ಮಾಡುವುದು ಅವಘಡಕ್ಕೆ ಕಾರಣವಾಗಿರುತ್ತದೆ. ದ್ವಿಚಕ್ರ ವಾಹನ ಸವಾರರು ಖಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ತ್ರಿಬಲ್ ರೈಡ್ ಮಾಡುವುದು ಕಾನೂನುಬಾಹಿರವಾಗಿರುತ್ತದೆ. ಅತಿ ವೇಗದ ಚಾಲನೆ ಮಾಡಬಾರದು. ಏಕಮುಖ ರಸ್ತೆಗಳಲ್ಲಿ ವಿರುದ್ದವಾಗಿ ಸಂಚರಿಸಬಾರದು, ರಸ್ತೆ ನಿಯಮಗಳನ್ನು ಖಡ್ಡಾಯವಾಗಿ ಪಾಲಿಸಬೇಕು ಎಂದರು. ವೀಲಿಂಗ್ ಮಾಡುತ್ತಿರುವ ಯುವಕರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಇದರಿಂದ ಅಪಘಾತಗಳ ನಿರಂತರವಾಗಿ ಸಂಭವಿಸುತ್ತಿತ್ತು. ಇದರೊಟ್ಟಿಗೆ ಪರವಾನಿಗೆ ಇಲ್ಲದೆ ಅಪ್ರಾಪ್ತ ವಯಸ್ಕರು ವಾಹನ ಚಾಲನೆ ಮಾಡಿ ಕಿರಿಕಿರಿ ಉಂಟುಮಾಡುವುದು ಕಾನೂನು ರೀತ್ಯಾ ಅಪರಾದ. ಸಂಚಾರಿ ನಿಯಮಗಳ ಪಾಲನೆಯಿಂದ ಪ್ರಾಣಹಾನಿಗಳಂತಹ ಅವಘಡಗಳನ್ನು ತಪ್ಪಿಸುವಂತಾಗುತ್ತದೆ. ಪ್ರತಿಯೊಬ್ಬ ಸಾರ್ವಜನಿಕರು ಸಹಕರಿಸಬೇಕಾಗಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಎಎಸ್‌ಐ ಶಿವಣ್ಣ, ಸಿಬ್ಬಂದಿಗಳಾದ ಮುನಿರಾಜು, ಅಮರೇಶ್, ಮಂಜುನಾಥ್, ಹಾಗೂ ಇತರರು ಇದ್ದರು.