ನಿಯಮ ಪಾಲಿಸದಿದ್ದರೆ ಕೊರೊನಾ ಸ್ಫೋಟ ಸುಧಾಕರ್ ಕಳವಳ


ಬೆಂಗಳೂರು. ಮಾ.೨೪- ಕೊರೊನಾ ಸೋಂಕು ತಡೆಗೆ ನಿಯಮಗಳನ್ನು ಪಾಲಿಸದಿದ್ದರೆ ಸೋಂಕು ಸ್ಫೋಟ ನಿಶ್ಚಿತ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ.ಸುಧಾಕರ್ ಕಳವಳ ವ್ಯಕ್ತಪಡಿಸಿದ್ದಾರೆ.
ಕೇಂದ್ರದಿಂದ ೧೨ ಲಕ್ಷ ಲಸಿಕೆಗಳನ್ನು ಪಡೆಯಲಿದ್ದೇವೆ. ಆರಂಭದಲ್ಲಿ ಇದ್ದ ಸಣ್ಣಪುಟ್ಟ ಸಮಸ್ಯೆಗಳು ನಿವಾರಣೆಯಾಗಿದೆ. ರಾಜ್ಯದ ಗಡಿಯಲ್ಲಿ ಕಠಿಣ ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧಾರ್ಮಿಕ, ಜಾತ್ರೆ, ಸಮಾರಂಭ, ರಾಜಕೀಯ ಕಾರ್ಯಕ್ರಮಗಳಿಗೆ ಒಂದು ತಿಂಗಳು ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಮುಂದಿನ ದಿನಗಳು ಕಷ್ಟವಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಮಠ ಮಾನ್ಯಗಳು, ದೇವಾಲಯದ ಪ್ರಮುಖರು ತಮ್ಮ ಸಮುದಾಯಕ್ಕೆ ಸಂದೇಶ ನೀಡಿ ರಾತ್ರಿ ಸಮಾರಂಭಗಳಿಗೆ ಜನರು ಬರದಂತೆ ಮನವಿ ಮಾಡಬೇಕು ಎಂದರು.
ಕೆಲವು ಚಲನಚಿತ್ರ ತಾರೆಯರು ಸಿನಿಮಾ ಪ್ರಚಾರಕ್ಕಾಗಿ ಸಾವಿರಾರು ಜನರನ್ನು ಸೇರಿಸುವುದನ್ನು ಗಮನಿಸಿದ್ದೇನೆ. ಸ್ಟಾರ್ ನಟರಿಗೂ ಸಾಮಾಜಿಕ ಜವಾಬ್ದಾರಿ ಇದೆ. ನೀವು ಮಾಸ್ಕ್ ಧರಿಸಿ ನಿಮ್ಮ ಅಭಿಮಾನಿಗಳಿಗೂ ಮಾಸ್ಕ್ ಧರಿಸುವಂತೆ ಸೂಚಿಸಿ ಎಂದು ಅವರು ಮನವಿ ಮಾಡಿದರು.
ಏ. ೧ ರಿಂದ ೪೫ ವರ್ಷ ಮೇಲ್ಪಟ್ಟವರೆಲ್ಲರೂ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಿ ಎಂದು ಅವರು ಸಲಹೆ ಮಾಡಿದರು.