ನಿಯಮ ಪಾಲಿಸದ ನಾಮಫಲಕ ತೆರವು

ಭಾಲ್ಕಿ:ಮಾ.2: ಪಟ್ಟಣದಲ್ಲಿ ನಿಯಮ ಪಾಲಿಸದ ನಾಮಫಲಕಗಳನ್ನು ತೆರವುಗೊಳಿಸಲಾಯಿತು. ಅಂಗಡಿ ಮುಗ್ಗಟ್ಟುಗಳ ನಾಮಫಲಕಗಳ ಮೇಲೆ ಕನ್ನಡ ಭಾಷೆಗೆ ಅಗ್ರಸ್ಥಾನ ನೀಡುವಂತೆ ಪುರಸಭೆ ಸುತ್ತೋಲೆ ಹೊರಡಿಸಿ ಫೆ.29 ಕೊನೆಯ ಗಡುವು ನೀಡಿತು.

ಆದರೆ ಪಟ್ಟಣದ ಬಹುತೇಕ ಅಂಗಡಿ ಮುಗ್ಗಟ್ಟುಗಳ ಮಾಲೀಕರು ನಿಯಮ ಪಾಲಿಸಲಿಲ್ಲ. ಇದರಿಂದ ಪುರಸಭೆ ಅಧಿಕಾರಿಗಳು ಜೆಸಿಬಿ ರಸ್ತೆಗೀಳಿಸಿ ಶೇ.60ರಷ್ಟು ಕನ್ನಡ ಪಾಲಿಸದ ನಾಮಫಲಕ ತೆರವುಗೊಳಿಸಿದರು.

ಪಟ್ಟಣದ ಮಹಾತ್ಮ ಗಾಂಧಿ-ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತದ ರಸ್ತೆ ಸೇರಿ ಮುಂತಾದ ಕಡೆಗಳಲ್ಲಿರುವ ಅಂಗಡಿ ಮುಗ್ಗಟ್ಟುಗಳ ಮೇಲಿನ ಅನ್ಯ ಭಾಷೆ ನಾಮಫಲಕ ತೆರವುಗೊಳಿಸಲಾಯಿತು.

ಈ ಸಂದರ್ಭದಲ್ಲಿ ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಸಂಗಮೇಶ ಕಾರಬಾರಿ, ಹಿರಿಯ ಆರೋಗ್ಯ ಅಧಿಕಾರಿ ಸಂತೋಷ ಪಂಚಾಳ ಸೇರಿದಂತೆ ಹಲವರು ಇದ್ದರು.

ಪಟ್ಟಣ ಸೇರಿ ಗ್ರಾಮೀಣ ಪ್ರದೇಶದ ಎಲ್ಲ ಅಂಗಡಿ ಮುಗ್ಗಟ್ಟುಗಳ ನಾಮಫಲಕಗಳ ಮೇಲೆ ಕನ್ನಡ ಭಾಷೆಗೆ ಅಗ್ರಸ್ಥಾನ ನೀಡುವಂತೆ ಹಲವು ದಿನಗಳಿಂದ ನಿರಂತರವಾಗಿ ಹೋರಾಟ ಮಾಡಿಕೊಂಡು ಬರಲಾಗುತ್ತಿದೆ. ಸಭೆಗಳನ್ನು ನಡೆಸಿ ಕೊನೆಯ ಗಡುವು ಕೂಡ ನೀಡಲಾಗಿತ್ತು. ಆದರೆ ಕೆಲ ಅಂಗಡಿ ಮಾಲೀಕರು ನಿಯಮ ಪಾಲಿಸದ ಹಿನ್ನೆಲೆಯಲ್ಲಿ ಪುರಸಭೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಜೆಸಿಬಿ ಮೂಲಕ ನಾಮಫಲಕ ತೆರವುಗೊಳಿಸಲು ಮುಂದಾಗಿರುವುದು ಸ್ವಾಗತಾರ್ಹ.

  • ಗಣೇಶ ಪಾಟೀಲ್ ತಾಲೂಕು ಅಧ್ಯಕ್ಷರು ಕರವೇ ಭಾಲ್ಕಿ